Advertisement

ಉಭಯ ಗಡಿಯಲ್ಲಿ ಸಿಡಿದೆದ್ದ ಭಾರತ; ಪಾಕ್‌ ಬಂಕರ್‌ ಧ್ವಂಸ

03:55 AM Jul 10, 2017 | |

ಶ್ರೀನಗರ/ನವದೆಹಲಿ: ಚೀನಾದ ಉದ್ಧಟತನಕ್ಕೆ ಸವಾಲು ಹಾಕುತ್ತಿರುವ ನಡುವೆಯೇ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನಕ್ಕೂ ಭಾರತ ತಕ್ಕ ಪಾಠ ಕಲಿಸುತ್ತಿದೆ. ಶನಿವಾರ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಯೋಧ ಮತ್ತು ಅವರ ಪತ್ನಿಯ ಸಾವಿಗೆ ಕಾರಣವಾಗಿದ್ದ ಪಾಕಿಸ್ತಾನಕ್ಕೆ ಭಾನುವಾರ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಇಬ್ಬರು ಪಾಕ್‌ ಸೈನಿಕರನ್ನು ಹತ್ಯೆಗೈದಿದೆ.ಎಲ್‌ಒಸಿಯಲ್ಲಿದ್ದ ಪಾಕ್‌ನ ಬಂಕರ್‌ ಅನ್ನೂ ಧ್ವಂಸಗೊಳಿಸಿದೆ.

Advertisement

ಪಾಕ್‌ನ ಶೆಲ್‌ ದಾಳಿಗೆ ಪ್ರತೀಕಾರವಾಗಿ ಭಾನುವಾರ ಗುಂಡಿನ ದಾಳಿ ನಡೆಸಿದ ಯೋಧರು, ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಗಿಂತ ಕೆಲವೇ ಮೀಟರ್‌ ದೂರದಲ್ಲಿರುವ ಪಾಕ್‌ ಬಂಕರ್‌ ಅನ್ನು ನಾಶಪಡಿಸಿದೆ. ಈ ಕುರಿತ ವಿಡಿಯೋ ಮಾಧ್ಯಮಗಳಿಗೆ ಸಿಕ್ಕಿದೆ. ಅಲ್ಲದೆ, ಪಿಒಕೆಯಲ್ಲಿನ ಪಾಕ್‌ ಸೇನಾನೆಲೆಯ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ಇಬ್ಬರು ಸೈನಿಕರನ್ನು ಹತ್ಯೆಗೈಯ್ಯಲಾಗಿದೆ. ಈ ವೇಳೆ 6 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, ಪಾಕ್‌ನ 24 ಫ್ರಂಟಿಯರ್‌ ಯುನಿಟ್‌ನ ಮೆಸ್‌ ಕೂಡ ಧ್ವಂಸಗೊಂಡಿದೆ. ಇದೇ ವೇಳೆ, ಭಾನುವಾರ ಮತ್ತೆ ಪಾಕ್‌ ಕದನ ವಿರಾಮ ಉಲ್ಲಂ ಸಿದ್ದು, ಖಾಡಿ ಕರ್ಮಾರಾ ಮತ್ತು ದಿವ್‌ಗಡವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್‌, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಸೇನೆ ಹೇಳಿದೆ.

ಶನಿವಾರ ಪಾಕ್‌ ಪಡೆಯು ಅಪ್ರಚೋದಿತವಾಗಿ ಎಲ್‌ಒಸಿಯುದ್ದಕ್ಕೂ 8 ಕಡೆಗಳಲ್ಲಿ ಶೆಲ್‌ ದಾಳಿ ನಡೆಸಿತ್ತು. ಶೆಲ್‌ವೊಂದು ಪೂಂಛ… ಜಿಲ್ಲೆಯ ಮನೆಯೊಂದರ ಮೇಲೆ ಬಿದ್ದ ಪರಿಣಾಮ, ಯೋಧ ಶೌಕತ್‌ ಮತ್ತು ಅವರ ಪತ್ನಿ ಸಫಿಯಾಬೀ ಅಸುನೀಗಿದ್ದರು. ಅವರ ಮೂವರು ಮಕ್ಕಳು ಗಾಯಗೊಂಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ದಾಳಿ ಆರಂಭಿಸಿತ್ತು.

2ನೇ ಬಾರಿ ಪ್ರತಿಭಟನೆ ಸಲ್ಲಿಕೆ:
ಪ್ರತಿ ಬಾರಿ ಕದನ ವಿರಾಮ ಉಲ್ಲಂ ಸಿದ ಬಳಿಕವೂ ಭಾರತದ ಮೇಲೆ ಗೂಬೆ ತೂರಿಸುವ ಪಾಕಿಸ್ತಾನ, ಶನಿವಾರದ ಗುಂಡಿನ ದಾಳಿ ವೇಳೆಯೂ ಇದನ್ನೇ ಮುಂದುವರಿಸಿತ್ತು. ಭಾರತದ ಡೆಪ್ಯೂಟಿ ಹೈಕಮಿಷನರ್‌ ಜೆ.ಪಿ.ಸಿಂಗ್‌ ಅವರನ್ನು ಕರೆಸಿಕೊಂಡು ಪಾಕ್‌ ಸೇನೆಯು ಪ್ರತಿಭಟನೆ ಸಲ್ಲಿಸಿತ್ತು. ಭಾನುವಾರ ಮತ್ತೂಮ್ಮೆ ಸಿಂಗ್‌ರನ್ನು ಕರೆಸಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ. ಭಾರತದ ದಾಳಿಯಿಂದಾಗಿ ಪಿಒಕೆಯಲ್ಲಿ ನಾಗರಿಕರು ಸಾವಿಗೀಡಾಗುತ್ತಿದ್ದಾರೆ. ಭಾರತವು ಶನಿವಾರ ನಡೆಸಿದ ದಾಳಿಗೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಪಾಕ್‌ ವಿದೇಶಾಂಗ ಇಲಾಖೆ ಹೇಳಿದೆ.

ಒತ್ತಡಕ್ಕೆ ಮಣಿಯದೆ ಸಿಕ್ಕಿಂ ಗಡಿಯಲ್ಲಿ ಟೆಂಟ್‌
ನವದೆಹಲಿ:
ಹಠಮಾರಿ ಚೀನಾಕ್ಕೆ ಭಾರತ ಅಷ್ಟೇ ದಿಟ್ಟತನದಿಂದಲೇ ಎದಿರೇಟು ನೀಡುತ್ತಿದೆ.
ಸಿಕ್ಕಿಂ ಗಡಿಯಲ್ಲಿನ ಹಾಗೂ ಭೂತಾನ್‌ಗೆ ಸಮೀಪದ ಸಂಗಮ ಪ್ರದೇಶ ಡೋಕ್ಲಾಮ್‌ನಿಂದ ಸೇನೆಯನ್ನು ಹಿಂದಕ್ಕೆ ಪಡೆಯಿರಿ ಎನ್ನುತ್ತಿದ್ದ ಚೀನಾ ಬೆದರಿಕೆಯ ನಡುವೆಯೇ ಭಾರತ ಸೇನಾಪಡೆ ಭಾನುವಾರ ಡೋಕ್ಲಾಮ್‌ನಲ್ಲಿ ಟೆಂಟ್‌ ಹಾಕಿದೆ. ಈ ಮೂಲಕ ಚೀನಾದ ಯಾವುದೇ ಸವಾಲನ್ನೂ ಎದುರಿಸಲು ಸಿದ್ಧ ಎನ್ನುವ ಸಂದೇಶ ರವಾನಿಸಿದೆ. ಅಷ್ಟೇ ಅಲ್ಲ, ಸೇನೆಯನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಕರೆಯಿಸಿಕೊಳ್ಳುವುದಿಲ್ಲ ಎನ್ನುವ ನಿರ್ದಾಕ್ಷಿಣ್ಯ ಉತ್ತರವನ್ನು ನೀಡಿದೆ.

Advertisement

ಚೀನಾ ರಾಯಭಾರಿ ಕಚೇರಿ ಅಧಿಕಾರಿಯೊಬ್ಬರು ಸಿಕ್ಕಿಂ ಗಡಿವಿವಾದಕ್ಕೆ ಸಂಬಂಧಿಸಿ ಶನಿವಾರ ಮೂರು ಷರತ್ತು ವಿಧಿಸಿದ್ದರ ಬೆನ್ನಿಗೇ ಇದೀಗ ಭಾರತ ತನ್ನ ಗಡಿ ಕಾಪಾಡಿಕೊಳ್ಳುವಲ್ಲಿ ಕ್ರಮಕ್ಕೆ ಹಿಂಜರಿಯದೇ ಇರಲು ನಿರ್ಧರಿಸಿದೆ. ಅಷ್ಟೇ ಅಲ್ಲ, ಭಾರತದ ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಆರ್ಮಿ ಹಿರಿಯ ಅಧಿಕಾರಿಯೊಬ್ಬರು, “ಟೆಂಟ್‌ ಹಾಕಿರುವುದರ ಹಿಂದೆ ಚೀನಾವನ್ನು ಪ್ರಚೋದಿಸುವ ಉದ್ದೇಶವೇನಿಲ್ಲ ಅಥವಾ ಚೀನಾ ಮೇಲೆ ಇನ್ನಾವುದೇ ಒತ್ತಡ ಹಾಕುವ ಉದ್ದೇಶವೂ ಇಲ್ಲ’ ಎಂದಿದ್ದಾರೆ.

ಗಡಿಯಲ್ಲಿ ಈ ತನಕ ಮಾಡಿರುವ ಕ್ಯಾತೆಗೆ ಸಂಬಂಧಿಸಿ, “ಯಾವುದೇ ಕಾರಣಕ್ಕೂ ಸಂಧಾನಕ್ಕೆ ಮುಂದಾಗುವ ಸಾಧ್ಯತೆಯೇ ಇಲ್ಲ ಎಂದು ಚೀನಾ ಖಡಾಖಂಡಿತವಾಗಿ ಹೇಳಿರುವುದು ಹಾಗೂ ಚೆಂಡು ಭಾರತದ ಅಂಗಳದಲ್ಲಿದೆ’ ಎಂದಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಸೇನೆಗೆ ಇನ್ನಷ್ಟು ಬಲ ತುಂಬಲು ಟೆಂಟ್‌ ಹಾಕಿದೆ ಎಂದು ಹೇಳಲಾಗಿದೆ.

ರಕ್ಷಣೆ, ಸುರಕ್ಷತೆಗೆ ಆತಂಕ ಬೇಡ
ಸಿಕ್ಕಿಂ ಗಡಿಯಲ್ಲಿ ಉದ್ಭವಿಸುತ್ತಿರುವ ಪ್ರಕ್ಷುಬ್ಧ ಪರಿಸ್ಥಿತಿಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಸಿಕ್ಕಿಂ ಸರ್ಕಾರ “ರಾಷ್ಟ್ರೀಯ ಹೆದ್ದಾರಿ 10ಕ್ಕೆ ತಾಗಿಕೊಂಡಿರುವ ಸಿಕ್ಕಿಂ ಜನತೆ ಆತಂಕ ಪಡಬೇಕಾಗಿಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೊಂದಿಗೆ ಈ ಬಗ್ಗೆ ಚರ್ಚಿಸಿದೆ. ರಕ್ಷಣೆ ಹಾಗೂ ಸುರಕ್ಷತೆ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸೂಕ್ತ ಕ್ರಮ ಕೈಗೊಳ್ಳಲಿದೆ. ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಿದ್ದಾರೆ’ ಎಂದು ಸ್ವತಃ ಮುಖ್ಯಮಂತ್ರಿ ಪವನ್‌ ಕುಮಾರ್‌ ಟ್ವೀಟ್‌ ಮೂಲಕ ಈ ಸಂದೇಶ ರವಾನಿಸಿದ್ದಾರೆ. ಇವೆಲ್ಲದರ ಜತೆಗೆ ಗೂರ್ಖಾಲ್ಯಾಂಡ್‌ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿಯೂ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next