Advertisement
‘ಮೆಟ್ಟಲಿಳಿದು ಹೋದ ಪಾರ್ವತಿ’ ಕಮಲಾ ಹೆಮ್ಮಿಗೆಯವರು ಅನುವಾದಿಸಿದ ಗ್ರೇಸಿಯವರ 18 ಸಣ್ಣ ಕತೆಗಳ ಸಂಕಲನ. ಗ್ರೇಸಿಯವರು ಅತ್ಯಂತ ಕಡಿಮೆ ಸ್ಪೇಸ್ ನಲ್ಲಿ ಅತ್ಯಂತ ಹೆಚ್ಚು ಹೇಳುವವರು. ‘ಒಂದು ಸತ್ಯ ಸಂಧ ಪುಟದ ನಕಲು.’ ಕಥೆಯಲ್ಲಿ ಹೆಣ್ಣನ್ನು ತನಗೆ ಬೇಕಾದಂತೆ ಕಾಮ ತೃಷೆಯನ್ನು ಹಿಂಗಿಸಲು ಬಳಸಿ ಒಂದು ಮಗುವನ್ನೂ ಕೊಟ್ಟು ಶಾಶ್ವತವಾಗಿ ಬಿಟ್ಟು ಹೋಗುವ ಮಹಾಭಾರತದ ಪರಾಶರನಂಥ ಒಬ್ಬ ವ್ಯಕ್ತಿ ಇದ್ದಾನೆ.
Related Articles
Advertisement
‘ಪಾಂಚಾಲಿ’ಯಂತೂ ಗ್ರೇಸಿಯವರು ನಿರ್ಮಿಸಿದ ಅದ್ಭುತ ಶಿಲ್ಪ. ನೆರೆಮನೆಯಲ್ಲಿ ಬಾಡಿಗೆಗಿದ್ದ ಐವರನ್ನು ಏಕಕಾಲದಲ್ಲಿ ಪ್ರೀತಿಸಿ, ಅರ್ಯಾರಿಗೂ ಪರಸ್ಪರ ಗೊತ್ತಾಗದ ಹಾಗೆ ಐವರನ್ನೂ ಮದುವೆಯಾಗುವ ಕೃಷ್ಣೆ ಅವರು ಐವರ ಜತೆಗೂ ಬೇರೆ ಬೇರೆಯಾಗಿ ರಾತ್ರಿಗಳನ್ನು ಕಳೆಯುತ್ತಾಳೆ. ಆದರೆ ಅವರು ಹೆಂಡತಿಯನ್ನು ಭೋಗಿಸುವ ರೀತಿ ಅವಳಿಗೆ ಇಷ್ಟವಾಗುವುದಿಲ್ಲ. ಪ್ರತಿಯೊಬ್ಬರಲ್ಲೂ ಅವಳು ಒಂದಿಲ್ಲೊಂದು ದೋಷಗಳನ್ನು ಕಾಣುತ್ತಾಳೆ. ಕೊನೆಗೆ ಆ ಐವರನ್ನೂ ಬಿಟ್ಟು ದೋಷರಹಿತನಾದ ಪೀತಾಂಬರಧಾರಿಯನ್ನು ಹುಡುಕುತ್ತ ಹೋಗುತ್ತಾಳೆ. ಹೆಣ್ಣು ಪುರುಷನಿಂದ ಬಯಸುವ ನಿಜವಾದ ಪ್ರೀತಿಯ ಅಂತ್ಯವಿಲ್ಲದ ಹುಡುಕಾಟವನ್ನು ಈ ಕತೆ ಚಿತ್ರಿಸುತ್ತದೆ. ‘ಮೆಟ್ಟಲಿಳಿದು ಹೋದ ಪಾರ್ವತಿ’ ಪುಸ್ತಿಕದ ಶೀರ್ಷಿಕೆ ಕಥೆ. ಅಪಾರವಾದ ಜೀವನಾಸಕ್ತಿಯುಳ್ಳ ನಿರೂಪಕಿಯ ಗೆಳತಿ ಪಾರ್ವತಿ ರಾಮನಾಥನನ್ನು ಮದುವೆಯಾದ ನಂತರ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿ ಆಕೆಗೆ ಡ್ರೈವಿಂಗ್ ಕಲಿಸುವ ಉಣ್ಣಿಚೇಟನಿಂದ ಆಕರ್ಷಿತಳಾಗಿ , ಕೊನೆಗೆ ಅವನ ಕಾಮವಾಸನೆಯ ಅರಿವಾದ ತಕ್ಷಣ ಅವನನ್ನು ಬಿಡುತ್ತಾಳೆ. ಆದರೆ ಆತ ಅವಳನ್ನು ಬ್ಲಾಕ್ ಮೇಲ್ ಮಾಡುತ್ತಾನೆ. ಕೆಲವು ಕಾಲದ ನಂತರ ನಿರೂಪಕಿ ಪಾರ್ವತಿಯನ್ನು ಇನ್ನೊಮ್ಮೆ ಭೇಟಿಯಾದಾಗ ಅವಳು ಇಪ್ಪತ್ತರ ಹರೆಯದ ತರುಣನ ಪ್ರೀತಿಯಲ್ಲಿ ಸಿಲುಕಿರುತ್ತಾಳೆ. ಅಂದಿನಿಂದ ನಿರೂಪಕಿಗೆ ಅವಳ ಮೇಲಿನ ಗೌರವ ಮಾಯವಾಗುತ್ತದೆ. ಈ ಕತೆಯಲ್ಲಿ ಹೆಣ್ಣಿನ ದೌರ್ಬಲ್ಯವೇ ಕಥೆಗಾರ್ತಿಯ ಸಮಸ್ಯೆಯಾದಂತೆ ಕಾಣುತ್ತದೆ. ಅಥವಾ ಇದೂ ಪ್ರೀತಿಗಾಗಿ ಹೆಣ್ಣಿನ ನಿರಂತರ ಹುಡುಕಾಟದ ಚಿತ್ರಣವೇ ಇರಬಹುದು.
ಓದಿ : ಎಲ್ಲವನ್ನೂ ಎಸ್ ಐಟಿ ಯವರೇ ನೋಡಿಕೊಳ್ಳುತ್ತಾರೆ: ಗೃಹ ಸಚಿವ ಬೊಮ್ಮಾಯಿ
ಒಟ್ಟಿನಲ್ಲಿ ಇದರಲ್ಲಿರುವ 18 ಕತೆಗಳೂ ಸ್ತ್ರೀ ಕೇಂದ್ರಿತವಾಗಿದ್ದು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯರನ್ನು ಸುತ್ತಿಕೊಳ್ಳುವ ಹತ್ತಾರು ಸಮಸ್ಯೆಗಳನ್ನು ಚಿತ್ರಿಸುತ್ತವೆ. ಗ್ರೇಸಿಯವರ ಕತೆಗಳ ರಚನಾ ಬಂಧವು ಎಷ್ಟು ಬಿಗಿಯಾಗಿದೆ ಅಂದರೆ ಅವುಗಳಿಂದ ಒಂದೇ ಒಂದು ಶಬ್ದವನ್ನು ಸಹ ತೆಗೆಯುವಂತಿಲ್ಲ. ಕಥೆಗಳಲ್ಲಿ ಪ್ರತಿಮೆ–ಸಂಕೇತಗಳು ಯಥೇಷ್ಟವಾಗಿವೆ. ಮುಖ್ಯವಾಗಿ ಅವರು ಮಹಾಭಾರತದ ಪಾತ್ರಗಳನ್ನು–ಕುಂತಿ, ದ್ರೌಪದಿ, ಪಂಚಪಾಂಡವರು, ಪರಾಶರ ಮೊದಲಾದವರನ್ನು ಪ್ರತಿಮೆಗಳಾಗಿಸುತ್ತಾರೆ.