ವಾರಿಸ್ ಡಿರಿ, ಹೆಸರನ್ನು ನೀವು ಕೇಳಿರಬಹುದು. 1990ರ ದಶಕದಲ್ಲಿ ಜಾಹಿರಾತು ಜಗತ್ತಿನಲ್ಲಿ ಅಗ್ರಪಂಕ್ತಿಯಲ್ಲಿದ್ದ ಕಪ್ಪು ಶಿಲೆಯಂತ ಸುಂದರಿ ಆಕೆ.
ಹಸಿವು, ಬಡತನ, ಅಪಮಾನ, ಅತ್ಯಾಚಾರದಂತಹ ಸಹಿಸಲಸಾಧ್ಯವಾದ ಘಟನೆಗಳು, ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಎಂಬ ಕ್ರೂರ ಪದ್ಧತಿ ಇವೆಲ್ಲವುಗಳಿಂದ ಸಂಕಲನಗೊಂಡ ಜಾಹಿರಾತು ಲೋಕದಲ್ಲಿ ಅಚ್ಚಳಿಯದ ಹೆಸರಾಗಿ ಉಳಿದ ವಾರಿಸ್ ಡಿರಿ ಎಂಬಾಕೆಯ ಕಾದಂಬರಿಯಂತಹ ಆತ್ಮಕಥನ ‘ಡೆಸರ್ಟ್ ಫ್ಲವರ್’ನ ಕನ್ನಡಾನುವಾದ “ಮರುಭೂಮಿಯ ಹೂ”.
ಅದರ ಎರಡನೇ ಓದಿನ ಅನಿಸಿಕೆ ಇದು. ಪ್ರತಿ ಪುಟಗಳನ್ನು ತೆರೆಯುವಾಗ ಕಣ್ಣೀರು ತೊಟ್ಟಿಕ್ಕಿಸಿದ ಕೃತಿ ಇದು.
ಬಾಲ್ಯದಲ್ಲಿ ಎದುರು ಧಾವಿಸಿದ ಸಮಸ್ಯೆಗಳ ವಿರುದ್ಧ ಈಜುತ್ತಾ, ಹೋರಾಟ, ಹಸಿವು, ಮತ್ತು ಅಪಮಾನಗಳ ನಡುವೆ ಬದುಕನ್ನು ಹಿಡಿದು ಜಾಗತಿಕ ಮಟ್ಟದ ‘ಸೂಪರ್ ಮಾಡೆಲ್’ ಆಗಿ ಬೆಳೆದರೂ ಕೂಡಾ ವಾರಿಸ್ ತನ್ನ ಅಲೆಮಾರಿ ಕುಟುಂಬದ ಬಡತನದ ಬಾಲ್ಯವನ್ನು ಮತ್ತು ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಎಂಬ ಕ್ರೂರ ಪದ್ದತಿಯನ್ನು ಮರೆತಿರಲಿಲ್ಲ. ಮರೆಯಲು ಆಕೆಗೆ ಸಾಧ್ಯವೂ ಆಗಿಲ್ಲವೇನೋ, ಯಾಕೆಂದರೆ, ಆಕೆ ಕಂಡಿದ್ದು ಆರ್ದ್ರತೆ. ತಾನನುಭವಿಸಿದ ಎಲ್ಲವನ್ನೂ ತನ್ನ ಆತ್ಮಕಥೆಯಲ್ಲಿ ದಾಖಲಿಸಿ ಜಗತ್ತಿನೆದುರು ಮುಕ್ತವಾಗಿ ತೆರೆದಿಟ್ಟು ಜಗತ್ತನ್ನೇ ಬೆಚ್ಚಿಬೀಳಿಸಿದ ವಾರಿಸ್ ಡಿರಿಯ ಬದುಕು ಸಮಾಜದ ವ್ಯವಸ್ಥೆಗೆ ಹಿಡಿದ ಮಸುಕಿಲ್ಲದ ಕನ್ನಡಿ.
ಓದಿ : ಎಲ್ಲವನ್ನೂ ಎಸ್ ಐಟಿ ಯವರೇ ನೋಡಿಕೊಳ್ಳುತ್ತಾರೆ: ಗೃಹ ಸಚಿವ ಬೊಮ್ಮಾಯಿ
ಆಕೆಯದ್ದು ಕಥೆ ಅಲ್ಲ ಸಾಹಸದ ಬದುಕು, ಸಾವಿನ ತೂಗುಗತ್ತಿಯ ನೆರಳಿನ ಕೆಳಗೆ ಬುಡಕಟ್ಟು ಜನಾಂದಲ್ಲಿ ಜನಿಸಿದ ಹೆಣ್ಣೊಬ್ಬಳು ಸಾವಿಗೆ ಎದುರಾಗಿ ಎದೆ ಕೊಟ್ಟು ನಿಂತ ಅಪರೂಪದ ಸಾಹಸವನ್ನು ಪುಟ ಪುಟವಾಗಿ ದರ್ಶಿಸುವ ಕೃತಿ ಡಾ. ಎನ್. ಜಗದೀಶ್ ಕೊಪ್ಪ ಕನ್ನಡಕ್ಕೆ ಅನುವಾದಿಸಿದ “ಮರುಭೂಮಿಯ ಹೂ”.
ವಾರಿಸ್ ಳ ತಂದೆ ಅಲೆಮಾರಿ ಜನಾಂಗದವನು, ತಾಯಿ ಮೊಗದಿಶು ನಗರದ ಸುಸಂಸ್ಕೃತ ಕುಟುಂಬದಿಂದ ಬಂದಾಕೆ. ಶಾಲೆ, ಶಿಕ್ಷಣ ಏನು ಎಂದರಿಯದ ಬದುಕನ್ನು ಕಂಡವರು. ಬುಟ್ಟಿ ಹೆಣೆಯುವುದು, ಸಾಕು ಪ್ರಾಣಿಗಳ ಪೋಷಣೆ ಮತ್ತು ರಕ್ಷಣೆ ಇವೇ ಮೊದಲಾದವುಗಳಲ್ಲೇ ಕೂಡಿದ್ದ ಬದುಕು.
ಕುರಿ, ಮೇಕೆ, ಒಂಟೆಗಳನ್ನು ಸಾಕುತ್ತಿದ್ದರು. ಇಂತ ವಾತಾವರಣದೊಂದಿಗೆ ಬದುಕನ್ನು ಕಾಣುತ್ತಿದ್ದ ವಾರಿಸ್ 4 ವರ್ಷದಲ್ಲಿಯೇ ತನ್ನ ತಂದೆಯ ಸ್ನೇಹಿತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾಳೆ ಎಂದರೇ, ಕಣ್ಣಲ್ಲಿ ನೀರು ಹನಿಯದೇ ಇದ್ದಿತೆ…?
ಇನ್ನು, ಆಫ್ರಿಕಾದ ಬಹುತೇಕ ಮುಸ್ಲಿಂ ಬುಡಕಟ್ಟು ಜನಾಂಗದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಅಮಾನುಷವಾದ ಆಚರಣೆ, ಹೆಣ್ಣು ಮಕ್ಕಳು ಋತುಮತಿಯಾಗುವ ಮೊದಲೆ ಮಾಡುವ ಗುಪ್ತಾಂಗ ಛೇದನ ಕ್ರಿಯೆಗೆ ಎದುರಾದವಳು ಡಿರಿ.
ಇದು ಧಾರ್ಮಿಕ ಹೆಸರಿನಲ್ಲಿ ಹೆಣ್ಣಿನ ಪಾವಿತ್ರ್ಯತೆಯನ್ನು ಸಾಬೀತು ಪಡಿಸುವ ಒಂದು ಅಮಾನವೀಯ ಕ್ರಿಯೆ. ಆ ಬುಡಕಟ್ಟು ಜನಾಂಗದ ಪದ್ಧತಿಯ ಪ್ರಕಾರ ಪ್ರತಿಯೊಬ್ಬ ಮಹಿಳೆಯು ವಿವಾಹವಾಗಬೇಕಾದರೆ ಈ ಕ್ರಿಯೆಗೆ ಒಳಗಾಗಲೇ ಬೇಕು. ಇದನ್ನು ಮಾಡಿಸಿಕೊಳ್ಳದ ಮಹಿಳೆಯನ್ನು ಅಪವಿತ್ರಳು, ವ್ಯಭಿಚಾರಿಣಿ ಎಂದು ಮದುವೆಯಾಗಲು ನಿರಾಕರಿಸುತ್ತಿದ್ದರಂತೆ. ವಧು ದಕ್ಷಿಣೆ ಪದ್ಧತಿ ಜಾರಿಯಲ್ಲಿರುವ ಇಲ್ಲಿ ಈ ಕ್ರಿಯೆಗೆ ಒಳಪಡುವ ಮಹಿಳೆಗೆ ಹೆಚ್ಚಿನ ಬೇಡಿಕೆ ಹಾಗಾಗಿ ಈ ಅನಿಷ್ಟ ಪದ್ಧತಿಯನ್ನು ಆ ಬುಡಕಟ್ಟು ಜನಾಂಗದವರು ಪಾಲಿಸುತ್ತಿದ್ದರು.
ಓದಿ : ರಾಜ್ಯದಲ್ಲಿ ಎಷ್ಟೋ ಜನ ಮಹಾನ್ ನಾಯಕರಿಲ್ವ, ಡಿಕೆಶಿ ಯಾಕೆ ಅವರ ಹೆಸರೇ ಹೇಳುತ್ತಾರೆ: ಎಚ್ ಡಿಕೆ
ವಾರಿಸ್ ಕೂಡ ಐದನೇ ವರ್ಷದಲ್ಲಿಯೇ ಈ ಕ್ರೂರ ಪದ್ಧತಿಗೆ ಒಳಗಾಗುತ್ತಾಳೆ. ಈ ಕಾರಣದಿಂದಾಗಿಯೇ ಆಕೆಗೆ ಮನೆ ಬಿಡಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ವಾರಿಸ್ ಳ ಅಪ್ಪ, ಶ್ರೀಮಂತ ವೃದ್ಧನಿಂದ ಐದು ಒಂಟೆಗಳನ್ನು ವಧುದಕ್ಷಿಣೆಯಾಗಿ ತೆಗೆದುಕೊಂಡು ಅವನಿಗೆ ವಾರಿಸಳನ್ನು ಮದುವೆ ಮಾಡಿಕೊಡಲು ನಿಶ್ಚಯಿಸುತ್ತಾನೆ. ಈ ಮದುವೆಯನ್ನು ಒಪ್ಪದ ವಾರಿಸ್ ತಾಯಿಯ ನೆರವಿನಿಂದ ಮನೆ ಬಿಟ್ಟು ಸಹಸ್ರಾರು ಮೈಲುಗಳ ವಿಸ್ತೀರ್ಣದ ಮರುಭೂಮಿಯನ್ನು ಬರಿಗಾಲಲ್ಲಿ ಸವೆಸಿ ಸೊಮಾಲಿಯ ರಾಜಧಾನಿ ಮೊಗದಿಶು ನಗರವನ್ನು ತಲುಪುತ್ತಾಳೆ. ಅಲ್ಲಿಯ ತನಕ ವಾರಿಸ್ ಎದುರು ಕಂಡಿದ್ದು ಬದುಕಲ್ಲವದು… ಹೇಳಲಸಾಧ್ಯವಾದ ನೋವದು.
ಪ್ರತಿ ಸಾಲುಗಳಲ್ಲಿ ತನಗಾದ ಪ್ರತಿ ನೋವನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಬರೆದುಕೊಳ್ಳುತ್ತಾಳೆ ವಾರಿಸ್.
ವಾರಿಸ್ ಒಂದು ಕಡೆ ಬರೆಯುತ್ತಾಳೆ… ಮೊಗದಿಶು ನಗರಕ್ಕೆ ಹೋಗುವ ಸಂದರ್ಭದಲ್ಲಿ ಲಾರಿ ಚಾಲಕ ಮತ್ತು ಆತನೊಂದಿಗಿದ್ದವನಿಂದ ಅನುಭವಿಸಿದ್ದನ್ನು ಬರೆಯುತ್ತಾಳೆ, ತೆರೆದ ಮನಸ್ಸಿನಲ್ಲಿ ಬರೆಯುತ್ತಾಳೆ, ಯಾವುದೇ ಮುಚ್ಚುಮರೆಯಿಲ್ಲದೆ ಬರೆಯುತ್ತಾಳೆ…
(ವಾರಿಸ್ ಡಿರಿ)
‘ನೇರವಾಗಿ ನನ್ನ ಬಳಿ ಬಂದ ಆತ ತನ್ನ ಪ್ಯಾಂಟ್ ಕಳಚಿ ತನ್ನ ಗುಪ್ತಾಂಗವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದ. ನನ್ನ ತೊಡೆಯ ನಡುವೆ ತೂರಿಸಲು ಬಂದಾಗ ಆ ಕ್ಷಣಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ಏಕೆಂದರೆ, ನಾನೇ ಸ್ವತಃ ಇಂತಹ ಅಪಾಯವನ್ನು ಆಹ್ವಾನಿಸಿಕೊಂಡಿದ್ದೆ. ನಾನು ಬೇಡ ಬೇಡ ಎಂದು ಗೋಗರೆಯುತ್ತಾ ನನ್ನೆರಡು ತೊಡೆಗಳನ್ನು ಬಿಗಿಯಾಗಿ ಒಂದಕ್ಕೊಂದು ಅಂಟಿಸಿಕೊಂಡಂತೆ ಕುಳಿತೆ. ಸಿಟ್ಟಿಗೆದ್ದ ಆತ ನನ್ನ ಕೆನ್ನೆಗಳಿಗೆ ಬಾರಿಸುತ್ತಾ ತೊಡೆ ಅಗಲಿಸು ಎಂದು ಹೆದರಿಸುತ್ತಾ ನನ್ನನ್ನು ಕಲ್ಲುಗಳ ಮೇಲೆ ಕೆಡವಿ ಮೇಲೆ ಕುಳಿತುಕೊಂಡ.’
‘ಕಾಮುಕನಾಗಿದ್ದ ಅವನ ಜೊತೆ ಸೆಣಸುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಕೂಡಲೇ ಒಂದು ಉಪಾಯ ಮಾಡಿದೆ. ಉಚ್ಚೆ ಮಾಡಬೇಕೆಂದು ಪ್ರೀತಿಯಿಂದ ಬೇಡಿಕೊಂಡೆ. ಆತನಿಗೆ ಏನನಿಸಿತೋ ಏನೋ…? ಥೂ ಹಲ್ಕಾ ಮುಂಡೆ… ಹೋಗಿ ಬಾ ಎಂದ.”
ಲಾರಿಯ ಹಿಂಬದಿಗೆ ಬಂದು ಮೂತ್ರ ಮಾಡುವಂತೆ ನಟಿಸುತ್ತಾಳೆ ವಾರಿಸ್. ಚೂಪನೆಯ ಕಲ್ಲನ್ನು ಹುಡುಕಿ ಧೈರ್ಯದಿಂದ ಆತನನ್ನು ಎದುರಿಸಲು ಮುಂದಾಗುತ್ತಾಳೆ. ಅವನಿಗೆ ಸಹಕರಿಸುವವಳಂತೆ ಬಲಗೈಯಲ್ಲಿ ಆ ಚೂಪಾದ ಕಲ್ಲನ್ನು ಹಿಡಿದುಕೊಂಡು ಅವನ ಮುಂದೆ ಅಂಗಾತ ಮಲಗಿಕೊಳ್ಳುತ್ತಾಳೆ… ಆತ ಆಕೆಯ ಮೈ ಮೇಲೆ ಎರಗಲು ಯತ್ನಿಸುವಾಗ ಬಲಗೈಯಲ್ಲಿದ್ದ ಚೂಪಾದ ಕಲ್ಲಿಂದ ಆತನ ಕಿವಿಗೆ ಬಲವಾಗಿ ಹೊಡೆಯುತ್ತಾಳೆ. ಆತನ ತಲೆಯನ್ನು ಜಜ್ಜುತ್ತಾಳೆ… ಅವನಿಂದ ಪಾರಾಗುತ್ತಾಳೆ ವಾರಿಸ್.
ಹ್ಹು, ಅದೆಂತಹ ಭಯಾನಕ ಸ್ಥಿತಿ ಇದ್ದಿರಬಹುದು..? ವಾರಿಸ್ ಡಿರಿಯ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ನಿಮಗೆ ಏನೂ ಅನ್ನಿಸುವುದಿಲ್ವಾ…? ನಿಮಗೆ ದುಃಖ ಆಗುವುದಿಲ್ವಾ…? ನಿಮಗೆ ಏನನ್ನಿಸುತ್ತದೆ…? ವಾರಿಸ್ ಎನ್ನುವ ಹೆಣ್ಣು ಎದುರಿಸಿದ ಆ ಘೋರ ಘಟನೆಯ ಬಗ್ಗೆ ನಿಮ್ಮ ಎದೆ ನಡುಗುವುದಿಲ್ವಾ…? ಆಕೆಯ ಧೈರ್ಯದ ಬಗ್ಗೆ ಆಶ್ಚರ್ಯವೆನ್ನಿಸುವುದಿಲ್ವಾ…?
ಓದಿ : ಮಾರುಕಟ್ಟೆಗೆ ಲಗ್ಗೆ ಇಟ್ಟ ಹೀರೋ ‘ಬಿಎಸ್ 6 ಎಕ್ಸ್ ಪಲ್ಸ್ 200 ಟಿ’, ವಿಶೇಷತೆಗಳೇನು..?
ವಾರಿಸ್ ಎಂಬ ಮರುಭೂಮಿಯ ಹೂವಿನೊಳಗೆ ಅದೆಂತಹ ಗಟ್ಟಿ ಶಕ್ತಿ ಮರದೊಳಗೆ ಅಡಗಿದ್ದ ಕಿಡಿಯಂತೆ ಅವಿತಿದ್ದಿತ್ತು…? ವಾರಿಸ್, ಅದ್ಭುತ ಶಕ್ತಿ ಅಂತನ್ನಿಸುವುದಿಲ್ವಾ…?
ಅವಳ ಆತ್ಮ ಕಥೆಯನ್ನು ಪೂರ್ತಿಯಾಗಿ ಹೇಳಿ ನಿಮ್ಮ ಓದಿನ ಕುತೂಹಲವನ್ನು ನಾನು ಕಿತ್ತುಕೊಳ್ಳುವ ಕಳ್ಳನಾಗಲಾರೆ. ಈ ಮೇಲಿನ ಪ್ರಶ್ನೆಗಳನ್ನು ನಿಮ್ಮೊಳಗೆ ಮೃದುವಾಗಿಯೇ ಬಿಡುತ್ತೇನಷ್ಟೇ… ನೀವು ಕಥೆ ಕೇಳುವ ಕೇಳುಗರಷ್ಟೇ ಆಗಬೇಡಿ. ಓದುಗರಾಗಿ ಎನ್ನುವ ಬಯಕೆ ನನ್ನದು. ಅಷ್ಟೇ. ಅದಕ್ಕೂ ಮಿಗಿಲಾಗಿ ಆಕೆಯ ಬದುಕು ಒಂದು ಅನಿಸಿಕೆಯಲ್ಲಿಯೋ, ವಿಮರ್ಶೆಯಲ್ಲಿಯೋ, ಬರಹದಲ್ಲಿಯೋ ಬರೆದು ಬಿಡುವ ಅಥವಾ ಹೇಳಿ ಬಿಡುವಷ್ಟು ಸುಲಭದ ವಸ್ತುವಲ್ಲ. ಅದು ಕ್ಲಿಷ್ಟ.
ಚಿಕ್ಕಪ್ಪನ ಮನೆಯಲ್ಲಿ ಸೇವಕಿಯಾಗಿ ದುಡಿಯುತ್ತಾಳೆ. ನಂತರ ಮೊಗದಿಶು ನಗರದಲ್ಲಿನ ಅಕ್ಕನ ಮನೆಯಲ್ಲಿ, ಅದಾಗಿ ಮಾವನ ಮನೆ, ಅದಾದ ಮೇಲೆ ಚಿಕ್ಕಮ್ಮನ ಮನೆಗೆ ಬಂದು ಸೇರುತ್ತಾಳೆ ವಾರಿಸ್. ನಂತರ ಲಂಡನ್ ನಲ್ಲಿ ಸೋಮಾಲಿಯಾದ ರಾಯಭಾರಿಯಾಗಿದ್ದ ಮತ್ತೊಬ್ಬ ಚಿಕ್ಕಪ್ಪ, “ನಮ್ಮ ಮನೆಗೆ ಕೆಲಸದ ಹುಡುಗಿ ಬೇಕಾಗಿತ್ತು” ಎಂದು ಮಾತನಾಡುತ್ತಿದ್ದುದ್ದನ್ನು ತಿಳಿದ ವಾರಿಸ್ ಅಲ್ಲಿಗೆ ಹೋಗಲು ನಿರ್ಧರಿಸಿ ಚಿಕ್ಕಮ್ಮನಿಗೆ ತಿಳಿಸಿ ಅವಳ ನೆರವಿನಿಂದ ಲಂಡನ್ ಗೆ ಹೋಗಲು ತಯಾರಾಗುತ್ತಾಳೆ.
ಪ್ರಥಮ ಬಾರಿಗೆ ವಿಮಾನದ ಪ್ರಯಾಣದ ಬಗ್ಗೆ ಭಯವಾಗಿದ್ದರೂ ಗಗನಸಖಿಯ ಸಹಾಯದಿಂದ ಧೈರ್ಯವಾಗಿ ಹೊರಡುತ್ತಾಳೆ ಡಿರಿ.
ಲಂಡನ್ ಸೇರಿದ ವಾರಿಸ್, ಚಿಕ್ಕಮ್ಮನ ಮನೆಯಲ್ಲಿ ಪರಿಚಾರಿಕೆಯಾಗಿ ತನ್ನ ಹೊಸ ಜೀವನವನ್ನು ಪ್ರಾರಂಭಿಸುತ್ತಾಳೆ. ಇಂಗ್ಲಿಷ್ ಭಾಷೆಯ ಅರಿವಿಲ್ಲದೆ ಕಾರಣ ಚಿಕ್ಕಮ್ಮಳ ಮಗಳಾದ ಬಸ್ಮಾಳಿಂದ ಅಲ್ಪಸ್ವಲ್ಪ ಕಲಿಯತೊಡಗಿದಳು ಮತ್ತು ರೂಪದರ್ಶಿ ಜಗತ್ತಿನ ಬಗ್ಗೆ ಆಸಕ್ತಿಯಿದ್ದ ವಾರಿಸ್ ಮನೆಗೆ ಬರುತ್ತಿದ್ದ ಪತ್ರಿಕೆಗಳ ಜಾಹೀರಾತುಗಳನ್ನು ನೋಡಿ ಆಕರ್ಷಿತಳಾಗುತ್ತಾಳೆ. ಅಲ್ಲದೆ ರೂಪದರ್ಶಿಯಾಗಿದ್ದ ಚಿಕ್ಕಮ್ಮನ ಗೆಳತಿಯ ಮಗಳು ಇಮ್ರಾನ್ ಳನ್ನು ಕೇಳಿ ತಿಳಿದುಕೊಳ್ಳುವುದಕ್ಕೆ ಮುಂದಾಗುತ್ತಾಳೆ.. ಕಪ್ಪನೆಯ, ತೆಳ್ಳಗಿನ, ಪುಟ್ಟ ಬಾಯಿಯ, ನೋವನ್ನು ಸಿಹಿ ಭಕ್ಷ್ಯದಂತೆ ಉಂಡ ಈ ಕೃಷ್ಣ ಸುಂದರಿ ವಾರಿಸ್.
ಒಮ್ಮೆ ಚಿಕ್ಕಪ್ಪನ ತಂಗಿ ಮಗಳು ಸೋಫಿಯಾಳನ್ನು ಶಾಲೆಗೆ ಬಿಡುವಾಗ ಒಬ್ಬ ಫೋಟೋಗ್ರಾಫರ್ ಇವಳನ್ನು “ನಾನೊಬ್ಬ ಫೋಟೋಗ್ರಾಫರ್, ನನಗೆ ಆಫ್ರಿಕನ್ ಹೆಣ್ಣುಮಕ್ಕಳ ಚಿತ್ರ ಬೇಕು” ಅಸಕ್ತಿಯಿದ್ದರೆ ಈ ವಿಳಾಸಕ್ಕೆ ಬರುವಂತೆ ತಿಳಿಸಿ ವಿಸಿಟಿಂಗ್ ಕಾರ್ಡ್ ಅನ್ನು ನೀಡುತ್ತಾನೆ. ವಾರಿಸ್ ಏನು ತೋಚದಂತಾಗುತ್ತಾಳೆ. ಕನಸು ನನಸಾಗುವ ದಾರಿಯಲ್ಲಿ ಮತ್ತೆ ವಾರಿಸ್ ಗೆ ಭೀಮಗಾತ್ರದಲ್ಲಿ ಮತ್ತದೇ ನೋವು, ದುಃಖ ಅಷ್ಟೇ ಅಲ್ಲ ಎದೆಗೊದೆವ ದುಃಖದಲೆ.
ಚಿಕ್ಕಮ್ಮನ ಮನೆಯಲ್ಲಿ ಏನೋ ತುಸು ಮಟ್ಟಿಗೆ ನೆಮ್ಮದಿಯಿಂದ ಇದ್ದ ವಾರಿಸ್ ಳಿಗೆ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಸ್ವಂತ ಚಿಕ್ಕಮ್ಮನ ಮಗ ಅರ್ಥಾತ್ ಸಹೋದರನೇ ಇವಳ ಮೇಲೆ ಅತ್ಯಾಚಾರ ಮಾಡಲು ಯತ್ನಿಸುತ್ತಾನೆ… ವಾರಿಸ್ ನಿಜಕ್ಕೂ ಬೇಸತ್ತು ಹೋಗುತ್ತಾಳೆ. ಕೊರಗುತ್ತಾಳೆ. ಹರಿದೆದೆಗೆ ಮತ್ತೆ ಮತ್ತೆ ಮೇಲಿಂದ ಮೇಲೆ ಆಗುತ್ತಿದ್ದ ನೋವಿನ ಹೊಡೆತಕ್ಕೆ ಎದುರುಗೊಳ್ಳುತ್ತಾ ಮುಂದೆ ಸಾಗುತ್ತಾಳೆ. ರೂಪದರ್ಶಿಯಾಗಿ ಹೊರ ಹೊಮ್ಮುತ್ತಾಳೆ. ಹಾಲಿವುಡ್ ನ ಸಿನೆಮಾಗಳಲ್ಲಿ ಅವಕಾಶ ಪಡೆಯುತ್ತಾಳೆ. ವಾರಿಸ್ ನ ಕಥೆ ಒಂದು ಚಿತ್ರಕಥೆಯಂತೆ ಸಾಗುತ್ತದೆ.
ಓದಿ : ಪ್ರವಾಸಿ ತಾಣದಲ್ಲಿ ರಸ್ತೆ ಬದಿ ಮೂತ್ರ ವಿಸರ್ಜನೆ : ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಆಕ್ರೋಶ
ಮದುವೆಯಾಗುತ್ತದೆ. ತಾಯಿಯಾದ ಸುಖದ ಕ್ಷಣಗಳನ್ನು ಕಾಣುತ್ತಾಳೆ. ತನ್ನ 5 ನೇ ವಯಸ್ಸಿನಲ್ಲಿ ತನಗೆ ಮಾಡಿದ್ದ ಯೋನಿ ಛೇದನ, ಅದರಿಂದಾಗಿ ಆಕೆ ಮೂತ್ರ ವಿಸರ್ಜಿಸುವಾಗ ಅನುಭವಿಸುತ್ತಿದ್ದ ನೋವು ಮತ್ತು ತಿಂಗಳ ಮುಟ್ಟಿನ ಸಮಯದಲ್ಲಿ ಅನುಭವಿಸುತ್ತಿದ್ದ ಯಾತನೆಗಳು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸರಿಪಡಿಸಿಕೊಂಡರೂ ಮರೆಯಲಾಗದೆ ಶಾಶ್ವತವಾಗಿ ಉಳಿದುಕೊಂಡಿವೆ” ಎನ್ನುವಾಗ ನಿಜವಾದ ಓದುಗನೊಬ್ಬನಿಗೆ ಕಣ್ಣೀರು ಕಪಾಲ ಮಾರ್ಗವನ್ನು ಕಂಡುಕೊಳ್ಳದೇ ಹೇಗೆ ಇದ್ದೀತು..?
ಕ್ರೌರ್ಯದ ಬಲಿಪಶುವಾದ ವಾರಿಸ್ ಡಿರಿ ಎಂಬ ಜಗತ್ಪ್ರಸಿದ್ಧ ರೂಪದರ್ಶಿ ಮುಂದೆ ಆಫ್ರಿಕಾದ ಬಡರಾಷ್ಟ್ರಗಳ ಬುಡಕಟ್ಟು ಜನಾಂಗದಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಕ್ರಿಯೆ ವಿರುದ್ಧ ನಿಂತದಕ್ಕಾಗಿ ವಿಶ್ವಸಂಸ್ಥೆ ಈಕೆಗೆ ಹಿಂದಿನ ಎಲುಬಾಗಿ ನಿಲ್ಲುತ್ತದೆ. ಆಫ್ರಿಕಾದ ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯಕ್ರಮಕ್ಕೆ ತನ್ನ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳುತ್ತದೆ.
‘ಡೆಸರ್ಟ್ ಫ್ಲವರ್’ ಪ್ರಕಟವಾದ ಮೇಲೆ ಜಗತ್ಪ್ರಸಿದ್ಧ ರೂಪದರ್ಶಿ, ಆಫ್ರಿಕಾದ ಸೊಮಾಲಿಯಾದ ಮುಸ್ಲಿಂ ಅಲೆಮಾರಿ ಬುಡಕಟ್ಟು ಜನಾಂಗದಿಂದ ಬಂದ ಅನಕ್ಷರಸ್ಥೆ ವಾರಿಸ್ ಡಿರಿ ಯ ಬದುಕಿನ ಕುರಿತಾದ ‘ನೊಮೆಡ್ ಇನ್ ನ್ಯೂಯಾರ್ಕ್’ ಎಂಬ ಸಾಕ್ಷ್ಯ ಚಿತ್ರವನ್ನು ಬಿಬಿಸಿ ಚಾನೆಲ್ ನಿರ್ಮಾಣ ಮಾಡುತ್ತದೆ. ಆಸ್ಕರ್ ಪ್ರಶಸ್ತಿ ಪಡೆದ ನಿರ್ದೇಶಕನೊಬ್ಬನ ನಿರ್ದೇಶನದಲ್ಲಿ ‘ಡೆಸರ್ಟ್ ಫ್ಲವರ್’ ಎಂಬ ಹಾಲಿವುಡ್ ಸಿನೆಮಾವೊಂದು ನಿರ್ಮಾಣವಾಗುತ್ತದೆ ಎನ್ನುವುದು ಅಚ್ಚರಿಯೇ ಸರಿ.
ಹೀಗೆ.. ಬದುಕನ್ನು ಆಶ್ಚರ್ಯವೆಂಬಂತೆ ಬದುಕುತ್ತಾ, ವ್ಯಾಗ್ರನ ದವಡೆಯಿಂದ ಪಾರಾಗಿ, ರೂಪದರ್ಶಿಯಾಗಿ ಮೆರೆದ ವಾರಿಸ್ ಡಿರಿಯ ಬದುಕು ಕೇವಲ ಬದುಕಷ್ಟೇ ಆಗಿರಲಿಲ್ಲ, ಸಮಾಜವನ್ನು ಪ್ರತಿಬಿಂಬಿಸುವ ಕೈದೀವಿಗೆಯೂ ಆಗಿತ್ತು ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ.
ಇದಿಷ್ಟೇ ಅಲ್ಲ. ಒಳಗಿನ್ನೂ ಇದೆ. ಸಂಕೋಚ, ಮುಚ್ಚುಮರೆಯಿಲ್ಲದೆ ಅಕ್ಷರಗಳಿಗಿಳಿಸಿದ ವಾರಿಸ್ ಡಿರಿಯ ಕಂಬನಿಯೋಳಗಿನ ಭಾವ ಇನ್ನೂ ಇದೆ. ಅದು ಕತ್ತಲೆಯ ಆಕ್ರಂದನ. ‘ಮರುಭೂಮಿಯ ಹೂ’ ನಿಮ್ಮ ಓದಾಗಲಿ.
-ಶ್ರೀರಾಜ್ ವಕ್ವಾಡಿ
ಓದಿ : ಸನ್ಯಾಸ ದೀಕ್ಷೆ ಪಡೆದ್ರಾ ಧೋನಿ ?…ಸಂಚಲನ ಮೂಡಿಸಿದ ಎಂಎಸ್‍ಡಿ ನ್ಯೂ ಲುಕ್