Advertisement

ಗ್ರಾಮಗಳಲ್ಲಿ ತೆರೆದುಕೊಳ್ಳುತ್ತಿದೆ “ಪುಸ್ತಕ ಗೂಡು’!

11:05 PM Oct 07, 2021 | Team Udayavani |

ಮಂಗಳೂರು: ಗ್ರಾಮೀಣ ಜನರಲ್ಲಿ ಅಕ್ಷರ ಪ್ರೀತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ಗಳನ್ನು “ಪುಸ್ತಕ ಗ್ರಾಮ’ಗಳಾಗಿ ಬದಲಾಯಿಸಲು “ಪುಸ್ತಕ ಗೂಡು’ ಎಂಬ ವಿನೂತನ ಪ್ರಯೋಗವು ರಾಜ್ಯದಲ್ಲಿಯೇ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ.

Advertisement

ಬಸ್‌ ನಿಲ್ದಾಣ, ಅಂಚೆ ಕಚೇರಿ, ಗ್ರಾ.ಪಂ. ಕಚೇರಿ, ಸಾರ್ವಜನಿಕ ಉದ್ಯಾನ, ಮಾರುಕಟ್ಟೆ ಪ್ರದೇಶಗಳಲ್ಲಿ ಗೂಡು ನಿರ್ಮಿಸಿ ಪುಸ್ತಕಗಳನ್ನು ಇಟ್ಟು ಜನರಿಗೆ ಸುಲಭವಾಗಿ ಓದಲು ನೆರವಾಗುವ ಪರಿಕಲ್ಪನೆಯೇ ಪುಸ್ತಕ ಗೂಡು. ದ.ಕ. ಜಿಲ್ಲಾ ಪಂಚಾಯತ್‌ ಸಿಇಒ ಡಾ| ಕುಮಾರ್‌ ಅವರ ಕನಸಿನಂತೆ ಈ ಯೋಜನೆಯನ್ನು ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಅನುಷ್ಠಾನಿಸಲು ಉದ್ದೇಶಿಸಲಾಗಿದೆ.

ಉಳಾಯಿಬೆಟ್ಟಿನಲ್ಲಿ ಆರಂಭ:

ಪೈಲಟ್‌ ಯೋಜನೆಯಾಗಿ ಜಿಲ್ಲೆಯ ಆಯ್ದ 17 ಗ್ರಾ.ಪಂ.ಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದ್ದು, ಉಳಾಯಿಬೆಟ್ಟು ಗ್ರಾ.ಪಂ.ನಲ್ಲಿ  ಆರಂಭವಾಗಿದೆ. “ಗೂಡು’ಗಳಲ್ಲಿ ಇನ್ನು ಮುಂದೆ ಕಾದಂಬರಿ, ಕಥೆ, ಕವನ ಸೇರಿದಂತೆ ಬಗೆಬಗೆಯ ಸಾಹಿತ್ಯ ಪುಸ್ತಕಗಳು ಉಚಿತವಾಗಿ ಸಿಗಲಿವೆ. ಅಲ್ಲೇ ಓದಬಹುದು ಅಥವಾ ಮನೆಗೆ ಕೊಂಡೊಯ್ದು ಓದಿ ಮರಳಿಸಬಹುದು. ಮನೆಯಲ್ಲಿರುವ ಹಳೆಯ ಪುಸ್ತಕವನ್ನು ಗೂಡಿಗೆ ಸೇರಿಸಲೂಬಹುದು.

ಪುಸ್ತಕಗಳು ಎಲ್ಲಿಂದ?:

Advertisement

ಎಲ್ಲ ಪುಸ್ತಕ ಗೂಡುಗಳಿಗೆ ತಗಲುವ ವೆಚ್ಚವನ್ನು ಆಯಾ ಗ್ರಾ.ಪಂ. ಮಾಡಲಿದೆ. ಪುಸ್ತಕಗಳನ್ನು ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರು ನೀಡುತ್ತಾರೆ. ಪ್ರತೀ ಗೂಡಲ್ಲಿ ಕನಿಷ್ಠ 30 ಪುಸ್ತಕಗಳನ್ನಿರಿಸುವ ಗುರಿ ಇದೆ.

ಆಯ್ಕೆಯಾದ ಗ್ರಾಮಗಳು :

ಮಂಗಳೂರು ತಾಲೂಕಿನ ಉಳಾಯಿಬೆಟ್ಟು, ಕೊಣಾಜೆ, ಬೆಳ್ಮ, ಬೆಳ್ತಂಗಡಿ ತಾಲೂಕಿನ ಅಳದಂಗಡಿ, ಬಂಟ್ವಾಳ ತಾಲೂಕಿನ ಕೊಳ್ನಾಡು, ಚೆನ್ನೈತ್ತೋಡಿ, ಅರಳ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಕಬಕ, ಆರ್ಯಾಪು, ಕಡಬ ತಾಲೂಕಿನ ಸುಬ್ರಹ್ಮಣ್ಯ, ಅಲಂಕಾರು, ರಾಮಕುಂಜ, ಸುಳ್ಯ ತಾಲೂಕಿನ ಬೆಳ್ಳಾರೆ, ಮೂಡಬಿದಿರೆ ತಾಲೂಕಿನ ಶಿರ್ತಾಡಿ, ತೆಂಕಮಿಜಾರು, ಪುತ್ತಿಗೆ.

ಗ್ರಾಮೀಣ ಜನರಲ್ಲಿ ಪುಸ್ತಕ ಪ್ರೀತಿ ಬೆಳೆಯಬೇಕು ಎಂಬ ಸದುದ್ದೇಶದಿಂದ “ಪುಸ್ತಕ ಗೂಡು’ ಕಲ್ಪನೆಯನ್ನು ರಾಜ್ಯದಲ್ಲೇ ಮೊದಲ ಬಾರಿ ದ.ಕ. ಜಿಲ್ಲೆಯಲ್ಲಿ ಅನುಷ್ಠಾನಿಸಲಾಗಿದೆ. ಸದ್ಯ ಕೆಲವು ಗ್ರಾಮ ವ್ಯಾಪ್ತಿಯಲ್ಲಿ ಇದು ಜಾರಿಯಾಗಿ ಬಳಿಕ ಎಲ್ಲಾ ಗ್ರಾಮಗಳಿಗೆ ವಿಸ್ತರಿಸಲಾಗುವುದು.– ಡಾ| ಕುಮಾರ್‌,  ದ.ಕ. ಜಿ.ಪಂ. ಸಿಇಒ

-ದಿನೇಶ್‌ ಇರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next