Advertisement

ಗಡಿ ಅತಿಕ್ರಮಣ: ಚೀನಾ ನಿರ್ಮಿತ ವಸ್ತು ಬಹಿಷ್ಕರಿಸಿ

04:13 PM Aug 02, 2017 | Team Udayavani |

ಚಾಮರಾಜನಗರ: ಚೀನಾ ದೇಶವು ಭಾರತದ ಗಡಿಯನ್ನು ಅತಿಕ್ರಮಿಸುವ ಯತ್ನ ನಡೆಸುತ್ತಿದೆ. ಅಲ್ಲದೇ ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ. ಆದ್ದರಿಂದ ಚೀನಾದಲ್ಲಿ ತಯಾರಿಸಿದ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸಬೇಕು ಎಂದು ಸ್ವದೇಶಿ ಸುರಕ್ಷಾ ಅಭಿಯಾನದ ರಾಜ್ಯ ಸಹ ಸಂಚಾಲಕ ಮಂಜುನಾಥ್‌ ಹೇಳಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚೀನಾದಲ್ಲಿ ತಯಾರಾದ ವಸ್ತುಗಳನ್ನು ಬಹಿಷ್ಕರಿಸುವ ಪ್ರತಿಯೊಬ್ಬರ ಪುಟ್ಟ ಹೆಜ್ಜೆ ಭಾರತ ಸರ್ಕಾರವನ್ನು ಬಲಗೊಳಿಸುತ್ತದೆ. ಹೀಗಾಗಿ ಸ್ವದೇಶಿ ಜಾಗರಣ ಮಂಚ್‌ನ ಚೀನಾ ವಸ್ತುಗಳನ್ನು ಬಹಿಷ್ಕರಿಸುವ “ರಾಷ್ಟ್ರೀಯ ಸ್ವದೇಶಿ- ಸುರಕ್ಷಾ ಅಭಿಯಾನ’ವನ್ನು ಬೆಂಬಲಿಸಬೇಕು ಎಂದರು.

ನಾವು ಬಳಸುವ ಚೀನಾದ ಪ್ರತಿ ವಸ್ತುವೂ ಗಡಿ ಕಾಯುವ ಸೈನಿಕನ ಆತ್ಮಸ್ಥೈರ್ಯವನ್ನು ಕಂಗೆಡಿಸುತ್ತದೆ. ನಮ್ಮದೇ ದೇಶದ ಗ್ರಾಮೀಣ ಕುಶಲಕರ್ಮಿಯೊಬ್ಬನ ಕುಟುಂಬವನ್ನು ಉಪವಾಸ ಕೆಡವುತ್ತದೆ. ಹೀಗಾಗಿ ಪ್ರತಿ ಭಾರತೀಯರೂ ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ಚೀನಾ ದೇಶಕ್ಕೆ ಬುದ್ಧಿ ಕಲಿಸುವ ಕಾಲ ಬಂದಿದೆ ಎಂದರು.

ಅಭಿಯಾನ: ಆ.6ರಂದು ಸ್ವದೇಶಿ ಜಾಗರಣ ಮಂಚ್‌ನಿಂದ ರಾಜ್ಯ ವ್ಯಾಪಿ ಚೀನಾ ವಸ್ತುಗಳನ್ನು ಬಹಿಷ್ಕರಿಸೋಣ, ರಾಷ್ಟ್ರವನ್ನು ಉಳಿಸೋಣ ಅಭಿಯಾನ ಆರಂಭಿಸಿ, ಶಾಲಾ, ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕರಿಗೆ ಜಾಗೃತಿ  ಮೂಡಿಸಲಾಗುವುದು. ಅಕ್ಟೋಬರ್‌ 29ರ ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಬೃಹತ್‌ ರ್ಯಾಲಿ ನಡೆಸಲಾಗುವುದು ಎಂದರು.

ದೇಶದೆಲ್ಲೆಡೆ ಚೀನಾ ದೇಶದ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಆಗ್ರಹ ವ್ಯಾಪಕವಾಗುತ್ತಿದೆ. ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಸಾಮಾಜಿಕ  ಜಾಲತಾಣಗಳಲ್ಲೂ ಸಾವಿರಾರು ಜನ ಚರ್ಚೆಗೆ ಇಳಿದಿದ್ದಾರೆ. ಸಿನಿಮಾ ಕಲಾವಿದರೂ ಧ್ವನಿಗೂಡಿಸಿದ್ದಾರೆ ಎಂದರು. 

Advertisement

ಪಾಕಿಸ್ತಾನದ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಚೀನಾ ನಮ್ಮ ಶತ್ರು ರಾಷ್ಟ್ರ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಸ್ವದೇಶಿ ವಸ್ತುಗಳನ್ನು ಬಳಸುವಂತೆ ಜಾಗೃತಿ ಮೂಡಿಸಲು ರಾಷ್ಟ್ರಾದ್ಯಂತ ಆಂದೋಲನವನ್ನು  ನಡೆಸಲಾಗುತ್ತದೆ ಎಂದು ತಿಳಿಸಿದರು.

ಭಾರತದ ವಿರುದ್ಧ ಪಿತೂರಿ: ವ್ಯಾಪಾರ- ಉದ್ಯಮದ ವಿಷಯ ಮಾತ್ರವಲ್ಲ.  ಚೀನಾ ಭಾರತದ ಆಂತರಿಕ ಸುರಕ್ಷೆ, ಗಡಿ ರಕ್ಷಣೆಯ ವಿಷಯದಲ್ಲಿಯೂ ನಿರಂತರವಾಗಿ ಹಸ್ತಕ್ಷೇಪ ನಡೆಸುತ್ತಿದೆ. ಚೀನಾ ನಿರಂತರವಾಗಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿ, ಭಯೋತ್ಪಾದಕರಿಗೆ ತಂತ್ರಜಾnನ ತರಬೇತಿ ನೀಡುತ್ತಲೇ ಬಂದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತದ ವಿರುದ್ಧ ಪಿತೂರಿ ಮಾಡುತ್ತದೆ.  ದೇಶದ ಪರ ವಾದಕ್ಕೆ ಪ್ರತಿವಾದವನ್ನು ಮಾಡುತ್ತಾ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತಕ್ಕೆ ಹಿನ್ನಡೆಯಾಗುವಂತೆ ಮಾಡುತ್ತಿದೆ. ಇಂಥ ರಾಷ್ಟ್ರ  ತಯಾರು ಮಾಡುವ ವಸ್ತುಗಳನ್ನು ಹಣ ಕೊಟ್ಟು ಖರೀದಿಸಿ, ಅವರಿಗೆ ಲಾಭ ಮಾಡಿಕೊಟ್ಟು ನಮ್ಮ ಮೇಲೆ ಯುದ್ಧ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಹೀಗಾಗಿ ರಾಷ್ಟ್ರ ಪ್ರೇಮಿಗಳಾದ ನಾವು ಸ್ವದೇಶಿ ಆಂದೋಲನವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು. ವಿಎಚ್‌ಪಿಯ ಮೈಸೂರು ವಿಭಾಗೀಯ ಕಾರ್ಯದರ್ಶಿ ರಾ.ಸತೀಶ್‌ಕುಮಾರ್‌, ಬಿಜೆಪಿ ಮಾಧ್ಯಮ ಸಹ ಪ್ರಮುಖ್‌ ಮಂಜುನಾಥ್‌, ಎಬಿವಿಪಿ ಸಂಘಟನೆ ನೂತನ್‌ ಸುರೇಶ್‌ ಸುದ್ದಿಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next