ಸಂತೋಷ್ ಅನಂತಪುರ ಅವರ ಸಣ್ಣ ಕಥಾ ಸಂಕಲನ ‘ಕಾಗೆ ಮತ್ತು ಕಡ್ಲೆಬೇಳೆ ಪಾಯಸ’ ದ ಹನ್ನೊಂದು ಕಥೆಗಳು ಕನ್ನಡ ಸಣ್ಣ ಕಥಾ ಪ್ರಕಾರವು ಕಾಲಿಡುತ್ತಿರುವ ಹೊಸ ಹೊರಳು ದಾರಿಯತ್ತ ಬೆರಳು ಮಾಡಿ ತೋರಿಸುತ್ತಿರುವಂತಿದೆ. ವಸ್ತು, ವಿನ್ಯಾಸ, ನಿರೂಪಣಾ ಶೈಲಿ, ತಂತ್ರಗಳ ದೃಷ್ಟಿಯಿಂದ ಇಲ್ಲಿನ ಕಥೆಗಳು ಭಿನ್ನವಾಗಿದ್ದು ಓದುಗನ ಕುತೂಹಲವನ್ನು ಹೆಚ್ಚಿಸುತ್ತ ಹೋಗುವ ಗುಣವನ್ನು ಹೊಂದಿವೆ. ಸಣ್ಣ ಕಥೆಗಳು ಯಾವುದಾದರೊಂದು ಮುಖ್ಯ ಘಟನೆಯ ಸುತ್ತ ಕಟ್ಟಲ್ಪಟ್ಟಿರಬೇಕು ಎಂಬ ನಿಯಮವನ್ನು ಈ ಕಥೆಗಳು ಅನುಸರಿಸುವುದಿಲ್ಲ. ಆ ಕಾರಣದಿಂದಾಗಿ ಫಕ್ಕನೆ ಓದಿದಾಗ ಇವು ಕತೆಗಳು ಹೌದೇ ಅಲ್ಲವೇ ಎಂಬ ಅನುಮಾನವೂ ಬರಬಹುದು. ಆದರೆ ಇಲ್ಲಿನ ಕಥೆಗಳು ಹಿಂದೆ ನಡೆದಿರಬಹುದಾದ ಒಂದು ಘಟನೆಯ ಕುರಿತು ನಿರೂಪಕ ಅಥವಾ ಕಥಾ ನಾಯಕನ ಯೋಚನಾ ಲಹರಿಯಂತಿವೆ ಮತ್ತು ಆ ಯೋಚನೆಗಳಲ್ಲಿಯೇ ಆ ಘಟನೆಯ ಸುಳಿವು ಸೂಚ್ಯವಾಗಿ ಓದುಗನಿಗೆ ಸಿಗುತ್ತದೆ.
ಸಂಕಲನದ ಕಥೆಗಳಲ್ಲಿ ಹೆಚ್ಚಿನವು ಗಂಡು-ಹೆಣ್ಣುಗಳ ನಡುವಣ ಪ್ರೇಮ
ಪ್ರಣಯ ದಾಂಪತ್ಯಗಳ ಕುರಿತಾದ ಕಥೆಗಳು. ಹರಿವ ತೊರೆಯ ಲಹರಿ, ಸಂಸಾರ ಬಂಧನಾತ್,ಚೆಂಡೆ, ಹೇಳಿಕೊಳ್ಳಲಾಗದ ನಾನು ,ಕಿ..ಕಾ.. ಮೊದಲಾದ ಕಥೆಗಳ ಮೂಲಕ ದಾಂಪತ್ಯವೆನ್ನುವ ಸಿದ್ಧ ಚೌಕಟ್ಟಿನ ಹಿಂದಿರುವ ಕೃತಕ ಮುಖವಾಡವನ್ನು ಕಿತ್ತೊಗೆದು ಮನುಷ್ಯರು ಸಂಬಂಧಗಳ ನಿಜವನ್ನು ಗುರುತಿಸಬೇಕಾದ ಅನಿವಾರ್ಯತೆ ಯನ್ನು ಒತ್ತಿ ಹೇಳಲಾಗಿದೆ.ಗಂಧ ಎಂಬ ಕಥೆಯಲ್ಲಿ ‘ತಾನೊಂದು ಬಗೆದರೆ ದೈವ ಬೇರೊಂದು ಬಗೆದಿತ್ತು’ಎನ್ನುವ ಹಾಗೆ ಮನುಷ್ಯನ ಎಣಿಕೆಗೆ ವಿರುದ್ಧವಾಗಿ ಬದುಕಿನ ಘಟನೆಗಳು ನಡೆಯುವ ದುರಂತದ ಕಥೆಯಿದೆ. ವಿಧಿಯ ಮುಂದೆ ಸೂರ್ಯನ ಪ್ರಖರತೆಯಾಗಲಿ ಚಂದ್ರನ ಕಾಂತಿಯಾಗಲಿ ಇದ್ದ ಹಾಗೆಯೇ ಇರಲಾರದು ಎನ್ನುವ ನಂಬಿಕೆ ಕಾಣುತ್ತದೆ.
ಶೀರ್ಷಿಕೆಯ ‘ಕಾಗೆ ಮತ್ತು ಕಡ್ಲೆಬೇಳೆ ಪಾಯಸ’ ಮನಶ್ಶಾಸ್ತ್ರೀಯ ನೆಲೆಯಲ್ಲಿ ರಚಿತವಾದ ಕಥೆ. ಅಡಿಗಲ್ಲೇ ಇಲ್ಲದ ನಂಬಿಕೆಯೊಂದು ಹೇಗೆ ಒಬ್ಬನ ಭಯ, ಆತಂಕ, ತೊಳಲಾಟ ಕೊನೆಗೆ ಸಾವಿಗೂ ಕಾರಣವಾಗಬಹುದೆಂದು ನಿರೂಪಿಸುವ ಈ ಕಥೆಯಲ್ಲಿ ಸಾವಿಗೆ ಬಲಿಯಾದವನ ಮನೋಭಾವವು ರೂಪುಗೊಂಡ ಹಿನ್ನೆಲೆಯನ್ನು ಗಟ್ಟಿಗೊಳಿಸಲು ಸಾಕಷ್ಟು ದೀರ್ಘವಾದ ಪೀಠಿಕೆಯೂ ಇದೆ.
ಪ್ರಣಯಿಗಳಿಬ್ಬರ ಪ್ರೇಮಸಲ್ಲಾಪವನ್ನು ಸಂಪೂರ್ಣವಾಗಿ ನಾಟಕದ ಸಂಭಾಷಣೆಯ ರೂಪದಲ್ಲಿ ಕೊಟ್ಟಂಥ ಒಂದು ವೈಶಿಷ್ಟ್ಯಪೂರ್ಣ ಕಥೆ ‘ಕಿ…ಕಾ..’ ಪ್ರೀತಿ ಪ್ರೇಮ ಕಾಮಗಳ ಬಗ್ಗೆ ಬಹಳ ಸುಂದರವಾದ ವ್ಯಾಖ್ಯಾನವನ್ನು ನೀಡುತ್ತ ಸಂಬಂಧವನ್ನು ಆಧ್ಯಾತ್ಮಿಕತೆಯ ಎತ್ತರಕ್ಕೇರಿಸಿ ಕೊನೆಯಲ್ಲಿ ಎಲ್ಲವೂ ಸುಳ್ಳೆಂದು ಸಾಕ್ಷಾತ್ಕರಿಸುವಂತೆ ದಡಾರೆಂದು ನೆಲಕ್ಕಪ್ಪಳಿಸುವ ರೀತಿ ಕಹಿ ವಾಸ್ತವದ ಕುರಿತು ಎಚ್ಚರಿಕೆ ಹುಟ್ಟಿಸುವಂತಿದೆ.ಪ್ರಾಯಶಃ ಇಡೀ ಸಂಕಲನದಲ್ಲೇ ತನ್ನ ವಸ್ತು ತಂತ್ರ ವಿನ್ಯಾಸಗಳಿಂದ ಅತ್ಯಂತ ಹೆಚ್ಚು ಗಮನ ಸೆಳೆಯುವ ಕಥೆಯಿದು. ಹಾಗೆಯೇ ಅಪ್ಪನ ಬಗ್ಗೆ ಅಮ್ಮ ತೋರಿಸುತ್ತಿದ್ದ ಕಾರಣದಿಂದಾಗಿ ಅಪ್ಪ ಒಳ್ಳೆಯವರೆಂದು ಅನ್ನಿಸಿದರೂ ಅವರ ಮೇಲೆ ತಾನು ಪ್ರೀತಿ ತೋರಿಸಲಿಲ್ಲವೆಂಬ ಪರಿತಾಪ ಭಾವದ ಆವೇಗವನ್ನು ಹೊರಹಾಕಲು ಅಪ್ಪ ಪ್ರೀತಿಸುತ್ತಿದ್ದ ಚೆಂಡೆಯು ಹರಿದು ಹೋಗುವಷ್ಟು ಆವೇಶದಿಂದ ಚೆಂಡೆ ಬಾರಿಸುವ ಶಾಲಿನಿಯ ಚಿತ್ರ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಕಾರಂತರ ಚೋಮನ ದುಡಿಯ ರೂಪಕದಂತೆ ಇದೂ ಪರಿಣಾಮಕಾರಿಯಾಗಿದೆ.
ಸ್ವಾನುಭವದ ಹಿನ್ನೆಲೆಯಿಂದ ಬಂದ ಗ್ರಾಮಿಣ ಸಾಂಸ್ಕೃತಿಕ ಲೋಕದ ಸುಂದರ ಚಿತ್ರಣ, ಕಾವ್ಯಾತ್ಮಕ ಶೈಲಿ ಮತ್ತು ಭಾಷಾ ಸೌಂದರ್ಯದಿಂದ ಓದುಗರ ಗಮನ ಸೆಳೆಯುವ ಸಂತೋಷ್ ಅನಂತಪುರ ಅವರು ‘ಕಾಗೆ ಮತ್ತು ಕಡ್ಲೆ ಬೇಳೆ ಪಾಯಸ ‘ದ ಮೂಲಕ ಒಬ್ಬ ಒಳ್ಳೆಯ ಕಥೆಗಾರರಾಗಿ ಕನ್ನಡ ಕಥಾ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಬಹಳ ಸಂತೋಷದ ವಿಷಯ.
–ಡಾ.ಪಾರ್ವತಿ ಜಿ.ಐತಾಳ್, ಹಿರಿಯ ಸಾಹಿತಿಗಳು, ಅನುವಾದಕರು
ಕೃತಿ : ಕಾಗೆ ಮತ್ತು ಕಡ್ಲೆಬೇಳೆ ಪಾಯಸ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ
ಪ್ರಕಟಣಾ ವರ್ಷ : 2020
ಬೆಲೆ : ರೂ.125