ಅರಸೀಕೆರೆ: ಕೊರೊನಾ ವಿರುದ್ಧ ನಮ್ಮ ಹೋರಾಟವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದ ಮೇರೆಗೆ 60ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತಿದೆ. ಪ್ರತಿಯೊಬ್ಬರು ತಪ್ಪದೇ ಲಸಿಕೆ ಪಡೆದು ರೋಗ ನಿಯಂತ್ರಣಕ್ಕೆಸಹಕರಿಸಬೇಕೆಂದು ಟಿಎಚ್‌ಒ ಡಾ.ತಿಮ್ಮರಾಜು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೊನಾ ನಾಲ್ಕನೇ ಅಲೆಯನ್ನು ಸಮರ್ಥವಾಗಿನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಬೂಸ್ಟರ್ ಲಸಿಕಾ ಅಭಿಯಾನವನ್ನು ಕೈಗೊಂಡಿರುವ ಹಿನ್ನೆಲೆ ಬುಧವಾರ, ಗುರುವಾರ ಹಾಗೂ ಶುಕ್ರವಾರದ ಮೂರು ದಿನಗಳಲ್ಲಿ ತಾಲೂಕಿನ ನಗರ ಮತ್ತು ಗ್ರಾಮೀಣಾ ಪ್ರದೇಶಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಜೊತೆಗೆ ಅನಂತ್ ನರ್ಸಿಂಗ್ ಕಾಲೇಜಿನ 50 ವಿದ್ಯಾರ್ಥಿನಿಯರ ತಂಡ ಮನೆ, ಮನೆಗೆ ಭೇಟಿ ನೀಡಿ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಬೂಸ್ಟರ್ ಲಸಿಕೆ ನೀಡುತ್ತಿದೆ.
17 ಸಾವಿರ ಲಸಿಕೆ ನೀಡಲಾಗುತ್ತಿದೆ: ಇಂದು ನ್ಯಾಯಾಲಯ ಹಾಗೂ ತಾಲೂಕು ಕಚೇರಿಯಲ್ಲಿ ಎಲ್ಲ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಉಚಿತವಾಗಿ ಬೂಸ್ಟರ್ ಲಸಿಕೆ ನೀಡುತ್ತಿದೆ. ಇದುವರೆಗೆ ತಾಲೂಕಿನಲ್ಲಿ 17 ಸಾವಿರಕ್ಕೂ ಹೆಚ್ಚಿನ ಜನರಿಗೆ ಬೂಸ್ಟರ್ ಲಸಿಕೆ ನೀಡಲಾಗಿದೆ ಎಂದರು. ಕೇಂದ್ರ ಆರೋಗ್ಯ ಇಲಾಖೆ ಆದೇಶದ ಮೇರೆಗೆ ಸ್ವಾತಂತ್ರ್ಯ ಮಹೋತ್ಸವದ ಹಿನ್ನೆಲೆ ರಾಜ್ಯದಲ್ಲಿ 18 ವರ್ಷದಿಂದ 59ರ ವಯೋಮಾನದವರಿಗೆ ಎರಡನೇ ಡೋಸ್ ಲಸಿಕೆ ಪಡೆದು 6 ತಿಂಗಳು ಕಳೆದವರಿಗೆ ಉಚಿತವಾಗಿ ಬೂಸ್ಟರ್ ಲಸಿಕೆ ನೀಡಲು 75 ದಿನಗಳ ವಿಶೇಷ ಅಭಿಯಾನ ಕೈಗೊಂಡಿದೆ. ಇದೇ 18ರಂದು ನಗರದ ಸರ್ಕಾರಿ ಜೆ.ಸಿ. ಆಸ್ಪತ್ರೆ ಆವರಣದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಈ ಅಭಿಯಾನ ಉದ್ಘಾಟಿಸಲಿದ್ದು, ಪ್ರತಿಯೊಬ್ಬರು ತಪ್ಪದೇ ಬೂಸ್ಟರ್ ಲಸಿಕೆ ಪಡೆಯುವ ಮೂಲಕ ಕೊರೊನಾ ನಾಲ್ಕನೇ ಅಲೆನಿಯಂತ್ರಿಸಲು ತಾಲೂಕಿನ ಜನತೆ ಹೆಚ್ಚಿನ ರೀತಿ ಸಹಕರಿಸಬೇಕೆಂದು ಕೋರಿದರು.
ಸೊಳ್ಳೆ ಬಗ್ಗೆ ಎಚ್ಚರಿಕೆ: ಇತ್ತೀಚಿನ ಬಾರಿ ಮಳೆಯಿಂದ ಮನೆಗಳ ಸುತ್ತಮುತ್ತದ ಹಳ್ಳಕೊಳ್ಳದಲ್ಲಿ ನೀರು ನಿಂತಿರುವ ಕಾರಣ ಸೊಳ್ಳೇಗಳ ಕಾಟ ವಿಪರೀತವಾಗಿದೆ. ತಾಲೂಕಿನಲ್ಲಿ 19 ಡೆಂಗ್ಯು ಹಾಗೂ 7 ಚಿಕನ್‌ಗುನ್ಯಾ ಪ್ರಕರಣ ಪತ್ತೆಯಾಗಿದ್ದು, ರೋಗ ನಿಯಂತ್ರಣಕ್ಕೆ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲು ಸೊಳ್ಳೆಗಳು ಬೆಳೆಯದಂತೆ ಹೆಚ್ಚಿನ ಗಮನ ನೀಡಬೇಕು ಎಂದರು.
ಈ ವೇಳೆ ಹಿರಿಯ ರಾಷ್ಟ್ರೀಯ ಕ್ರೀಡಾಪಟು ಉಮಾಪತಿ ಮೊದಲಿಯಾರ್ ಅವರಿಗೆ ಬೂಸ್ಟರ್ ಡೋಸ್‌ಲಸಿಕೆ ನೀಡಲಾಯಿತು. ಅನಂತ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ಜ್ಯೋತಿ ಬಾಯಿ, ರಕ್ಷಿತಾ, ಪ್ರಿಯಾ, ಕುಚಿತಾ, ಪ್ರಗತಿ,ಅನ್ನಪೂರ್ಣೇಶ್ವರಿ, ಆಶ್ವಿನಿ,ರಂಚಿತಾ ಹಾಗೂ ಆರೋಗ್ಯ ಇಲಾಖೆ ನಿರೀಕ್ಷಕರಾದ ಜಬ್ಬೀರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.