Advertisement

ಕೈನಲ್ಲಿ ಕಾಣಿಸಿಕೊಂಡ ಬೂತ್‌ ಭಿನ್ನಮತ

12:31 PM Aug 11, 2017 | Team Udayavani |

ಧಾರವಾಡ: ಕಳೆದ ತಿಂಗಳಷ್ಟೇ ಅವಳಿ ನಗರದ ಎಲ್ಲ ಬೂತ್‌ ಮಟ್ಟದ ಪದಾಧಿಕಾರಿಗಳ ಹಾಜರಿ ಪಡೆದು ದೊಡ್ಡ ಸಮಾವೇಶ ಮಾಡಿದ್ದ ಕಾಂಗ್ರೆಸ್‌ನಲ್ಲಿ ಇದ್ದಕ್ಕಿದ್ದಂತೆ ಭಿನ್ನಮತ ನ್ಪೋಟಗೊಂಡಿದ್ದು, ಇದೀಗ ಕಾಂಗ್ರೆಸ್‌ನಲ್ಲಿನ ಹಾಲಿ ಮಾಜಿಗಳ ನಡುವೆ ಇರುವ ಗುದ್ದಾಟಕ್ಕೆ ಬೂತ್‌ ಸಮಾವೇಶವೇ ವೇದಿಕೆಯಾಯಿತು. 

Advertisement

ಗುರುವಾರ ನಗರದಲ್ಲಿ ಹು-ಧಾ ಮಹಾನಗರ ಕಾಂಗ್ರೆಸ್‌ ಸಮಿತಿಯ ರಾಣಿಚನ್ನಮ್ಮ ಮತ್ತು ನವನಗರ ಬ್ಲಾಕ್‌ ಸಮಿತಿಯ ಬೂತ್‌ಮಟ್ಟದ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ಯಂ ಟ್ಯಾಗೋರ್‌ ಎದುರಿನಲ್ಲಿಯೇ ಪಕ್ಷದಲ್ಲಿನ ಆಂತರಿಕ ಕಚ್ಚಾಟ ನಡೆದು, ಮಾಜಿ ಶಾಸಕರು, ಸಚಿವರು ಮತ್ತು ಹಾಲಿ ಪದಾಧಿಕಾರಿಗಳ ಮಧ್ಯ ಪರಸ್ಪರ ಮಾತಿನ ಚಕಮಕಿ, ವಾಗ್ವಾದ ನಡೆಯಿತು. 

ಆರಂಭದಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಸಮಾವೇಶದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ ತಮ್ಮ ಭಾಷಣ ಆರಂಭ ಮಾಡುತ್ತಿದ್ದಂತೆಯೇ ಮಾಜಿ ಸಚಿವ ಎಸ್‌.ಆರ್‌. ಮೋರೆ ಬೆಂಬಲಿಗ ಬಸವರಾಜ ಮಲಕಾರಿ ಎಂಬಾತ ವೇದಿಕೆಗೆ ಏರಿ, ನಾವು ಮಾಡಿರುವ ಬೂತ್‌ ಅಧಿಕೃತವಾಗಿದೆ. ಈ ಸಮಾವೇಶ ಏರ್ಪಡಿಸಿರುವ ಬೂತ್‌ ಡಮ್ಮಿ ಇದೆ ಎಂಬುದಾಗಿ ದೂರಿದರು. 

ಈ ವೇಳೆ ಮಲಕಾರಿ ಅವರ ಮನವಿ ಆಲಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ಯಂ ಟ್ಯಾಗೋರ್‌, ನಂತರದಲ್ಲಿ ಬಸವರಾಜ ಮಾತನ್ನು ತಳ್ಳಿ ಹಾಕಿದರಲ್ಲದೇ, ಈ ವಿಷಯವನ್ನು ಸಂಬಂಧಪಟ್ಟ ಸ್ಥಳೀಯ ನಾಯಕರೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು. ಆದರೆ ಇದಕ್ಕೆ ಸುಮ್ಮನಾಗದ ಬಸವರಾಜ, ತಾವು ಮಾಡಿದ ಸದಸ್ಯತ್ವದ ದಾಖಲಾತಿ ತೋರಿಸುತ್ತಿದ್ದಂತೆ ವೇದಿಕೆಯಲ್ಲಿದ್ದ ಪಾಲಿಕೆ ಸದಸ್ಯ ದೀಪಕ ಚಿಂಚೊರೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ಅಶಿಸ್ತು ಸಹಿಸಲ್ಲ ಎಂದ ಮಾಣಿಕ್ಯಂ: ಈ ಘಟನೆಯಿಂದ ಇಡೀ ಸಮಾವೇಶದ ಹಳಿ ತಪ್ಪುತ್ತಿರುವುದನ್ನು ಅರಿತ ಮಾಜಿ ಸಚಿವ ವೀರುಕುಮಾರ ಪಾಟೀಲ ತಮ್ಮ ಭಾಷಣ ಮೊಟಕುಗೊಳಿಸಿ, ಮಾಣಿಕ್ಯಂ ಅವರನ್ನು ಭಾಷಣಕ್ಕೆ ಆಹ್ವಾನಿಸಿದರು. ನಂತರ ಮಲಕಾರಿ ಅವರನ್ನು ವೇದಿಕೆಯಿಂದ ಆಚೆಗೆ ಕರೆದೊಯ್ದರು. 

Advertisement

ಸಮಾವೇಶದಲ್ಲಿ ಈ ರೀತಿ ಗೊಂದಲ ಉಂಟಾಗಿದ್ದರಿಂದ ಸಿಡಿಮಿಡಿಗೊಂಡ ಮಾಣಿಕ್ಯಂ, ಪಕ್ಷದಲ್ಲಿ ಅಶಿಸ್ತಿನಿಂದ ವರ್ತಿಸಿದವರನ್ನು ಯಾವುದೇ ಮುಲಾಜಿಲ್ಲದೇ ಹೊರ ಹಾಕಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದರು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ, ಭಿನ್ನಾಭಿಪ್ರಾಯವಿಲ್ಲ. ಟಿಕೆಟ್‌ ಪಡೆಯಲು ಸ್ಪರ್ಧೆ ನಡೆಸುವುದು ಸಹಜವಾಗಿದೆಂದು ಮಾಜಿ ಸಚಿವ ಮೋರೆ ಹಾಗೂ ಪಾಲಿಕೆ ಸದಸ್ಯ ದೀಪ ಚಿಂಚೋರೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next