Advertisement

ಪುಸ್ತಕ ವಿಮರ್ಶೆ : ‘ಹುಲಿ ಕಡ್ಜಿಳ’ದ ಖಾರ ಕಡಿತ..!

10:12 AM Apr 19, 2021 | ಶ್ರೀರಾಜ್ ವಕ್ವಾಡಿ |

ಪರಿವರ್ತನೆ ಸಹಜ ಪ್ರಕ್ರಿಯೆ. ಅದು ಆಗಬಾರದ ಪರಿವರ್ತನೆಯಾಗಬಾರದು. ಪರಿವರ್ತನೆ ಪರಿವರ್ತನೆಯಾಗಬಾರದ ರೀತಿಯಲ್ಲಿ ಆದರೇ, ಅದು ಪರಿವರ್ತನೆ ಅಂತನ್ನಿಸಿಕೊಳ್ಳುವುದಿಲ್ಲ.

Advertisement

ಪರಿವರ್ತನೆಯಾಗಬಾರದ ರೀತಿಯಲ್ಲಿ ಪರಿವರ್ತನೆಯಾದ ಆಧುನಿಕತೆ, ಜೀವನ ಶೈಲಿ, ವ್ಯಕ್ತಿತ್ವಗಳ ನಡುವಿನ ಸಂಬಂಧ, ಗ್ರಾಮಾಂತರ ಸೊಗಡು ಮಾಸಿ ಸೃಷ್ಟಿಸಿದ ತೊಡಕುಗಳು ಅದು ಕಣ್ಣಿಗೆ ವೈಭವವಾಗಿ ಕಂಡರೂ, ಅದರಾಚೆಗೆ ಎಂದಿಗೂ ಮಹಾ ಶೂನ್ಯವಾಗಿ ಕಾಣಿಸುತ್ತದೆ.

ಇಂತಹವೆಲ್ಲಾ ವಾಸ್ತವ ಎಂದರೆ ಪದರ ಅಷ್ಟೇ ಅಲ್ಲ ಅದರ ಆಳ ಅಗಲದಲ್ಲೂ ಇದೆ ಎಂದು ಸಾರುವ ಕಥಾ ಸಂಕಲನ ‘ಹುಲಿ ಕಡ್ಜಿಳ’.

ತೀರ್ಥಹಳ್ಳಿ ಸಮೀಪದ ಒಡ್ಡಿನಬೈಲು ಮೂಲದವರಾದ ಕನ್ನಡ ಪ್ರಾಧ್ಯಾಪಕ ಹರೀಶ್ ಟಿ. ಜಿ ಅವರ ಈ ಕಥಾ ಸಂಕಲನ ಓದುಗನಿಗೆ ಇಷ್ಟವಾಗುವುದು ಇಲ್ಲಿನ ಗ್ರಾಮ್ಯ ಸೊಗಡಿನಿಂದ. ನನಗೂ ಅಷ್ಟೇ. ಹಳ್ಳಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ, ಆಧುನಿಕತೆ ಈಗ ಹೊಕ್ಕಿ ಸೃಷ್ಟಿಸಿದ ಬಿಕ್ಕಟ್ಟುಗಳನ್ನು ಇಲ್ಲಿನ ಕಥೆಗಳು ಹೇಳುತ್ತವೆ.

ಓದಿ : ಐದು ಹಂತಗಳ ಚುನಾವಣೆಯಲ್ಲಿ 122 ಸ್ಥಾನಗಳು ಬಿಜೆಪಿಗೆ ಖಚಿತ : ಅಮಿತ್ ಶಾ

Advertisement

ಸಂಬಂಧವನ್ನು ದುಡ್ಡಿನಿಂದ ಅಳೆಯುವ ಅಭಿವೃದ್ಧಿ, ಆಧುನಿಕತೆಯ ಹೆಸರಿನೊಂದಿಗೆ ಬದಲಾದ ವ್ಯಕ್ತಿತ್ವದ ಧೋರಣೆ‌ ಕೆಲವು ಕಥೆಗಳಲ್ಲಿ ಎದ್ದು ಕಾಣುತ್ತವೆ.

‘ಎಂಥಕ್ಕ ನಮ್ದು ಬರೀ ನಾಟಕವಲ್ಲವೆನೇ..! ನಾಕು ಜನರ ಎದುರುಗಡೆಗೆ ಗಂಡ ಹೆಂಡತಿ ಪ್ರೀತಿ ಕಾಳಜಿ! ಮುಖ ಗಂಟಿಕ್ಕಿಸಿಕೊಂಡು ಮನೇಲಿ ಒಂದೂ ಮಾತಾಡದವರು ಶಾಲೆ ಬಾಗಿಲಲ್ಲಿ ನನ್ನ ಬೈಕಿಂದ ಇಳಿಸುವಾಗ ಮಾತ್ರ ಎಲ್ಲರೂ ನೊಡುತ್ತಾರೆಂದಾಗ ಒಂಚೂರು ಪ್ರೀತಿಯ ಕಾಳಜಿಯ ನಾಟಕವಾಡೋದು ..ಸಾಕಾಗಿದೆ’. “ಬೇಗೆ” ಎನ್ನುವ ಕಥೆಯ ಸಾಲುಗಳಿವು. ಕೆಲವು ದಾಂಪತ್ಯ ಸಂಬಂಧಗಳಲ್ಲಿನ  ಸತ್ಯಾಂಶವಿದು‌. ಸ್ವಾರ್ಥ ಆವರಿಸಿದ ಬದುಕಿನಲ್ಲಿ ಏನು ಬಯಸುವುದಕ್ಕೆ ಸಾಧ್ಯವಿದೆ ಹೇಳಿ…? ಹೌದು ‘ಬೇಗೆ’ ಎಂಬ ಕಥೆಯಲ್ಲಿ ಬೇಯುವ ಹೆಣ್ಣೊಬ್ಬಳ ವ್ಯಥೆ ಇದು. ಸಹಜವಾಗಿ ಮದುವೆಯಾದ ಹೆಣ್ಣು ತನ್ನ ಗಂಡನಿಂದ ಬಯಸುವ ಪ್ರೀತಿ, ಪ್ರೇಮ, ಪ್ರಣಯ, ಕಾಮ.. ಅದೆಲ್ಲದಕ್ಕಿಂತ ಹೆಚ್ಚು ಸ್ಪಂದನೆ ದೊರಕದಿದ್ದಾಗ ಒಳಗೊಳಗೆ ಅವಲತ್ತುಕೊಳ್ಳುವ ಎದೆ ಸ್ಪರ್ಶಿಸುವ ಅಪರೂಪದ ಕಥೆ ಇದು. ತನ್ನ ಮದುವೆಯ ಮುಂಚಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ, ತುಸು ಮೇಲ್ನಗುತ್ತಾ, ಈಗಿ‌ನ ಪರಿಸ್ಥಿತಿಯನ್ನು ದುಃಖಿಸುತ್ತಾ ಕಥಾ ನಾಯಕಿ ಈ ಕಥೆಯಲ್ಲಿ ಬದುಕು ಸವೆಸುತ್ತಾಳೆ. ಆಕೆಯ ವ್ಯಥೆಯನ್ನು ಕಥೆಗಾರರು ತುಂಬಾ ಚೆಂದಾಗಿ ನಿರೂಪಿಸಿದ್ದಾರೆ.

‘ಗೊಂಬೆ’ ಕಥೆ ಎಲ್ಲರಿಗೂ ಹಿಡಿಸುತ್ತದೆ. ‘ಬಾಯಿತುಂಬಾ ಎಲೆಯಡಿಕೆ ರಸ ತುಂಬಿಕೊಂಡು ಇನ್ನೊಂದು ಚೂರು ಹೊಗೆ ಸೊಪ್ಪನ್ನು ಮುರಿದು ಎಡಗೈಗೆ ಹಾಕಿ, ಬಲಹೆಬ್ಬೆರಳ ಉಗುರಲ್ಲಿ ಸುಣ್ಣ ತಗೊಂಡು ಬಲವಾಗಿ ತಿಕ್ಕಿ ತಿಕ್ಕಿ ಉಂಡೆಮಾಡಿ ಚಿಟಿಕೇಲಿ ಅದನ್ನು ಹಿಡಕೊಂಡು ಬಾಯಿಗೆ ಹಾಕಿಕೊಳ್ಳಬೇಕೆಂದು ಹೊರಟವರು ಕೈಯನ್ನು ಕೆಳಗಿಳಿಸಿ, ಬಾಯಲ್ಲಿ ತುಂಬಿದ್ದ ಎಲಯಡಿಕೆ ರಸವನ್ನು ಪಕ್ಕದಲ್ಲಿದ್ದ ಕುನ್ನೆರಲು ಮಟ್ಟಿಯ ಮೇಲೆ ಉಗಿದು ನಿಂತರು’ ದೃಶ್ಯ ಕಣ್ಣೆದುರಿಗೆ ಕಟ್ಟಿಸುವ ಕಥೆ ಇದು‌. ಪ್ರತಿ ಸಾಲಲ್ಲೂ ದೃಶ್ಯ ಎದುರಿಗೆ ಬರುವುದರಿಂದಲೇ ಕಥೆ ಓದಿಗೆ ವೇಗವನ್ನು ನೀಡುತ್ತದೆ‌. ಎಂಥಾ ಅದ್ಭುತ ಗ್ರಾಮ್ಯ ಚಿತ್ರಣವದು.

ಓದಿ : ಮಹಾರಾಷ್ಟ್ರದ ನಂದುರ್ಬಾರ್ ಗೆ 94 ಕೋವಿಡ್ ಕೇರ್ ಬೋಗಿಗಳನ್ನು ನೀಡಿದ ಕೇಂದ್ರ ರೈಲ್ವೆ!

ಶ್ರೀಲತಾ ಎಂಬ ಗ್ರಾಮೀಣ ಹುಡುಗಿಯ ಸುತ್ತ ತಿರುಗುವ ಕಥೆ ‘ಗೊಂಬೆ’. ಕಥೆಯ ಆರಂಭ ಕಥೆಯನ್ನು ಇಡಿಯಾಗಿ ಓದುವ ಹಾಗೆ ಮಾಡಿಸುತ್ತದೆ. ಪತ್ರಿಕಾ ಭಾಷೆಯಲ್ಲಿ ಹೇಳುವುದಾದರೇ, ‘ಇಂಟ್ರೊ’ ಅಥವಾ ಪೀಠಿಕೆ ಕೊಟ್ಟಿರುವ ರೀತಿ ಚೆನ್ನಾಗಿದೆ.

ಕಾಲಾಂತರದ ಬದಲಾವಣೆಗೆ ವಯೋಸಹಜವಾಗಿ ಹುಟ್ಟಿಕೊಳ್ಳುವ ಪ್ರೀತಿ, ಪ್ರೇಮ, ಪ್ರಣಯ ಮತ್ತು ಆಧುನಿಕತೆಯಲ್ಲಿ ‘ಲಿವಿಂಗ್ ಟುಗೆದರ್ ‘ ಎಂಬ ಹೊಸದೊಂದು ಬಗೆಯ ಸಂಬಂಧ ಪ್ರೀತಿಯ ಹೆಸರಲ್ಲಿ ಹುಟ್ಟಿಕೊಂಡಿರುವ ಸ್ಪರ್ಶವನ್ನೂ ಈ ಕಥೆ ಮಾಡುತ್ತದೆ. ಕಥೆಯಲ್ಲಿನ ತೀರ್ಥಹಳ್ಳಿಯ ಭಾಷೆಯ ಬಳಕೆ ಇಷ್ಟವಾಗುತ್ತದೆ. ಹವ್ಯಕ ಬ್ರಾಹ್ಮಣರ ಭಾಷೆಗೆ ಹೋಲುವಂತಿರುವ ‘ಹಿಂಗಾಗ್ಯದೆ’, ‘ಹೆಚ್ಚಾತು’, ‘ಬ್ಯಾಡನೇ’ ಇವೆಲ್ಲಾ ನೋಡುವುದಕ್ಕೂ, ಓದುವುದಕ್ಕೂ ಹೊಸದೇನೋ ವಿಶೇಷತೆ ನೀಡುತ್ತದೆ.

ಶೀರ್ಷಿಕೆ ಕಥೆ ‘ಹುಲಿ ಕಡ್ಜಿಳ’ ಉಳ್ಳವರ ದರ್ಪವನ್ನು ತೋರಿಸುತ್ತದೆ‌. ಪುಷ್ಪ ಎಂಬ ಬಡ ಹೆಣ್ಣು ಮಗಳೊಬ್ಬಳನ್ನು ದೈಹಿಕವಾಗಿ ಸುಖಿಸುವ ಹಂಬಲದಲ್ಲಿ ಯಜಮಾನಿಕೆಯ ದರ್ಪವನ್ನು ತೋರಿಸುವ ನಾಗೇಸಣ್ಣ ಎಂಬ ಪಾತ್ರ ಈಗಿನ ದಿನಗಳಿಗೆ ಹೋಲಿಸಿದರೇ ಸಾಮಾನ್ಯ ಅಂತನ್ನಿಸಿದರೂ ಈ ಕಥೆ ಗ್ರಾಮ್ಯ ಬದುಕಿನ ಚೌಕಟ್ಟಿನಲ್ಲಿ ಹೆಣೆದುಕೊಂಡಿರುವುದರಿಂದ ತುಸು ವಿಭಿನ್ನ ಅಂತನ್ನಿಸುತ್ತದೆ‌.

ಕ್ರೌರ್ಯದ ಎದುರು ನ್ಯಾಯ ಕಣ್ಣು ಮುಚ್ಚಿ ಕುಳಿತುಕೊಳ್ಳುವ ಬಗೆಗೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ‌. ಈ ಕಥೆಗೆ ‘ಹುಲಿ ಕಡ್ಜಿಳ’ ಎಂಬ ಹೆಸರಿಟ್ಟಿರುವುದು ವಿಶೇಷ. ಈ ‘ಹುಲಿ ಕಡ್ಜಿಳ’ ಎಂಬ ಹೆಸರಿನಲ್ಲಿ ಕಥೆಯ ಸ್ವಾರಸ್ಯವಿದೆ. ಮಾರ್ಮಿಕವಾಗಿ ಕಥೆಗಾರರು ಕಥೆಗೆ ಈ ಹೆಸರನ್ನು ಇಟ್ಟಿದ್ದಾರೆ. ಯಾಕೆನ್ನುವುದನ್ನು ಇಲ್ಲಿಯೇ ಹೇಳಿ ನಿಮ್ಮ ಓದಿನ ಕುತೂಹಲವನ್ನು ಕಸಿದುಕೊಳ್ಳಲು ನಾನಿಚ್ಛಿಸುವುದಿಲ್ಲ.

ಓದಿ : ಮಹಾರಾಷ್ಟ್ರದ ನಂದುರ್ಬಾರ್ ಗೆ 94 ಕೋವಿಡ್ ಕೇರ್ ಬೋಗಿಗಳನ್ನು ನೀಡಿದ ಕೇಂದ್ರ ರೈಲ್ವೆ!

ಹೀಗೆ ಈ ಸಂಕಲನದ ಹನ್ನೊಂದು ಕಥೆಗಳು ಕೂಡ ಒಂದೊಂದು ಹಳ್ಳಿ ಬದುಕು ಆಧುನಿಕತೆ, ಅಭಿವೃದ್ಧಿ, ಪರಿವರ್ತನೆಯ ಹೊಸ ಹೆಸರಿನಲ್ಲಿ ಬದಲಾದ  ಬೇರೆ ಬೇರೆ ಬಣ್ಣ , ಬೆಡಗುಗಳನ್ನು ತೋರಿಸುತ್ತವೆ.

ಸ್ವತಃ ಕಥೆಗಾರರು ಹೇಳಿಕೊಂಡಿರುವ ಹಾಗೆ, ಸಂಬಂಧಗಳು ಜಾಳಾಗಿ ಮಾತು ತನ್ನ ಮಾಧುರ್ಯವನ್ನು ಕಂಡಾಗ ಕರುಳಿನ ಯಾವುದೋ ಮೂಲೆಯಲ್ಲಿ ಸಂಕಟವಾಗುವ ಅರಿವಾಗುತ್ತವೆ ಇಲ್ಲಿನ ಕಥೆಗಳಲ್ಲಿ.

ಒಟ್ಟಿನಲ್ಲಿ, ಹಳ್ಳಿಯ ಸೊಗಡಷ್ಟೇ ಅಲ್ಲ, ಅಲ್ಲಿನ ಬಿಕ್ಕಟ್ಟುಗಳನ್ನು ಕೂಡ ಚಿತ್ರಿಸುತ್ತದೆ ‘ಹುಲಿ ಕಡ್ಜಿಳ’.

-ಶ್ರೀರಾಜ್ ವಕ್ವಾಡಿ

ಓದಿ : ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ ಮಾಡಿದ ದಾವಣಗೆರೆ ಎಸ್ ಪಿ     

Advertisement

Udayavani is now on Telegram. Click here to join our channel and stay updated with the latest news.

Next