ಹೊಸದಿಲ್ಲಿ : ಚೀನಕ್ಕೆ ಬುದ್ಧಿ ಬಂದಿದೆ. ಕೊನೆಗೂ ಭಾರತದ ಶಾಂತಿ ತತ್ವವೇ ಗೆದ್ದಿದೆ. ಚೀನ ಪಡೆಗಳು ಎಲ್‌ಎಸಿ ಸಮೀಪದ ಗಲ್ವಾನ್ ತೀರ ದಿಂದ 2 ಕಿ.ಮೀ. ಹಿಂದಕ್ಕೆ ಸರಿದಿವೆ. ಪಿಪಿ 14, ಪಿಪಿ 15, ಪಿಪಿ 17 ಪ್ರದೇಶಗಳಿಂದ ಚೀನ ಸೇನೆ ಹಿಂದಡಿ ಇಟ್ಟಿದೆ. ಆದರೆ ಪಿಎಲ್‌ಎ ಸುಮಾರು 100 ಟ್ಯಾಂಕರ್ ಹಾಗೂ ಫಿರಂಗಿಗಳನ್ನು ಇಷ್ಟು ದಿನ ಸೇನೆ ನಿಯೋಜನೆಗೊಂಡಿದ್ದ ಜಾಗದಲ್ಲಿಯೇ ಬಿಟ್ಟು ಹೋಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. “ಗಲ್ವಾನ್ ತೀರದಿಂದ ಚೀನ ಸೈನಿಕರನ್ನು, ದೋಣಿಗಳನ್ನು ತುಂಬಿಕೊಂಡ 20 ಟ್ರಕ್‌ಗಳು ವಾಪಸ್ ಹೋಗಿವೆ. ಎಲ್‌ಎಸಿ ಬಳಿಗೆ ಮೊದಲು ಬಂದವರು ಅವರು. ಹಾಗಾಗಿ ಮೊದಲು ಅವರೇ ಹಿಂದಕ್ಕೆ ಹೋಗಬೇಕು’ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
ಬೇಗ ಪರಿಹಾರ?: ರಾಜತಾಂತ್ರಿಕ ಮಟ್ಟದಲ್ಲಿ ಕೆಲವು ಮಾತುಕತೆಗಳ ನಂತರ, ಜುಲೈ ವೇಳೆಗೆ ಗಡಿ ಬಿಕ್ಕಟ್ಟಿಗೆ ಸ್ಪಷ್ಟ ಪರಿಹಾರ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಲಡಾಖ್ ಗಡಿಯಲ್ಲಿ ವಿವಾದದ ಕಾರ್ಮೋಡ ಕವಿದು ಈಗಾಗಲೇ 1 ತಿಂಗಳು ಕಳೆದಿದೆ. ಈ ಹಿಂದೆ 2017ರಲ್ಲಿ ಡೋಕ್ಲಾಮ್ ಬಿಕ್ಕಟ್ಟು 73 ದಿನಗಳ ನಂತರ ಶಮನಗೊಂಡಿತ್ತು.
ಲಡಾಖ್ ಗಡಿಯಲ್ಲಿ ಮತ್ತೂಂದು ಮಾತುಕತೆ
ಲಡಾಖ್‌ನ ಗಡಿಯಲ್ಲಿ ಭಾರತ- ಚೀನ ನಡುವೆ ಇನ್ನೊಂದು ಮಹತ್ವದ ಮಾತುಕತೆ ಏರ್ಪಡುವ ಸಾಧ್ಯತೆ ಇದೆ. “ಚುಶುಲ್ ಪಾಯಿಂಟ್‌ನ ಮಿಲಿಟರಿ ತಂಡ ಈ ಮಾತುಕತೆಗೆ ಸಿದ್ಧತೆ ನಡೆಸುತ್ತಿದ್ದು, ಅತೀ ಶೀಘ್ರದಲ್ಲಿ ಮಾತುಕತೆ ನಡೆಯಲಿದೆ’ ಎಂದು ಸೇನೆಯ ಮೂಲಗಳು ತಿಳಿಸಿವೆ.