Advertisement

ಸೇನಾ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಕೃತಿ ‘ಸೇನಾನುಭವ’

06:18 PM Apr 02, 2021 | Team Udayavani |

ಸೇನಾ ಬದುಕಿನ ವಿವರಗಳನ್ನು ಎಳೆ ಎಳೆಯಾಗಿ ನೀಡುವ ಈ ಕೃತಿ ಪ್ರಾಯಶಃ ಕನ್ನಡ ಸಾಹಿತ್ಯದಲ್ಲೇ ಹೊಸತು. ತಮ್ಮ ವಿದ್ವತ್ಪೂರ್ಣ ಮುನ್ನುಡಿಯಲ್ಲಿ ರಮೇಶ ಭಟ್ ಬೆಳಗೋಡು ಹೇಳುವಂತೆ ಇಂಗ್ಲಿಷಿನಲ್ಲಿ ಈ ವಿಷಯದ ಕುರಿತು ಸಾಕಷ್ಟು ಸೃಜನಶೀಲ ಸಾಹಿತ್ಯ ಬಂದಿದೆ. ಈ ಬಗ್ಗೆ ಆಲೋಚಿಸುವಾಗ ಅರ್ನೆಸ್ಟ್‌ ಹೆಮಿಂಗ್ ವೇಯ Farewell to Arms ,  ಮಾರ್ಗರೆಟ್ ಮಿಶೆಲ್ ಅವರ Gone with the Wind, ಟಾಲ್ ಸ್ಟಾಯ್ ಅವರ  War and Peace ,  ಮನೋಹರ ಮಳಗಾಂವ್ ಕರ್ ಅವರ Distant Drum,  ಅರುಣ್ ಜೋಷಿಯವರ The Apprentice ಮೊದಲಾದ  ಕಾದಂಬರಿಗಳಲ್ಲಿ ಸೈನಿಕರು ಅನುಭವಿಸುವ ಕಷ್ಟ ಪರಂಪರೆಗಳು, ಸೇನೆಯೊಳಗಿನ ರಾಜಕೀಯ, ಭ್ರಷ್ಟಾಚಾರ, ಅನ್ಯಾಯ, ವಂಚನೆಗಳ ಚಿತ್ರಣ ನೆನಪಾಗುತ್ತವೆ.  ಆದರೆ  ಅಲ್ಲೆಲ್ಲ ನಮಗೆ ಸಿಗುವುದು ಸೇನೆಯ ಹೊರಗೆ ನಿಂತ ಲೇಖಕರು ತಾವು ಕೇಳಿ ತಿಳಿದುಕೊಂಡದ್ದನ್ನು ಕಟ್ಟುಕಥೆಯ ಹಂದರದೊಳಗಿಟ್ಟು ಬರೆದ ವಿಚಾರಗಳು ಮಾತ್ರ.

Advertisement

ಓದಿ : ಕೋನಹಿಪ್ಪರಗಾ ಗ್ರಾಮವಾಸ್ತವ್ಯ-ಹೈನುಗಾರಿಕೆ ಅಭಿವೃದ್ಧಿಗೆ ಬದ್ಧ: ಶಾಸಕ ಡಾ| ಅಜಯಸಿಂಗ್‌

ನಾವಡರ ‘ಸೇನಾನುಭವ’ ಇವೆಲ್ಲಕ್ಕಿಂತ ಸಂಪೂರ್ಣ ಭಿನ್ನವಾದುದು. ಯಾಕೆಂದರೆ ಅವರು ನೀಡುವುದು ಸ್ವಾನುಭವದ ಮೂಲಕ  ಅವರು ಗಮನಿಸಿದ ಅಧಿಕೃತ   ವೈಜ್ಞಾನಿಕ ವಾಸ್ತವಗಳನ್ನು. ಆದ್ದರಿಂದಲೇ ಅವರ ಕೃತಿ ‘ಸೇನಾನುಭವ’ವು ಸೇನಾ ಬದುಕಿನ ಬಗ್ಗೆ ತಿಳಿದುಕೊಳ್ಳ ಬಯಸುವವರಿಗೆ ಮತ್ತು ಸೇನೆಯ ಬಗೆಗೆ ತಪ್ಪು ಕಲ್ಪನೆ ಹೊಂದಿ ಪೂರ್ವಗ್ರಹವನ್ನು ಬೆಳೆಸಿಕೊಂಡವರಿಗೆ ಹೆಚ್ಚು ಉಪಯುಕ್ತ. ಕಾದಂಬರಿಗಳಲ್ಲಿ ಕಾಣುವ ಸೃಜನಶೀಲತೆಯೇ ಬೇರೆ. ಇಂಥ ಕೃತಿಯ ಹಿಂದಿರುವ ಸೃಜನಶೀಲತೆಯೇ ಬೇರೆ.

‘ಸೇನಾನುಭವ’ದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಸೇನೆಯ ಸಂರಚನೆಯಿಂದ ಹಿಡಿದು  ಮಧ್ಯಪ್ರದೇಶದ ಪ್ರಕೃತಿ ಸೌಂದರ್ಯದ ತಾಣವಾದ ಪಂಚಮಢಿಗೆ ಹೋಗಿ ಲೇಖಕರು ಪಡೆದ ತರಬೇತಿ, ಸೈನಿಕರಾಗಿ ಮತ್ತು ನಂತರ ಸೇನಾಶಿಕ್ಷಕರಾಗಿ ಅವರು ಪಡೆದ ಸುಖಾನುಭವ, ಸೇನೆಯ ದಿನಚರಿ,ಆರಂಭದ ದಿನಗಳಲ್ಲಿ ಅವರು ಪಟ್ಟ ಕಷ್ಟಗಳು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕ್ರೂರ ಉಗ್ರವಾದಿಗಳು ಕಾಶ್ಮೀರಿ ಪಂಡಿತರನ್ನು ಹತ್ಯೆಗೈದು ಕೆಲವರನ್ನು ಅಲ್ಲಿಂದ ಓಡಿಸಿದ್ದು, ಉಗ್ರವಾದಿಗಳು ಕೈಗೆ ಸಿಕ್ಕರೂ ತಮ್ಮ ಕೈಯಲ್ಲಿ ಬಂದೂಕಿದ್ದರೂ ಹೊಡೆಯಲು ಅಧಿಕಾರವಿಲ್ಲದೆ ಸುಮ್ಮನಿರಬೇಕಾಗಿ ಬಂದ ಅಸಹಾಯಕತೆ ಮೊದಲಾದ ವಿವರಗಳೊಂದಿಗೆ   ಸೇನೆಯಲ್ಲಿ ಅವರು ಕಂಡ ಭಾರತದ ವಿವಿಧತೆಯ ದರ್ಶನ, ಧಾರ್ಮಿಕ ಸಾಮರಸ್ಯ, ಸಾವಿರ ಸಮಸ್ಯೆಗಳ ಮಧ್ಯೆಯೂ ಅಲ್ಲಲ್ಲಿ ಅನುಭವಿಸಿದ ರೋಮಾಂಚಕಾರಿ ಸನ್ನಿವೇಶಗಳು, ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ  ತಾವು ಭಾಗಿಯಾಗಿದ್ದು  ಮೊದಲಾದ ಅನುಭವಗಳನ್ನು ಕುತೂಹಲ ಮೂಡಿಸುವ ಶೈಲಿಯಲ್ಲಿ ಹೇಳುತ್ತಾ ಹೋಗುತ್ತಾರೆ. ಕಾರ್ಗಿಲ್ ಯುದ್ಧದ  ಅವರ ನೆನಪುಗಳೂ ಇಲ್ಲಿವೆ. ಸೈನ್ಯದ ಸಂಪ್ರದಾಯ ಮತ್ತು ರೀತಿ ರಿವಾಜುಗಳನ್ನು ವಿವರಿಸುತ್ತ ಆಹಾರ-ಪಾನೀಯಗಳ ವಿಚಾರವಾಗಿ ಜನರಿಗಿರುವ ತಪ್ಪು ಕಲ್ಪನೆಗಳನ್ನು ಅಲ್ಲಗಳೆದು ಅವರು  ಸತ್ಯದ ಅರಿವನ್ನು ಮೂಡಿಸುತ್ತಾರೆ.

ಓದಿ :  ವಾಟ್ಸಪ್‍ನಿಂದ ಶೀಘ್ರದಲ್ಲೇ ಹೊಸ ಫೀಚರ್ !  

Advertisement

ಭಾಗ 2ರಲ್ಲಿ  ರಾಜಕೀಯ ವಿಚಾರಗಳಿವೆ. ಸೇನೆಯ ವಿರುದ್ಧ ಘೋಷಣೆ ಕೂಗುವ ವಿದ್ಯಾರ್ಥಿ ಸಮೂಹವೊಂದು ‘ಭಾರತೀಯ ಸೇನೆಯು ಕಾಶ್ಮೀರದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ’ ಎಂದು ಮಾಡಿದ ಆರೋಪಕ್ಕೆ ಲೇಖಕರು  ತಕ್ಕ ಉತ್ತರ ನೀಡುತ್ತಾರೆ. ಸೈನಿಕರ ಕಠಿಣ ದಿನಚರಿ, ಕಾರ್ಯ ನಿರ್ವಹಣೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನಾತ್ಮಕ ಸಂಸ್ಥೆಗಳ ರಕ್ಷಣೆ ಮಾಡುವ ಬಗೆಗಳನ್ನು ವಿವರಿಸುತ್ತಾರೆ. ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದವರಿಗೆ ಕೇವಲ ಹಣ ನೀಡಿ ಕೈತೊಳೆದುಕೊಂಡರಷ್ಟೇ ಸಾಲದು, ಅವರ ಬಂಧುಗಳಿಗೆ ನೈತಿಕ ಬೆಂಬಲ ಮತ್ತು ಸಾಂತ್ವನ ನೀಡುವುದೂ ಅಗತ್ಯವೆನ್ನುತ್ತಾರೆ. ಸೈನಿಕರನ್ನು ನಂಜಿನ ಮಾತುಗಳಿಂದ ನಿಂದಿಸುವವರನ್ನು ವಿರೋಧಿಸಿ, ಯುದ್ಧಕಾಲದಲ್ಲೂ ಶಾಂತಿಕಾಲದಲ್ಲೂ  ದೇಶಕ್ಕಾಗಿ ದುಡಿಯುವ ಸೈನಿಕರೇ ನಿಜವಾದ ಹೀರೋಗಳು ಅನ್ನುತ್ತಾರೆ. ದೇಶದ್ರೋಹಿಗಳೆದುರು ಕಾನೂನು ಅಸಹಾಯಕವಾಗುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಚೀನಾದ ಆಕ್ರಮಣಕಾರಿ ನೀತಿ, ಜನರಲ್ ಕಾರ್ಯಪ್ಪರ ಅದ್ಭುತ ಸಾಮರ್ಥ್ಯ, Article 370ನ್ನು ರದ್ದು ಮಾಡಿದ ಸರಕಾರದ ದಿಟ್ಟ ಹೆಜ್ಜೆ, ಸರ್ಕಾರಿ ನೌಕರಿ ಬಯಸುವವರಿಗೆ ಕಡ್ಡಾಯ ಮಿಲಿಟರಿ ಸೇವೆಯ ಕುರಿತಾದ ಚರ್ಚೆ- ಇವೇ ಮೊದಲಾದ ಮಹತ್ವದ ವಿಷಯಗಳಿಗೆ ಎರಡನೇ ಭಾಗ ಮೀಸಲಾಗಿದೆ.

ನಾವಡರ ಬರವಣಿಗೆಯ ಶೈಲಿ ಹೃದ್ಯವಾಗಿದೆ. ಸಾಹಿತ್ಯದ ಸ್ಪರ್ಶವಿರುವ ಅವರ ಭಾಷೆ ಸ್ಫುಟವಾಗಿದೆ. ಗಂಭೀರ ಸಂದೇಶಗಳ ಸಂದರ್ಭದಲ್ಲೂ ಕೆಲವೊಮ್ಮೆ ಅವರು ಬಳಸುವ ಹಾಸ್ಯ ಚಟಾಕಿಗಳು ಆಪ್ತವಾಗುತ್ತವೆ.  ಸೇನಾ ಬದುಕಿನ  ಕುರಿತು ಹಲವು ಬಗೆಯಲ್ಲಿ   ಅರಿವು ಮೂಡಿಸುವ ಇಂಥ ಪುಸ್ತಕಗಳ ಅಭಾವವಿರುವ  ಕನ್ನಡ ಸಾಹಿತ್ಯಕ್ಕೆ ನಾವಡರು ನೀಡಿರುವ ಈ ಕೊಡುಗೆ ಸ್ತುತ್ಯರ್ಹವಾಗಿದೆ.

ಡಾ.ಪಾರ್ವತಿ ಜಿ.ಐತಾಳ್

ಹಿರಿಯ ಸಾಹಿತಿಗಳು, ಅನುವಾದಕರು

ಓದಿ :ಬಾಲಿವುಡ್ ಬೆಡಗಿ ಆಲಿಯಾ ಭಟ್ ಗೆ ಕೋವಿಡ್ ಪಾಸಿಟಿವ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next