Advertisement
ಓದು ಮತ್ತು ವಿದ್ಯೆಗೆ ಅವಿನಾಭಾವ ಸಂಬಂಧ. ಆಧುನಿಕ ಪ್ರಪಂಚದಲ್ಲಿ ಓದಿನ ಪರಿಕರಗಳು ಅಸಂಖ್ಯ, ವೈವಿಧ್ಯಮಯ. ಪ್ರಾಚೀನ ಗ್ರಂಥಗಳು, ಕಾವ್ಯ-ಪುರಾಣಗಳು, ಸಾಹಿತ್ಯ, ವಿಜ್ಞಾನ, ಕಾದಂಬರಿ, ಕತೆ, ಪ್ರವಾಸಕಥನ ಮುಂತಾದ ಜೀವನಾನುಭವಗಳ ಮೂರ್ತರೂಪವಾಗಿ ಮೂಡಿಬರುವ ಪುಸ್ತಕಗಳ ಪುಟ ಬಿಡಿಸಿದಂತೇ ಮನದ ಕಣ್ಣಿಗೆರಗುವ ನವಲೋಕದ ದರ್ಶನ ಯಾವ “ವಿಶ್ವರೂಪ ದರ್ಶನ’ಕ್ಕೂ ಕಡಿಮೆಯೆನಿಸದು ಎಂಬುದು ಪ್ರಾಮಾಣಿಕ ಓದುಗನಿಗಷ್ಟೇ ಅರ್ಥವಾದೀತು. ಮನುಷ್ಯನ ಓದು ಸೀಮಿತವಾದರೂ ಓದಿನ ದಾರಿಯಲ್ಲಿ ಹೊಸ ಹೊಸ ವಿಚಾರಗಳು ಮೊಳೆತಾವು. ಸೊರಗಿದ ಮನಸ್ಸಿಗೆ ತಂಪೆರೆ ದಾವು. ಚಿಂತನೆಗೆ ಹಚ್ಚುವ ಪ್ರತಿಯೊಂದು ಕೃತಿಯೂ ಓದುಗನನ್ನು ಚುರುಕಾಗಿರಿಸುವುದರೊಂದಿಗೆ ಅಸದೃಶ ಆನಂದವನ್ನು ನೀಡುವುದಂತೂ ಖಂಡಿತ.
ವಿದ್ಯುನ್ಮಾನ ಉಪಕರಣಗಳನ್ನು ಬಿಟ್ಟರೆ ಸಮಕಾಲೀನ ಜಗತ್ತಿಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆ ಎಂದರೆ ಅದು ದಿನಪತ್ರಿಕೆಗಳೇ. ಜಗತ್ತಿನ ಆಗುಹೋಗುಗಳನ್ನು ಮೈತುಂಬಿ ಮನೆಯೊಳಗೆ ಬಂದು ಲೋಕದರ್ಶನ ಮಾಡಿಸುವ ಈ “ಪವಾಡ ಪುರುಷ’ನ ದರ್ಶನ ಬೆಳಗಿನ ವೇಳೆ ಆಗಲಿಲ್ಲವೆಂದಾದರೆ ಓದುಗನಿಗೆ ಅದೇನೋ ಚಡಪಡಿಕೆ. ಸದಾ ಮೊಬೈಲ್, ಐಪಾಡ್‌ಗಳಲ್ಲೇ ತಡಕಾ ಡುವ ನಮ್ಮ ಬಾಲರಿಗೆ, ಯುವಕರಿಗೆ ದಿನಪತ್ರಿಕೆ ಓದಿಸುವ ಪ್ರಯತ್ನ ಹಿರಿಯರು ಮಾಡಬೇಕಿದೆ. ಹಿರಿಯರ ಮಾರ್ಗದರ್ಶನದೊಂದಿಗೆ ಉತ್ತಮ ಆಯ್ಕೆ ಮಾಡಿ ತೊಡಗುವ ಪುಸ್ತಕದ ಓದು, ಹೊಸ ಲೋಕ ದರ್ಶನ ಮಾಡಿಸುವ ಮಾಹಾ ಮಾಂತ್ರಿಕ; ತಲೆಕೆಡಿಸುವ ಯೋಚನೆಗಳಿಗೆ ತಡೆಯೊಡ್ಡಿ ನೇರ್ಪುಗೊಳಿಸುವ ಚಿಕಿತ್ಸಕ; ಮನಸ್ಸಿಗೆ ಮುದ ನೀಡಿ ಹುರುಪುಗೊಳಿಸುವ ಜೀವರಸ; ಎಲ್ಲೆಲ್ಲೋ ಓಡುವ ಮನಸ್ಸೆಂಬ ಹುಚ್ಚು ಕುದುರೆಗೆ ಬೆಸೆದ ಕಡಿವಾಣ; ಉದ್ವೇಗಗಳಿಗೆ ತಂಪೆರೆದು ಶಾಂತಗೊಳಿಸುವ ಮಹಾಮಂತ್ರ; ಮುದುಡಿ ಕುಳಿತ ಮನಸ್ಸಿಗೆ ಖುಶಿ ಕೊಡುವ ಮನರಂಜನೆ, ನೋವುಗಳಿಗೆ ಮದ್ದು ಹಚ್ಚಿ ಮರೆಸುವ ಮನೋವೈದ್ಯ; ವಿವಿಧ ಸಾಧ್ಯತೆಗಳಿಗೆ ಬೆಳಕು ಹಿಡಿಯುವ ದೀವಟಿಗೆ.
Related Articles
Advertisement
– ಪದ್ಯಾಣ ಪರಮೇಶ್ವರ ಭಟ್