Advertisement

ಪಾಲಿಕೆ ಕೊಳವೆಬಾವಿಗಳು ಜಲಮಂಡಳಿಗೆ ವರ್ಗ

12:23 PM Sep 18, 2022 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ತನ್ನ ಸುಪರ್ದಿಯಲ್ಲಿರುವ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಲು ಮುಂದಾಗಿದೆ.

Advertisement

ಬೇಸಿಗೆಯಲ್ಲಿ ಕಾವೇರಿ ನೀರಿನ ಕೊರತೆ ಉಂಟಾಗಿ ನಗರದಲ್ಲಿ ಎದುರಾಗುವ ನೀರಿನ ಸಮಸ್ಯೆ ನೀಗಿಸಲು ಜಲಮಂಡಳಿ ಬೋರ್‌ವೆಲ್‌ಗ‌ಳ ಮೊರೆ ಹೋಗುತ್ತದೆ. ಆದರೆ, ಬಿಬಿಎಂಪಿ ಸುಪರ್ದಿಯಲ್ಲಿರುವ ಕೊಳವೆಬಾವಿಗಳ ನಿರ್ವಹಣೆ ಸರಿಯಾಗಿಲ್ಲದ ಕಾರಣ ಕೆಲವೊಮ್ಮೆ ಅಲ್ಲಿಂದಲೂ ನೀರು ಪೂರೈಕೆ ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಬಿಬಿಎಂಪಿ ತನ್ನ ಸುಪರ್ದಿಯಲ್ಲಿರುವ ಕೊಳವೆಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಲು ತೀರ್ಮಾನಿಸಿದೆ.

ಜತೆಗೆ ನಿರ್ವಹಣೆಗಾಗಿ ಪಾಲಿಕೆಯಿಂದ 40 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ. ಬೆಂಗಳೂರಿಗೆ ಪ್ರತಿದಿನ 1,450 ಎಂಎಲ್‌ಡಿ ನೀರಿನ ಅವಶ್ಯಕತೆಯಿದೆ. ಸದ್ಯ ಈ ನೀರನ್ನು ಕಾವೇರಿ 1ರಿಂದ 4ನೇ ಹಂತದ ಯೋಜನೆಯಿಂದ ಪೂರೈಸಲಾಗುತ್ತದೆ. ಬೇಸಿಗೆಯಲ್ಲೂ ಬಹುತೇಕ ಕಾವೇರಿ ನದಿ ನೀರನ್ನೇ ಬೆಂಗಳೂರು ನೆಚ್ಚಿಕೊಂಡಿದೆ. ಆದರೆ, ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಇನ್ನೂ ಸಮರ್ಪಕವಾಗಿ ಕಾವೇರಿ ನೀರು ಸಂಪರ್ಕ ನೀಡದ ಕಾರಣ, ಆ ಭಾಗಕ್ಕೆ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಅದರಲ್ಲಿ ಬಿಬಿಎಂಪಿಯ ಕೊಳವೆಬಾವಿಗಳೂ ಸೇರ್ಪಡೆಯಾ ಗಿದೆ. ಆದರೆ, ಬಿಬಿಎಂಪಿಯ ಕೊಳವೆ ಬಾವಿಗಳನ್ನು ಸಮರ್ಪಕ ನಿರ್ವಹಣೆ ಮಾಡಲಾಗದ ಕಾರಣ, ಅವುಗಳಿಂದ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೊಳವೆಬಾವಿಗಳ ನಿರ್ವಹಣೆಯ ಹೊಣೆಯನ್ನು ಜಲಮಂಡಳಿಗೆವಹಿಸಲಾಗುತ್ತಿದೆ.

10 ಸಾವಿರ ಕೊಳವೆಬಾವಿಗಳು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ಹಾಗೂ ಜಲಮಂಡಳಿಗೆ ಸೇರಿದ 10,316 ಕೊಳವೆಬಾವಿಗಳಿವೆ. ಅದರಲ್ಲಿ ಬಿಬಿಎಂಪಿಗೆ ಸೇರಿದ 8,691 ಹಾಗೂ ಜಲಮಂಡಳಿಯ 1,625 ಬೋರ್‌ವೆಲ್‌ಗ‌ಳಿವೆ. ಬಿಬಿಎಂಪಿಯ ಕೊಳವೆಬಾವಿಗಳಲ್ಲಿ 7,198 ಕಾರ್ಯನಿರ್ವಹಿಸುತ್ತಿದ್ದಂತೆ, 1,493 ಕೊಳವೆಬಾವಿಗಳಿಂದ ನೀರು ಹೊರತೆಗೆಯಲಾಗದ ಪರಿಸ್ಥಿತಿಯಿದೆ. ಅದೇ ರೀತಿ ಜಲಮಂಡಳಿಯ ಕೊಳವೆ ಬಾವಿಗಳ ಪೈಕಿ 1,436 ನೀರು ಪೂರೈಕೆ ಸ್ಥಿತಿಯಲ್ಲಿದ್ದರೆ, 189 ಕಾರ್ಯನಿರ್ವಹಿಸುತ್ತಿಲ್ಲ. ಒಟ್ಟಾರೆ 8,634 ಕೊಳವೆಬಾವಿಗಳು ಕೆಲಸ ಮಾಡುತ್ತಿದ್ದರೆ, 1,682 ಕೊಳವೆಬಾವಿಗಳ ಮೋಟಾರು ಹಾಳಾಗಿರುವುದು, ನೀರು ಬರದಿರುವ ಸ್ಥಿತಿಯಲ್ಲಿವೆ. ಅವುಗಳಲ್ಲಿ ಮೋಟಾರು ಹಾಳಾಗಿರುವ ಕೊಳವೆಬಾವಿಗಳನ್ನು ದುರಸ್ತಿ ಮಾಡುವ ಹೊಣೆ ಜಲಮಂಡಳಿಯದ್ದಾಗಿದೆ.

ಬಿಬಿಎಂಪಿಯಿಂದ 40 ಕೋಟಿ ರೂ.: ನಿರ್ವಹಣೆ ಸಾಧ್ಯವಾಗದೆ ಕೊಳವೆಬಾವಿಗಳನ್ನು ಹಸ್ತಾಂತರಿಸುತ್ತಿ ರುವ ಬಿಬಿಎಂಪಿ ಅದರ ಜತೆಗೆ ಜಲಮಂಡಳಿಗೆ ಹಣವನ್ನೂ ನೀಡುತ್ತಿದೆ. ಬೋರ್‌ವೆಲ್‌ಗ‌ಳನ್ನು ನಿಯಮಿತ ಅವಧಿಯಲ್ಲಿ ಪರಿಶೀಲಿಸುವುದು, ಅವುಗಳ ಮೋಟಾರು ಕೆಲಸ ಮಾಡುತ್ತಿವೆಯೇ ಎಂಬುದನ್ನು ಪರೀಕ್ಷಿಸುವ ಕೆಲಸ ಜಲಮಂಡಳಿ ಮಾಡಲಿದೆ. ಅದಕ್ಕಾಗಿ ಬಿಬಿಎಂಪಿ ಜಲಮಂಡಳಿಗೆ ವಾರ್ಷಿಕ 40 ಕೋಟಿ ರೂ. ಹಣವನ್ನು ನೀಡಲಿದೆ. ಈಗಾಗಲೆ ಬಿಬಿಎಂಪಿ ಜಲಮಂಡಳಿಗೆ ಹಣ ವರ್ಗಾಯಿಸಿದ್ದು, ಕೊಳವೆಬಾವಿಗಳ ಹಸ್ತಾಂತರ ಪ್ರಕ್ರಿಗೆ ಚಾಲನೆಯನ್ನೂ ನೀಡಿದೆ. ಕೊಳವೆ ಬಾವಿ ಪಡೆಯುವ ಜಲಮಂಡಳಿ ಬಿಬಿಎಂಪಿ ವ್ಯಾಪ್ತಿ ಯಲ್ಲಿ ಇನ್ನೂ ಕಾವೇರಿ ನೀರು ಸಂಪರ್ಕ ಸಿಗದ ಪ್ರದೇಶಗಳಿಗೆ ಕೊಳವೆಬಾವಿಯಿಂದ ಟ್ಯಾಂಕರ್‌ಗೆ ನೀರು ತುಂಬಿಸಿ ಪೂರೈಸಲಿದೆ. ಅದರಲ್ಲೂ 110 ಹಳ್ಳಿ ವ್ಯಾಪ್ತಿ ಯಲ್ಲಿ ಅಗತ್ಯವಿರುವಲ್ಲಿ ಉಚಿತವಾಗಿ ನೀರು ಸರಬ ರಾಜು ಮಾಡಬೇಕಿದೆ. ಹಾಗೆಯೇ, ಬಿಬಿಎಂಪಿ ಉದ್ಯಾನ ಸೇರಿ ಇನ್ನಿತರ ಕಡೆಗಳಿಗೆ ನೀರು ಪೂರೈಸಬೇಕಿದೆ.

Advertisement

ಹೆಚ್ಚುವರಿ ಕೆಲಸದಿಂದ ಮುಕ್ತಿ : ನಗರದಲ್ಲಿ ಮೂಲಸೌಕರ್ಯ ಒದಗಿಸುತ್ತಿರುವ ಬಿಬಿಎಂಪಿ ಕೊಳವೆಬಾವಿ ನಿರ್ವಹಣೆ ಹೆಚ್ಚುವರಿ ಕೆಲಸವಾಗಿತ್ತು. ಕೊಳವೆಬಾವಿಗಳ ಮೋಟಾರನ್ನು ಕಾಲಕಾಲಕ್ಕೆ ಪರಿಶೀಲಿಸುವುದು, ನೀರು ಪೂರೈಕೆಗಾಗಿ ಬೇಡಿಕೆ ಬರುವಲ್ಲಿಗೆ ನೀರು ಪೂರೈಸುವ ಕೆಲಸ ಮಾಡಬೇಕಿತ್ತು. ಆದರೆ, ಕೊಳವೆಬಾವಿಗಳನ್ನೆಲ್ಲ ಜಲಮಂಡಳಿಗೆ ವಹಿಸುತ್ತಿರುವುದರಿಂದ ಆ ಕೆಲಸಗಳು ಜಲಮಂಡಳಿ ಹೆಗಲಿಗೆ ಬಿದ್ದಂತಾಗಿದೆ.

ನಿರ್ವಹಣೆ ಸೇರಿ ಇನ್ನಿತರ ಕಾರ್ಯಕ್ಕಾಗಿ ಬಿಬಿಎಂಪಿ ಸುಪರ್ದಿಯಲ್ಲಿದ್ದ ಕೊಳವೆಬಾವಿಗಳನ್ನು ಜಲಮಂಡಳಿಗೆ ವಹಿಸಲಾಗುತ್ತಿದೆ. ಅಲ್ಲದೆ ಕೊಳವೆಬಾವಿಗಳ ನಿರ್ವಹಣೆಗಾಗಿ ಬಿಬಿಎಂಪಿಯಿಂದ ಜಲಮಂಡಳಿಗೆ 40 ಕೋಟಿ ರೂ. ನೀಡಲಾಗಿದೆ. ತುಷಾರ್‌ ಗಿರಿನಾಥ್‌, ಬಿಬಿಎಂಪಿ ಮುಖ್ಯ ಆಯುಕ್ತ

 

ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next