Advertisement

ಆಟಗಾಯಿ- ಕಥಾ ಸಂಕಲನ ಬಿಡುಗಡೆ

05:18 PM Jun 06, 2022 | Team Udayavani |

ಮೈಸೂರು: ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯವನ್ನು ಮಾತ್ರ ಓದಿಕೊಂಡಿರುವವರು ಮಾತ್ರವಲ್ಲದೇ, ವೃತ್ತಿಪರರು, ಬೇರೆ ಕ್ಷೇತ್ರದವರೂ ಬರೆಯುತ್ತಿರುವುದರಿಂದ ಹೊಸ ಅನುಭವ, ದೃಷ್ಟಿಕೋನ ಬಂದಿದೆ ಎಂದು ಕಥೆಗಾರ ಕೇಶವ ಮಳಗಿ ತಿಳಿಸಿದರು.

Advertisement

ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಸಂಕಥನ ಪ್ರಕಾಶನ ಹೊರ ತಂದಿರುವ ಆನಂದ್‌ ಗೋಪಾಲ್‌ ಅವರ ಆಟಗಾಯಿ- ಕಥಾ ಸಂಕಲನವನ್ನು ಅವರು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು. ಕಥೆಗಾರ ಆನಂದ್‌ ಗೋಪಾಲ್‌ ಅವರಲ್ಲಿ ಅಪಾರವಾದ ಕಥಾ ಸಾಮರ್ಥ್ಯವಿದ್ದು, ಗಟ್ಟಿ ಕಥೆಗಾರರಾಗಿದ್ದಾರೆ. ಕಥಾ ವಸ್ತುವಿನಲ್ಲಿ ವೈವಿಧ್ಯತೆ ಇದೆ. ಅವರಿಂದ ಮತ್ತಷ್ಟು ಗಟ್ಟಿಯಾದ ಕಥೆಗಳು ಬರಲಿ ಎಂದು ಶುಭ ಹಾರೈಸಿದ ಅವರು, ಕಥೆಗಾರರು ಜನಪ್ರಿಯ ಸಂಸ್ಕೃತಿ, ಸಿದ್ಧ ಮಾದರಿ ಕಥೆಗಳಿಗೆ ಜೋತು ಬೀಳಬಾರದು ಎಂದು ಕಿವಿಮಾತು ಹೇಳಿದರು.

ಪ್ರತಿ 50 ವರ್ಷಕ್ಕೊಮ್ಮೆ ಸಮಾಜವು ಯೌವ್ವನಕ್ಕೆ ಹೋಗುತ್ತದೆಂದು ಸಮಾಜಶಾಸ್ತ್ರಜ್ಞರು ಹೇಳಿದ್ದಾರೆ. ಹಾಗೆಯೇ, ಪ್ರತಿ 25 ವರ್ಷಕ್ಕೆ ಸಮಾಜವು ಸಮಗ್ರವಾಗಿ ಬದಲಾಗುತ್ತಿದೆ. ಈಗಿನ ಸಮಾಜವು ತರುಣರಿಗೆ ಸೇರಿದೆ. 70- 80ರ ದಶಕದ ಸಮಾಜಕ್ಕೂ 2000 ದಶಕದ ನಂತರ ಸಮಾಜಕ್ಕೂ ಸಾಮಥ್ಯ ಇದೆ ಎಂದರು. ಪ್ರಸ್ತುತ ತರುಣ, ತರುಣಿಯರಿಂದಲೇ ಹೊಸ ವಿಚಾರ, ಜಗಳ, ವಾಗ್ವಾದ ಆಗಬೇಕು. 70- 80ರ ದಶಕದಲ್ಲಿ ನಿರುದ್ಯೋಗ ಸಮಸ್ಯೆ ವಿಪರೀತ ಇತ್ತು. ಜೊತೆಗೆ ಜಾತೀಯತೆ, ಆರ್ಥಿಕ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದವು. ಆದರೆ, ಈಗಿನ ಕಲಿಕೆ ವಿಧಾನ, ಜೀವನ ನೋಡುವ ವಿಧಾನವು ಬದಲಾಗಿದೆ. ಹಿಂದೆ ಸಿದ್ಧಾಂತದ ಭಾರವಿತ್ತು. ಈಗ ಸಾಮಾಜಿಕ ಜಾಲತಾಣಗಳಿಂದ ಅತಿರೇಕದ ಭಾರ ಇದೆ ಎಂದು ಅವರು ಹೇಳಿದರು.

ಸಮಕಾಲೀನ ವಿಚಾರಗಳನ್ನು ಬರೆಯಬೇಕು: ಕೃತಿ ಕುರಿತು ಬರಹಗಾರ ಚ.ಹ.ರಘುನಾಥ ಮಾತನಾಡಿ, ಕಥೆಗಾರರು ಬರೆದ ಕಥೆಯನ್ನು ಮತ್ತೂಮ್ಮೆ ಓದದೇ, ಲೈಕ್‌, ಶೇರ್‌ಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವುದರಿಂದ ಆ ಕಥೆಗಳು ಕಳೆದು ಹೋಗುತ್ತವೆ. ಈಗಿನ ಓದುಗರು ಸಮಕಾಲೀನ ವಿಚಾರಗಳನ್ನು ಬರೆಯಬೇಕೆಂದು ಭಾವಿಸುತ್ತಾರೆ. ಬರಹಗಾರರು ವರ್ತಮಾನದ ಆಗುಹೋಗುಗಳಿಗೆ ತಕ್ಕಂತೆ ಬರೆಯುವ ಸೃಜನಶೀಲತೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಲೇಖಕಿ ಶೈಲಜಾ ನಾಗರಘಟ್ಟ, ಕೃತಿಯ ಕರ್ತೃ ಆನಂದ್‌ ಗೋಪಾಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next