Advertisement

ನಮ್ಮ ಮೆಟ್ರೋದಲ್ಲೊಂದು ಪುಸ್ತಕ ಅಂಗಡಿ!

03:05 PM Nov 09, 2022 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಇನ್ನು ಮುಂದೆ “ಮೆಟ್ರೋ ಪುಸ್ತಕ’ ಸೇವೆಯೂ ದೊರೆಯಲಿದೆ. ನಗರದ ಹೃದಯಭಾಗ ಹಾಗೂ ಅತಿಹೆಚ್ಚು ಪ್ರಯಾಣಿಕರು ಓಡಾಡುವ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಮಳಿಗೆ ತೆರೆಯಲಾಗಿದ್ದು, ಬುಧವಾರ ದಿಂದ (ನ.9) ಕಾರ್ಯಾರಂಭ ಮಾಡಲಿದೆ.

Advertisement

ಕೇಂದ್ರ ಸಾಹಿತ್ಯ ಅಕಾಡೆಮಿಯು ರಾಷ್ಟ್ರದ ಅನೇಕ ಕಡೆ ತನ್ನ ಪುಸ್ತಕ ಮಳಿಗೆಗಳನ್ನು ತೆರೆದಿದ್ದು, ಇದೀಗ ರಾಜಧಾನಿಯ ಹಾಟ್‌ಸ್ಪಾಟ್‌ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ಮೊದಲ ಬಾರಿಗೆ ನೂತನ ಪುಸ್ತಕ ಮಳಿಗೆಯೊಂದನ್ನು ಪ್ರಾರಂಭಿಸುತ್ತಿದೆ. ಕೆಂಪೇಗೌಡ ಮೆಟ್ರೋ ಸ್ಟೇಷನ್‌ಗೆ ನಿತ್ಯ ಸಹ ಸ್ರಾ ರು ಜನರು ಆಗಮಿಸುತ್ತಾರೆ. ಪುಸ್ತಕಗಳನ್ನು ಓದುಗರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಹಿತ್ಯ ಅಕಾಡೆಮಿಯು ಮತ್ತೂಂದು ನೂತನ ಹೆಜ್ಜೆಯನ್ನು ಇಡುತ್ತಿದೆ. ಈ ಮೆಟ್ರೋ ಪುಸ್ತಕ ಅಂಗಡಿಯಲ್ಲಿ ನಾನಾ ವರ್ಗದ ಜನರಿಗೆ ಉಪಯೋಗವಾಗುವಂತಹ ಕಥೆ, ಕಾದಂಬರಿ, ಸಾಹಿತ್ಯ, ಕವಿತೆಗಳ ಕನ್ನಡ ಪುಸ್ತಕಗಳ ಜತೆಗೆ ಇತರೆ ಭಾಷೆಗಳಿಂದ ಅನುವಾದಗೊಂಡ ಪುಸ್ತಕಗಳು, ಅನ್ಯಭಾಷೆಯ ವಿವಿಧ ಪುಸ್ತಕಗಳನ್ನು ಇಲ್ಲಿ ಇಡಲಾಗುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್‌ ತಿಳಿಸುತ್ತಾರೆ.

ಅಕಾಡೆಮಿಯು ಭುವನೇಶ್ವರ್‌, ಇಂಪಾಲ್‌, ಅಗರ್ತಲಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪುಸ್ತಕ ಮಳಿಗೆಗಳನ್ನು ಪ್ರಾರಂಭಿಸಿದೆ. ಆದರೆ, ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ಎರಡು ಪುಸ್ತಕ ಮಳಿಗೆಗಳನ್ನು ತೆರೆದಿದ್ದು ಬಿಟ್ಟರೆ, ಬೆಂಗಳೂರಿನಲ್ಲಿಯೇ ಮೊದಲ ಬಾರಿಗೆ ಮೆಟ್ರೋ ಪುಸ್ತಕ ಅಂಗಡಿಯನ್ನು ತೆರೆಯಲಾಗುತ್ತಿದೆ ಎಂದು ಹೇಳುತ್ತಾರೆ. ಕೆಂಪೇಗೌಡ ರಸ್ತೆಯ ಟ್ಯಾಂಕ್‌ ಬಂಡ್‌ ರಸ್ತೆಯಲ್ಲಿನ ನಗರದ ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದ ಗೇಟ್‌ ನಂ.ಎ ನಲ್ಲಿ ಮೆಟ್ರೋ ಪುಸ್ತಕ ಅಂಗಡಿ ಕಾಣಸಿಗುತ್ತದೆ.

ಪುಸ್ತಕ ಮಳಿಗೆಯಲ್ಲಿ ಏನೇನಿದೆ?: ಈ ಮಳಿಗೆಯನ್ನು ಸುಮಾರು 144 ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ ಒಟ್ಟು 24 ಭಾಷೆಗಳ 2,000 ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿದೆ. ಹೆಚ್ಚುವರಿಯಾಗಿ 500ರಿಂದ 600 ಪುಸ್ತಕಗಳು ಇವೆ. ಕನ್ನಡದಲ್ಲಿನ ಡಾ. ಚಂದ್ರಶೇಖರ ಕಂಬಾರ, ಶಿವರಾಂ ಕಾರಂತ್‌, ಕುವೆಂಪು, ಬೇಂದ್ರೆ ಸೇರಿದಂತೆ ಇತರೆ ಭಾಷೆಗಳಲ್ಲಿನ ಖ್ಯಾತ ಸಾಹಿತಿಗಳು ಬರೆದಿರುವ ಬರಹಗಳನ್ನು ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ ಪುಸ್ತಕಗಳನ್ನು ಯಾವುದೇ ಕೃತಿಚೌರ್ಯವಾಗದಂತೆ ಕನ್ನಡ, ಮಲಯಾಳಂ, ತೆಲುಗು, ಮಣಿಪುರಿ, ಕಾಶ್ಮೀರಿ, ತಮಿಳು, ಹಿಂದಿ ಸೇರಿದಂತೆ ಒಟ್ಟು 23 ಭಾಷೆಗಳಿಗೆ ಅನುವಾದ ಮಾಡಿ ಪ್ರಕಟಿಸಲಾಗುತ್ತದೆ. ಪ್ರತಿ ಪುಸ್ತಕವನ್ನು ಶೇ.10ರಷ್ಟು ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತದೆ. ಹಳೆಯ ಪುಸ್ತಕಗಳಿಗೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದೆ. ಜನತೆಯ ಪ್ರತಿಕ್ರಿಯೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸಲಾಗುತ್ತದೆ ಎಂದು ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್‌ ತಿಳಿಸುತ್ತಾರೆ.

ಪ್ರತಿಯೊಬ್ಬರು ಸಾಹಿತ್ಯ ಅಕಾಡೆಮಿಗೆ ಬಂದು ಪುಸ್ತಕಗಳನ್ನು ಖರೀದಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಓದುಗರಿಗೆ ಅನುಕೂಲವಾಗಲೆಂದು ಹಾಗೂ ಪುಸ್ತಕಗಳ ಬಗ್ಗೆ ಅಧಿಕ ಜನ ಗಮನಹರಿಸಬೇಕಾದ ಉದ್ದೇಶದಿಂದ ಹೆಚ್ಚು ಜನ ಓಡಾಡುವ ಪ್ರದೇಶವಾದ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ಪ್ರಾರಂಭಿಸುತ್ತಿದ್ದೇವೆ. -ಡಾ.ಚಂದ್ರಶೇಖರ ಕಂಬಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು

Advertisement

 

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next