ನವಲಗುಂದ: ದೇಶಭಕ್ತಿ, ನೈತಿಕತೆ, ಮಾನವೀಯ ಮೌಲ್ಯಗಳನ್ನು ತಿಳಿಸುವಂತಹ ಪುಸ್ತಕಗಳನ್ನು ಯುವ ಪೀಳಿಗೆ ಓದಿದರೆ ಜ್ಞಾನ ಹೆಚ್ಚಲು ಸಾಧ್ಯ. ಓದುವ ಹವ್ಯಾಸ ಬೆಳೆಸುವ ಇಂತಹ ಕೆಲಸ ಶ್ಲಾಘನೀಯ ಎಂದು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ವಿಜಯಾನಂದ ಸರಸ್ವತಿ
ಮಹಾರಾಜರು ಹೇಳಿದರು.
ಪಡೇಸೂರ ಗ್ರಾಮದಲ್ಲಿ ಹುಬ್ಬಳ್ಳಿ ನಿರಾಮಯ ಫೌಂಡೇಷನ್, ಸಾಹಿತ್ಯ ಪರಿಷತ್, ಹುಬ್ಬಳ್ಳಿ ಬಾಲಾಜಿ ನರರೋಗ ಸಂಸ್ಥೆ, ಶ್ರೀಪೂರ್ಣ ಫೌಂಡೇಷನ್ ಕ್ಯಾನ್ವಾಸ್ ಆರ್ಟ್ಸ್ ಸಹಯೋಗದಲ್ಲಿ ನಡೆದ ಮಹಾನ್ ಪುರುಷರ ಕಿರುಹೊತ್ತಿಗೆಗಳ ಹಸ್ತಾಂತರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಿರಾಮಯ ಫೌಂಡೇಷನ್ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ, ಯುವ ಪೀಳಿಗೆ ಮೊಬೈಲ್‌ಅನ್ನೇ ಜೀವನಾಧಾರವಾಗಿಟ್ಟುಕೊಂಡಿದೆ. ಆದರೆ ಅನೇಕ ಮಹಾತ್ಮರ ಅನುಭವದ ಮಾತುಗಳನ್ನು ತಿಳಿದುಕೊಳ್ಳಬೇಕಾದರೆ ಪುಸ್ತಕಗಳ ಜ್ಞಾನವನ್ನು ಪಡೆಯಬೇಕು.
ಇಲ್ಲವಾದರೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಯುವ ಪೀಳಿಗೆಗೆ ಅನುಕೂಲವಾಗುವಂತಹ ಕಾರ್ಯಕ್ರಮವನ್ನು ನಮ್ಮ ಸಂಸ್ಥೆ ಹಮ್ಮಿಕೊಂಡಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಂ.ಮೆಣಸಿನಕಾಯಿ ಮಾತನಾಡಿ, ಶ್ರೀಗಳ ಆಶಯದಂತೆ ಮಕ್ಕಳಿಗೆ ಓದುವ ಕೊಠಡಿ ಮಾಡಿ ಪ್ರತಿದಿನ ಒಂದು ಗಂಟೆ ಪುಸ್ತಕ ಓದಲು ಸಮಯವನ್ನು ನಿಗದಿಪಡಿಸುವುದಾಗಿ ತಿಳಿಸಿದರು. ಪದ್ಮರಾಜ ಹಿರೇಮಠ, ವೀರನಗೌಡ ಧರ್ಮಗೌಡ್ರ, ಆಶೋಕ ಲೆಂಕೆಣ್ಣವರ, ಪವನ ಪಾಟೀಲ ಇನ್ನಿತರರಿದ್ದರು.