Advertisement

ಜಾತಿ ವ್ಯವಸ್ಥೆ ತೊಲಗುವವರೆಗೆ ಮೀಸಲಾತಿ ಅಗತ್ಯ: ಸಿದ್ದರಾಮಯ್ಯ

08:30 PM Jun 26, 2022 | Team Udayavani |

ಬೆಂಗಳೂರು: ದೇಶದಲ್ಲಿ ಜಾತಿ ವ್ಯವಸ್ಥೆ ತೊಡೆದು ಸಮ ಸಮಾಜ ನಿರ್ಮಾಣವಾಗುವವರೆಗೂ ಮೀಸಲಾತಿ ಅವಶ್ಯಕವಾಗಿದೆ. ಆದರೆ, ಒಂದು ದೊಡ್ಡ ವರ್ಗ ಮೀಸಲಾತಿ ವಿರೋಧಿಸುತ್ತಿರುವುದು ವಿಷಾಧನೀಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಜನ ಪ್ರಕಾಶನವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ. ಎಚ್‌.ಎನ್‌. ನಾಗಮೋಹನ ದಾಸ್‌ ಅವರ “ಮೀಸಲಾತಿ-ಭ್ರಮೆ ಮತ್ತು ವಾಸ್ತವ’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ದೇಶದಲ್ಲಿ ಜಾತಿ ವ್ಯವಸ್ಥೆಯಿಂದ ಅಸಮಾನತೆ ಹೆಚ್ಚುತ್ತಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿವೆ. ಜತೆಗೆ ಜಾತಿ ವ್ಯವಸ್ಥೆ ನಿವಾರಿಸುವ ಬದಲು ಗಟ್ಟಿಗೊಳಿಸುವ ಕೆಲಸ ಮಾಡುತ್ತಿವೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಸಮಾನತೆ ಹೆಚ್ಚಾಗಿದ್ದು, ಅದರ ನಿವಾರಣೆ ಅಗತ್ಯ. ಅಲ್ಲಿಯವರೆಗೆ ಮೀಸಲಾತಿಯ ಅವಶ್ಯಕತೆಯಿದೆ ಎಂದರು.

ಪುರಾಣಗಳಲ್ಲಿನ ಚತುರ್ವರ್ಣ ವ್ಯವಸ್ಥೆಯಲ್ಲಿಯೇ ಮೀಸಲಾತಿಯಿತ್ತು. ಆಗ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ವರ್ಗದವರು ಅಲಿಖೀತ ಮೀಸಲಾತಿ ಪಡೆಯುತ್ತಿದ್ದರು. ಆದರೆ ಶೂದ್ರರು ಕೇವಲ ದುಡಿಯುವುದಕ್ಕೆ ಮಾತ್ರ ಸೀಮಿತವಾಗಿದ್ದರು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ಶಿಕ್ಷಣ, ಸಂಪತ್ತು ಹೊಂದುವುದು ಮತ್ತು ಅನುಭವಿಸುವುದರಲ್ಲಿ ಮೀಸಲಾತಿ ಪಡೆದಿದ್ದರು. ಅದಕ್ಕಾಗಿಯೇ ಬಸವಣ್ಣ ಕಾಯಕಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದು ತಿಳಿಸಿದರು.

ಗುಲಾಮಗಿರಿ ನಿವಾರಣೆಯಾಗಲಿ: ನಮ್ಮಲ್ಲಿ ಗುಲಾಮಗಿರಿ ಮನಸ್ಥಿತಿ ಇಂದಿನೂ ನಿವಾರಣೆಯಾಗಿಲ್ಲ. ನಮ್ಮವರಿಗೆ ಸ್ವಾಭಿಮಾನ ಮೂಡಿಲ್ಲ. ಅವರೆಲ್ಲರಿಗೂ ಶಿಕ್ಷಣದ ಜತೆಗೆ ಸ್ವಾಭಿಮಾನ ಬೆಳೆಸುವ ಕೆಲಸವಾಗಬೇಕು. ಇಲ್ಲದಿದ್ದರೆ ಗೌರವದಿಂದ ಬದುಕುವುದಕ್ಕೆ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ನೀಡಿದ್ದಾರೆ. ಆ ಮೀಸಲಾತಿ ಪಡೆಯುತ್ತಿರುವವರು ಜಾತಿ ಆಧಾರದಲ್ಲಿನ ಮೀಸಲಾತಿಯ ಬಗ್ಗೆ ಮಾತನಾಡುವುದನ್ನು ಬಿಡುತ್ತಿಲ್ಲ ಎಂದು ಸಿದ್ದರಾಮಯ್ಯ ದೂಷಿಸಿದರು.

Advertisement

ವಿದ್ಯೆ, ಸಂಪತ್ತು, ಪ್ರತಿಭೆ ಯಾವುದೋ ಒಂದು ಜಾತಿ, ವರ್ಗದ ಸಂಪತ್ತಲ್ಲ. ಅದಕ್ಕೆ ಉದಾಹರಣೆಯಂತೆ ಬದುಕಿದವರು ಡಾ. ಬಿ.ಆರ್‌. ಅಂಬೇಡ್ಕರ್‌ ಅವರು. ದೇಶದ ಕೆಲವೇ ಬುದ್ಧಿವಂತ, ಮೇಧಾವಿ ರಾಜಕಾರಣಿಗಳಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಕೂಡಾ ಒಬ್ಬರು ಎಂದರು.

ಇದ್ದಿದ್ದು ಇದ್ದ ಹಾಗೆ ಹೇಳಿದರೆ:
ದೇಶದ ಮೂಲ ನಿವಾಸಿಗಳ ಬಗ್ಗೆ ಮಾತನಾಡುವಾಗ ಆರ್ಯರ ಬಗ್ಗೆ ಮಾತನಾಡಿದ್ದೆ. ಆಗ ಎಲ್ಲರೂ ನನ್ನ ಮೇಲೆ ಮುಗಿಬಿದ್ದರು. ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರು ಎನ್ನುವಂತಹ ಪರಿಸ್ಥಿತಿ ಎದುರಿಸಿದೆ. ನಾನು ಒಬ್ಬ ಮಾತನಾಡಿದರೆ 20 ಜನ ನನ್ನ ಮೇಲೆ ಮುಗಿಬೀಳುತ್ತಾರೆ. ಆದರೆ, ನಮ್ಮವರ್ಯಾರೂ (ಹಿಂದುಳಿದವರು) ನನ್ನ ಪರವಾಗಿ ಮಾತನಾಡುವುದಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತ ಬಿ.ಎಂ.ಹನೀಫ್‌, ಜನ ಪ್ರಕಾಶನದ ಬಿ.ರಾಜಶೇಖರ ಮೂರ್ತಿ, ಗ್ರಾಮ ಭಾರತ ಸಾಂಸ್ಕೃತಿಕ ವೇದಿಕೆಯ ಕಿಗ್ಗ ರಾಜಶೇಖರ್‌ ಇತರರಿದ್ದರು.

ಜನರಲ್ಲಿರುವ ಮೀಸಲಾತಿ ಬಗೆಗಿನ ಮಾಹಿತಿ ನೀಡಲು ಪುಸ್ತಕ ರಚಿಸಲಾಗಿದೆ. ಮೀಸಲಾತಿ ಹಾಗೂ ಶೋಷಿತ ವರ್ಗದವರ ಪರವಾಗಿ ಮಾತನಾಡಿದರೆ ದೇಶದ್ರೋಹ ಕಾಯ್ದೆ ಅಡಿ ಬಂಧಿಸಲಾಗುತ್ತಿದೆ. ಅದಾಗದಿದ್ದರೂ ಎನ್‌ಕೌಂಟರ್‌ ಮಾಡಲಾಗುತ್ತಿದೆ. ಪ್ರತಿಭಟಿಸಿದರೆ ನಮ್ಮ ಮನೆಗಳ ಮೇಲೆ ಬುಲ್ಡೋಜರ್‌ ಹತ್ತಿಸುತ್ತಾರೆ. ಹೀಗೆ ಭಯದಲ್ಲಿಯೇ ಜೀವಿಸುವ ಮತ್ತು ಮಾತನಾಡುವ ಸ್ಥಿತಿಯಿದೆ.
-ನಾಗಮೋಹನದಾಸ್‌
ನಿವೃತ್ತ ನ್ಯಾಯಮೂರ್ತಿ, ಲೇಖಕ

ನಾನು ಒಬ್ಬ ಹಿಂದುಳಿದ ಜಾತಿಗೆ ಸೇರಿದವನು. ನಾನೂ 3 ಸಾವಿರ ಚಿತ್ರಗೀತೆಗಳನ್ನು ಬರೆದರೂ, ಜನರು ನನ್ನನ್ನು ಒಬ್ಬ ಪ್ರತಿಭಾವಂತ ಎಂದು ಗುರುತಿಸುವುದೇ ಇಲ್ಲ. ಇದು ನಮ್ಮ ಪರಿಸ್ಥಿತಿ.
-ಹಂಸಲೇಖ
ಸಂಗೀತ ನಿರ್ದೇಶಕ

ಕೆಲವರು ಮೀಸಲಾತಿ ಕುರಿತಾಗಿ ಸಮಾಜದಲ್ಲಿ ಮತ್ಸರದ ವಾತಾವರಣ ಬೆಳೆಸುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಮೀಸಲಾತಿ ವ್ಯವಸ್ಥೆಗೆ ಕುತ್ತು ತರಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು.
-ಬಂಜಗೆರೆ ಜಯಪ್ರಕಾಶ್‌
ಪ್ರಗತಿಪರ ಚಿಂತಕ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next