Advertisement

ಚುನಾವಣಾ ಅಕ್ರಮಗಳ ತಡೆಗೆ ಗಡಿ ಚೆಕ್‌ಪೋಸ್ಟ್‌ ಜಾಲ; ಈಗಾಗಲೇ 171 ತಪಾಸಣಾ ವ್ಯವಸ್ಥೆ ಸ್ಥಾಪನೆ

11:06 PM Mar 26, 2023 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯನ್ನು “ಅಕ್ರಮ ಮುಕ್ತ’ ಮಾಡಲು ಚುನಾವಣಾ ಆಯೋಗ ಪಣತೊಟ್ಟಿದೆ. ಅದಕ್ಕಾಗಿ ರಾಜ್ಯದ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳ “ಜಾಲ’ ಹೆಣೆದಿದೆ.

Advertisement

ಯಾವ ಕ್ಷಣದಲ್ಲಾದರೂ ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆ ಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಅದರಂತೆ ಈಗಾಗಲೇ ಕಾರ್ಯರಂಗಕ್ಕಿಳಿದಿರುವ ಚುನಾವಣಾ ಆಯೋಗ ರಾಜ್ಯಾದ್ಯಂತ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ತರುವ ಹಾಗೂ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ 19 ಜಿಲ್ಲೆಗಳಲ್ಲಿ ಗಡಿ ಭಾಗ ಹೊಂದಿರುವ ನೆರೆಯ ಆರು ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಬರೊಬ್ಬರಿ 171 ಚೆಕ್‌ಪೋಸ್ಟ್‌ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಅವುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಗೋವಾಗಳಿಂದ ಕರ್ನಾಟಕವನ್ನು ಪ್ರವೇಶಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಗಡಿ ಭಾಗಗಳಲ್ಲಿ ಬರುವ ರಾಜ್ಯದ ಜಿಲ್ಲೆಗಳಲ್ಲಿ ಅಂತರರಾಜ್ಯ ಗಡಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ವಾಹನಗಳ ಸಂಚಾರ, ಅನುಮಾನಾಸ್ಪದ ಆಗಮನ-ನಿರ್ಗಮನಗಳ ಮೇಲೆ ಕಣ್ಣಿಡಲಾಗಿದೆ. ಅಂತರರಾಜ್ಯ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯಾಚರಣೆಗೆ ಸಹಕರಿಸುವಂತೆ ನೆರೆ ರಾಜ್ಯಗಳ ಪೊಲೀಸ್‌ ಹಾಗೂ ಇತರೆ ಅಧಿಕಾರಿಗಳೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಪತ್ರ ವ್ಯವಹಾರ ನಡೆಸಿದ್ದಾರೆ.

ದಿನದ 24 ಗಂಟೆ ಕಾವಲು:
ಈಗಾಗಲೇ ಸ್ಥಾಪಿಸಲಾಗಿರುವ 171 ಅಂತರರಾಜ್ಯ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ರಾಜ್ಯ ಪೊಲೀಸರು, ಕಂದಾಯ ಗುಪ್ತಚರ ನಿರ್ದೇಶನಾಲಯ, ರಾಜ್ಯ ಜಿಎಸ್‌ಟಿ ವಿಭಾಗ, ಕೇಂದ್ರ ಜಿಎಸ್‌ಟಿ ವಿಭಾಗ, ಕರಾವಳಿ ಕಾವಲು ಪಡೆ, ಇಡಿ, ಏರ್‌ಪೋರ್ಟ್‌, ಪರೋಕ್ಷ ತೆರಿಗೆ ಮತ್ತು ಸುಂಕ ಕೇಂದ್ರ ಮಂಡಳಿ (ಸಿಬಿಐಸಿ) ಸೇರಿದಂತೆ ಚುನಾವಣಾ ನೀತಿ ಸಂಹಿತೆ ಜಾರಿ ಸಂಸ್ಥೆಗಳು ಮತ್ತು ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ನಿಯೋಜಿಸಲಾಗಿದೆ. ಗಡಿ ಹೊಂದಿರುವ ರಾಜ್ಯದ ಸಂಬಂಧಪಟ್ಟ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಟವಿ ಕ್ಯಾಮರಾಗಳು ಅಳವಡಿಸಲಾಗಿದ, ವಿಶೇಷ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಅದೇ ರೀತಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ದಿನ 24 ಗಂಟೆ ಕಾವಲು ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಗಿ ತಪಾಸಣೆ:
ಗಡಿ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರತಿ ದಿನ ಬರುವ ಸರ್ಕಾರಿ ವಾಹನಗಳ ಸಂಖ್ಯೆಯೆಷ್ಟು, ಖಾಸಗಿ ವಾಹನಗಳು, ಟೂರಿಸ್ಟ್‌ ವಾಹನಗಳ ಸಂಖ್ಯೆ ಎಷ್ಟು, ವಾಣಿಜ್ಯ ಸರಕು ಸಾಗಾಣಿಕೆ ವಾಹನಗಳು ಎಷ್ಟು, ಈ ಅವಧಿಯಲ್ಲಿ ಅದರಲ್ಲಿ ಹೆಚ್ಚಳ ಆಗಿದೆಯಾ ಎಂದು ಚೆಕ್‌ಪೋಸ್ಟ್‌ಗಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ನೆರೆ ರಾಜ್ಯ ಗ ಳಿಂದ ಬಂದು ಹೋಗು ವ ವರ ಸಂಖ್ಯೆ ಮೇಲೂ ನಿಗಾ ಇಡ ಲಾ ಗಿದೆ. ನೆರೆ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರತಿ ದಿನ ಬರುವ ಅಗತ್ಯ ವಸ್ತುಗಳು, ಎಲೆಕ್ಟ್ರಾನಿಕ್‌ ಹಾಗೂ ಇತರೆ ಗೃಹ ಬಳಕೆ ಮತ್ತು ವಾಣಿಜ್ಯ ಸರಕುಗಳಲ್ಲಿ ಹೆಚ್ಚಳವಾಗಿದ್ದಲ್ಲಿ ಸೂಕ್ತ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಟ್ಟುನಿಟ್ಟಿನ ತಪಾಸಣೆ ನಡೆಸಿ ಚುನಾವಣಾ ಅಕ್ರಮಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

Advertisement

-ರಫೀಕ್‌ ಅಹ್ಮದ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next