Advertisement
ಎಂತಹ ಬಿಸಿಲಿಗೂ ತಾಳಿಕೊಳ್ಳುವ, ಸುದೀರ್ಘ 20 ವರ್ಷಕ್ಕೂ ಅಧಿಕ ಕಾಲ ಫಲ ಕೊಡುವ ಸಾಧಾರಣ ಎತ್ತರದ ಗಿಡದಲ್ಲಿ ಸುವಾಸನೆ ಭರಿತ, ವಿಶಿಷ್ಟ ಸ್ವಾದದ ಈ ಹೊಸ ಬೋರೇಹಣ್ಣು, ಗಿಡ ನೆಟ್ಟ ಆರು ತಿಂಗಳಲ್ಲಿಯೇ ಫಲ ನೀಡಲು ಆರಂಭಿಸಿದೆ. ಪ್ರತಿ ಗಿಡದ ಟೊಂಗೆ ಟೊಂಗೆಯಲ್ಲಿ ಹತ್ತಾರು ಬೃಹತ್ ಗಾತ್ರದ ಹಣ್ಣು ಬಿಟ್ಟಿದ್ದು ಬರದ ಕತ್ತಲಿನ ನಡುವೆ ಸಮೃದ್ಧಿಯ ಬೆಳಕು ಕಾಣಿಸುತ್ತಿದೆ. ರವೀಂದ್ರ ಅವರದ್ದು ಇದೇ ಪ್ರದೇಶದಲ್ಲಿ ಅಂಜೂರ ತೋಟವಿದೆ. ಇದರ ಮಾರ್ಕೆಟ್ ಹೈದ್ರಾಬಾದ್, ಬೆಂಗಳೂರು, ಚೆನ್ನೈ. ಕಳೆದ ವರ್ಷ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ರವೀಂದ್ರ ಹೊಸ ಬೋರೆ ಹಣ್ಣಿನ ಕೃಷಿಗೆ ಮುಂದಾದರು. ಯಶಸ್ಸು ಗಳಿಸಿದರು.ಆ್ಯಪಲ್ ಬೋರೆ ಸ್ವಾದಿಷ್ಟ ಹುಳಿ ಮಿತ್ರ ಸಿಹಿ ರುಚಿ ಹೊಂದಿದ್ದು, ಸಾಕಷ್ಟು ಆಹ್ಲಾದಕರ ಸುವಾಸನೆ ಹೊಂದಿದೆ. ವೃದ್ಧಾಪ್ಯದಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಲlಮೇರ್ ನ್ಯೂನತೆಯನ್ನು ಸರಿಪಡಿಸುವ ಗುಣ ಈ ಹಣ್ಣು ಹೊಂದಿದೆ. ಬುದ್ಧಿಶಕ್ತಿ ಬೆಳೆಸಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದೊಂದು ಉತ್ತಮ ಹಣ್ಣು ಎನ್ನುವುದರಿಂದಲೇ ಬೇಡಿಕೆ ಹೆಚ್ಚು.
ರವೀಂದ್ರ ಗುತ್ತಿಗೆ ಪಡೆದ ಜಮೀನಿನಲ್ಲಿ ಪ್ರತಿ 10*12 ಅಡಿಗೆ ಒಂದರಂತೆ ಪ್ರತಿ ಎಕರೆಗೆ 350 ಬೋರೆ ಗಿಡ ನೆಟ್ಟಿದ್ದಾರೆ (ಆರು ಎಕರೆಗೆ 2100 ಗಿಡ). ಹೈದರಾಬಾದ್ ನರ್ಸರಿಯಿಂದ ತರಿಸಿರುವ ಪ್ರತಿ ಸಸಿಗೆ ತಲಾ 35ರೂ. ಖರ್ಚು. ಹನಿ ನೀರಾವರಿ ಸೇರಿದಂತೆ ಆರಂಭಿಕ ಎಕರೆಗೆ 75-80 ಸಾವಿರ ರೂಗಳನ್ನು ವೆಚ್ಚ ಮಾಡಿದ್ದಾರೆ. ಇದು ಮೊದಲ ವರ್ಷ. ಪ್ರತಿ ಗಿಡದಿಂದ 25-30 ಕಿಲೋ ಬೋರೆಹಣ್ಣು ದೊರೆಯುತ್ತಿದೆ. ಅಂದರೆ 2,100 ಗಿಡದಿಂದ, 25 ರೂನಂತೆ ಇಟ್ಟು ಕೊಂಡರೂ ಹೆಚ್ಚು ಕಡಿಮೆ ಎರಡು ಲಕ್ಷದಷ್ಟು ಆದಾಯ. ಮುಂದಿನ ವರ್ಷಗಳಲ್ಲಿ 50-100 ಕಿಲೋಗಳಿಗೆ ಏರಲಿದೆ. ಇದೇ ಹಣ್ಣಿನ ವಿಶೇಷ ಗುಣ. ಹೈದರಾಬಾದ್ ಇದರ ಮಾರುಕಟ್ಟೆ. ಈ ಹಣ್ಣನ್ನು ಕೊಯ್ಲು ಮಾಡುವುದು ಸುಲಭ. ಇದರಿಂದ ಕಡಿಮೆ ಮಾನವ ಶ್ರಮ ಬೇಡುತ್ತದೆ ಎನ್ನುತ್ತಾರೆ ರವೀಂದ್ರ. ಈಗಾಗಲೇ ಮಾಳಾಪುರದಲ್ಲಿ 10, ಎಮ್ಮಿಗನೂರು, ಕಂಪ್ಲಿ ಪ್ರದೇಶದಲ್ಲಿ 5 ಎಕರೆ ಜಮೀನಿನಲ್ಲಿ ಆ್ಯಪಲ್ ಬೋರೆ ನಾಟಿ ಮಾಡಲಾಗಿದೆ. ರೈತರಿಗೆ ಇಲಾಖೆಯ ವತಿಯಿಂದ ಅಗತ್ಯವಿರುವ ಎಲ್ಲ ನೆರವನ್ನೂ ನೀಡಲಾಗುತ್ತಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಚಿದಾನಂದಪ್ಪ. – ಎಂ.ಮುರಳಿ ಕೃಷ್ಣ