Advertisement
2020ರಲ್ಲಿ ಇಲ್ಲೇ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ 2ನೇ ಇನ್ನಿಂಗ್ಸ್ ನಲ್ಲಿ ಕೇವಲ 36 ರನ್ನಿಗೆ ಆಲೌಟಾಗಿ ತನ್ನ ಟೆಸ್ಟ್ ಇತಿಹಾಸದಲ್ಲೇ ಕನಿಷ್ಠ ಮೊತ್ತ ದಾಖಲಿಸಿತ್ತು. ಆ ಪಂದ್ಯದ ಹೀನಾಯ ಸೋಲಿನ ಅನಂತರ ತಿರುಗಿಬಿದ್ದಿದ್ದ ಭಾರತ ಸರಣಿಯನ್ನೇ 2-1ರಿಂದ ಜಯಿಸಿತ್ತು. ಸದ್ಯ ಭಾರತ ಬೋರ್ಡರ್-ಗಾವಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 295 ರನ್‌ಗಳಿಂದ ಸೋಲಿಸಿದ ಆತ್ಮವಿಶ್ವಾಸದಲ್ಲಿದೆ. ಗಾಯ ಗೊಂಡ ಹುಲಿಯಂತಾಗಿರುವ ಆಸ್ಟ್ರೇಲಿಯಾ ತಿರುಗಿಬೀಳುವ ತೀವ್ರ ಹಂಬಲದಲ್ಲಿದೆ.
ಪಂದ್ಯದ ಮುನ್ನಾದಿನವಾದ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮ, ಈ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಯಶಸ್ವಿ ಜೈಸ್ವಾಲ್ ಜತೆಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ತಾನು ಮಧ್ಯಮ ಕ್ರಮಾಂಕದಲ್ಲಿ (ಬಹುಶಃ 6ನೇ ಕ್ರಮಾಂಕ) ಆಡುತ್ತೇನೆ. ಪರ್ತ್ ಟೆಸ್ಟ್ ನಲ್ಲಿ ಯಶಸ್ವಿಯಾಗಿರುವ ಜೋಡಿಯನ್ನು ಬದಲಿಸಲು ತಾನು ಬಯಸುವುದಿಲ್ಲ, ನನಗೆ ಗೆಲುವು ಮಾತ್ರ ಮುಖ್ಯ ಎಂದಿದ್ದಾರೆ. ಅವರು ತಮ್ಮ ಆರಂಭಿಕ ಸ್ಥಾನವನ್ನು ತ್ಯಾಗ ಮಾಡುವ ಮೂಲಕ ತಂಡವೇ ಮುಖ್ಯ ಎಂಬ ಸಂದೇಶವನ್ನು ನೀಡಿದ್ದಾರೆ. ಪರ್ತ್‌ನಲ್ಲಿ ರಾಹುಲ್-ಜೈಸ್ವಾಲ್ ಜೋಡಿ ಮೊದಲ ವಿಕೆಟ್‌ಗೆ 201 ರನ್ ಜತೆಯಾಟವಾಡಿದ್ದು ತಂಡದ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.
Related Articles
ಎರಡನೇ ಮಗುವಿನ ತಂದೆಯಾಗಿದ್ದ ಹಿನ್ನೆಲೆಯಲ್ಲಿ ರೋಹಿತ್ ಮೊದಲ ಟೆಸ್ಟ್ ನಲ್ಲಿ ಆಡಿರಲಿಲ್ಲ. ಶುಭಮನ್ ಗಿಲ್ ಗಾಯಾಳಾಗಿದ್ದರಿಂದ ಪಂದ್ಯಕ್ಕೆ ಗೈರಾಗಿದ್ದರು. ಇವರಿಬ್ಬರಿಗಾಗಿ ಧ್ರುವ ಜುರೆಲ್, ದೇವದತ್ತ ಪಡಿಕ್ಕಲ್ ಸ್ಥಾನ ಬಿಡಬೇಕಾಗುತ್ತದೆ. ಈ ಪಂದ್ಯದಲ್ಲೂ ಅಶ್ವಿನ್, ಜಡೇಜ ಆಡುವ ಸಾಧ್ಯತೆಯಿಲ್ಲ. ವೇಗಿ ಹರ್ಷಿತ್ ರಾಣಾ, ಆಲ್‌ರೌಂಡರ್ ನಿತೀಶ್ ರೆಡ್ಡಿಯೇ ಮುಂದುವರಿಯಬಹುದು. ಅಂಕಣ ಸ್ಪಿನ್‌ಗೂ ತುಸು ನೆರವು ನೀಡುವುದರಿಂದ ಅಂತಿಮ ಹಂತದಲ್ಲಿ ಜಡೇಜ-ಅಶ್ವಿನ್‌ರಲ್ಲಿ ಒಬ್ಬರಿಗೆ ಸ್ಥಾನ ಸಿಕ್ಕರೂ ಸಿಗಬಹುದು.
Advertisement
ಭಾರತ ತಂಡಕ್ಕೆ ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ ಇಬ್ಬರೂ ಲಯದಲ್ಲಿರುವ ಸಂಭ್ರಮವಿದೆ. ಆದರೆ ರೋಹಿತ್ ಶರ್ಮ ಕಳಪೆ ಲಯದಲ್ಲಿದ್ದಾರೆ. ಗಿಲ್ ಹೇಗೆ ಆಡುತ್ತಾರೆ ಎಂಬ ಪ್ರಶ್ನೆಯಿದೆ. ಆಸೀಸ್‌ಗೆ ಹಲವು ಚಿಂತೆ
ಪರ್ತ್ ಟೆಸ್ಟ್‌ನಲ್ಲಿ ಸೋತಿರುವ ಆಸ್ಟ್ರೇಲಿ ಯಾಕ್ಕೆ ಹಲವು ಚಿಂತೆಗಳಿವೆ. ಪರ್ತ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ, ಅಡಿಲೇ ಡ್‌ನಲ್ಲಿ ಯಾವಾಗಲೂ ಮಿಂಚುವ ಜೋಶ್ ಹೇಝಲ್‌ವುಡ್ ಗಾಯಗೊಂಡಿದ್ದು ಈ ಪಂದ್ಯದಲ್ಲಿ ಆಡುವುದಿಲ್ಲ. ಅವರ ಬದಲಿಗೆ ಇನ್ನೊಬ್ಬ ಘಾತಕ ವೇಗಿ ಸ್ಕಾಟ್ ಬೋಲ್ಯಾಂಡ್ ಆಡಲಿದ್ದಾರೆ. ಬ್ಯಾಟಿಂಗ್‌ನಲ್ಲಿ ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್ ಒದ್ದಾಡುತ್ತಿದ್ದಾರೆ. ಹೊಸಬ ಮೆಕ್‌ಸ್ವೀನಿಗೂ ಒತ್ತಡವಿದೆ. ಬ್ಯಾಟಿಂಗ್ ಕೈಕೊಟ್ಟಿದ್ದರಿಂದಲೇ ಪರ್ತ್‌ನಲ್ಲಿ ಆಸೀಸ್ ಸೋತಿದೆ. ಆಲ್‌ರೌಂಡರ್ ಮಿಚೆಲ್ ಮಾರ್ಷ್ ಗಾಯ ಗೊಂಡಿರುವುದರಿಂದ ಅವರು ಬೌಲಿಂಗ್ ಮಾಡುವ ಖಚಿತತೆಯಿಲ್ಲ. ಭಾರತಕ್ಕೆ ಮುಸ್ಸಂಜೆ ಬೆಳಕಿನ ಸವಾಲು
ಅಡಿಲೇಡ್ ಹಗಲುರಾತ್ರಿ ಪಂದ್ಯದ ಮುಸ್ಸಂಜೆ ಹೊತ್ತಿನಲ್ಲಿ ಬ್ಯಾಟರ್‌ಗಳಿಗೆ ಬಹುದೊಡ್ಡ ಸವಾಲಿದೆ. ಮುಖ್ಯವಾಗಿ ಭಾರತೀಯ ಬ್ಯಾಟರ್‌ಗಳು ಈ ಹೊತ್ತಿನಲ್ಲಿ ಪರದಾಡುವ ಸಾಧ್ಯತೆಯಿದ್ದು ಈ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಇಂದಿನ ಆಟಕ್ಕೆ ಮಳೆಯಡ್ಡಿ ಸಾಧ್ಯತೆ
ಹವಾಮಾನ ತಜ್ಞರ ಮುನ್ಸೂಚನೆಯಂತೆ ಶುಕ್ರವಾರ ಪಂದ್ಯಕ್ಕೆ ಮಳೆಯಿಂದ ತೊಂದರೆಯಾಗುವ ಸಾಧ್ಯತೆಯಿದೆ. ಅಡಿಲೇಡ್‌ನಲ್ಲಿ ಗುಡುಗು ಸಹಿತ ಮಳೆ ಬರುವ ಸಾಧ್ಯತೆ ಶೇ.40ರಷ್ಟಿದೆ. ಅಂಕಣಗುಟ್ಟು
ಅಡಿಲೇಡ್ ಅಂಕಣ ವೇಗಕ್ಕೆ ನೆರವು ನೀಡುವ ಸಾಧ್ಯತೆಯಿದೆ. ರಾತ್ರಿ ಹೊತ್ತು ನಡೆಯುವುದರಿಂದ ವೇಗಿಗಳು ಹೆಚ್ಚು ನೆರವು ಪಡೆಯಲಿದ್ದಾರೆ. ಬ್ಯಾಟಿಂಗ್‌ಗೆ ಬಹಳ ಸವಾಲಾಗುವ ಸಾಧ್ಯತೆಯಿದೆ. ಕ್ಯುರೇಟರ್ ಪ್ರಕಾರ ಅಂಕಣ ಸ್ಪಿನ್ ಮತ್ತು ಬ್ಯಾಟಿಂಗ್‌ಗೂ ನೆರವು ನೀಡಲಿದೆ. ಸಂಭಾವ್ಯ ತಂಡಗಳು
ಭಾರತ:
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ (ನಾಯಕ), ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಜಸ್‌ಪ್ರೀತ್ ಬುಮ್ರಾ, ಮೊ. ಸಿರಾಜ್. ಆಸ್ಟ್ರೇಲಿಯ:
ನಥನ್ ಮೆಕ್‌ಸ್ವೀನಿ, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಥನ್ ಲಿಯೋನ್, ಸ್ಕಾಟ್ ಬೋಲ್ಯಾಂಡ್. ಪಂದ್ಯಾರಂಭ: ಬೆಳಗ್ಗೆ 9.30 (ಭಾರತೀಯ ಕಾಲಮಾನ) ನೇರಪ್ರಸಾರ: ಸ್ಟಾರ್‌ನ್ಪೋರ್ಟ್ಸ್