Advertisement
ಆ ಪಟ್ಟಣ ಹೇ-ಆನ್-ವೀ. ಎರಡು-ಎರಡೂವರೆ ಸಾವಿರ ಜನಸಂಖ್ಯೆಯ ಈ ಊರು ಇರುವುದು ಇಂಗ್ಲೆಂಡ್ ಹಾಗೂ ವೇಲ್ಸ್ ಗಡಿಯಲ್ಲಿ.
ಹೇ-ಆನ್- ವೀ ಬೂತ್‌ನ ಸ್ವಂತ ಊರು. ನಿಧಾನವಾಗಿ ಈತನ ಅಂಗಡಿಯತ್ತ ಪುಸ್ತಕಗಳಿಗಾಗಿ ಜನ ಎಡತಾಕಲಾರಂಭಿಸಿದ್ದರು. ಹೊರ ಊರುಗಳಿಗೂ ಇದರ ವಿಶೇಷ ಹಬ್ಬುತ್ತ ಹೋಯಿತು. ಬೇರೆ ಬೇರೆ ಪ್ರಕಾಶಕರು ಈ ಊರಿನಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಮುಂದಾದರು. ಹೀಗಾಗಿ ಹಲವು ಪುಸ್ತಕ ಮಳಿಗೆಗಳು ಶುರುವಾಗಿದ್ದೇ ಇಂಗ್ಲೆಂಡ್ ಮಾತ್ರವಲ್ಲ , ಬೇರೆ ದೇಶಗಳಿಂದಲೂ ಪುಸ್ತಕಾಸಕ್ತರು ಈ ಪಟ್ಟಣಕ್ಕೆ ಲಗ್ಗೆ ಇಡತೊಡಗಿದರು.
Related Articles
ಹೇಳಿಕೇಳಿ ಈ ಊರು ಹತ್ತಾರು ಚಾರಿತ್ರಿಕ ಕಟ್ಟಡಗಳಿರುವ ಸ್ಥಳ. ಜೊತೆಗೆ ನಾಲ್ಕಾರು ಹಳೆಯ ಕೋಟೆಗಳೂ ಇವೆ. ಪಕ್ಕ ಹರಿಯುವ ನದಿಯು ಈ ಪಟ್ಟಣದ ಇನ್ನೊಂದು ಆಕರ್ಷಣೆ. ಐದಾರು ವರ್ಷಗಳಲ್ಲಿ ಪುಸ್ತಕ ಪ್ರವಾಸೋದ್ಯಮ ತಾಣವಾಯಿತು ಹೇ-ಆನ್-ವೀ.
Advertisement
ಸೆಕೆಂಡ್‌ಹ್ಯಾಂಡ್ ಪುಸ್ತಕಗಳು ಸಿಗುವ ಪಟ್ಟಣವೆಂದೇ ಓದುಗರಲ್ಲಿ- ಸಾಹಿತ್ಯಾಸಕ್ತರಲ್ಲಿ ಖ್ಯಾತಿ ಪಡೆದ ಈ ಊರಿನಲ್ಲಿ ಖಾಯಂ ಆಗಿ ಮೂವತ್ತು-ಮೂವತ್ತೈದು ಮಳಿಗೆಗಳು ಇದ್ದೇ ಇರುತ್ತವೆ. ಇವನ್ನೆಲ್ಲ ಇಡಲು ಹಳೆಯ ಜಾಗದ ಕೊರತೆ ಕಂಡುಬಂದಾಗ 2005ರಲ್ಲಿ ಊರ ಹೊರಭಾಗದಲ್ಲಿ ಪುಸ್ತಕದಂಗಡಿಗಳನ್ನು ಸ್ಥಾಪಿಸಲು ಸ್ಥಳ ಒದಗಿಸಲಾಯಿತು.
ತನ್ನೂರಿನಲ್ಲಿ ರಿಚರ್ಡ್ ಬೂತ್ ಆರಂಭಿಸಿದ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಿಂದ ಇಡೀ ಪಟ್ಟಣವನ್ನೇ ಪ್ರಸಿದ್ಧಿಗೆ ತಂದರೆ ಇಲ್ಲಿ ಪುಸ್ತಕಗಳ ಮಾರಾಟ ಭರಾಟೆಯನ್ನು ನೋಡಿ ನಾರ್ಮನ್ ಹಾಗೂ ಪೀಟರ್ ಫ್ಲೋರೆನ್ಸಾ ಎಂಬಿಬ್ಬರು ಉತ್ಸಾಹಿಗಳು “ಪುಸ್ತಕ ಉತ್ಸವ’ ಒಂದನ್ನು 1988ರಲ್ಲಿ ಆಯೋಜಿಸಿದ್ದರು. ಇದು ಕೂಡ ವರ್ಷದಿಂದ ವರ್ಷಕ್ಕೆ ಖ್ಯಾತಿ ಗಳಿಸುತ್ತಲೇ ಹೋಯಿತು. ಇದರ ಜನಪ್ರಿಯತೆಯನ್ನು ಕಂಡ ಪ್ರಸಿದ್ಧ ಪತ್ರಿಕೆಗಳು ಪ್ರಾಯೋಜನೆಗೆ ಸಿದ್ಧವಾದವು. ಸಾಮಾನ್ಯವಾಗಿ ಪ್ರತಿ ಮೇ-ಜೂನ್‌ನಲ್ಲಿ ನಡೆಯುವ ಹೇ-ಆನ್-ವೀ ಪಟ್ಟಣದ ಪುಸ್ತಕ ಮೇಳ ಈಗ ಸಾಹಿತ್ಯೋತ್ಸವವಾಗಿ ಪ್ರಸಿದ್ಧವಾಗಿದೆ.
ರಸ್ತೆಬದಿ, ಗೋಡೆಕಪಾಟು, ಮನೆಹಿಂಭಾಗ, ಗಲ್ಲಿಗಳಲ್ಲಿ ಪುಸ್ತಕಗಳು ಕಾಣಸಿಗುವ ಈ ಪಟ್ಟಣದಲ್ಲಿ ಜರಗುವ ಉತ್ಸವ ಈಗ ಹೇ ಫೆಸ್ಟಿವಲ್ ಎಂದೇ ಖ್ಯಾತಿ.
ಹೆಸರಾಂತ ಪತ್ರಿಕೆ ದಿ ಗಾರ್ಡಿಯನ್, ದ ಸಂಡೇ ಟೈಮ್ಸ್, ದ ಟೆಲಿಗ್ರಾಫ್ಗಳು ಪ್ರಾಯೋಜಿಸುವ ಪುಸ್ತಕ ಪರಿಷೆ ಈಗ ಕೇವಲ ಪುಸ್ತಕ ಉತ್ಸವಗಳಾಗಿ ಉಳಿದಿಲ್ಲ. ಇಲ್ಲಿ ನಡೆಯುವ ಸಾಹಿತ್ಯ ಉತ್ಸವವು ಅತ್ಯಂತ ಹೆಸರುವಾಸಿ. ಕಾರ್ಡಿಫ್ ವಿಶ್ವವಿದ್ಯಾನಿಲಯವು ಕೈಜೋಡಿಸುವ ಹೇ ಫೆಸ್ಟಿವಲ್‌ನಲ್ಲಿ ಸಂಗೀತ ಕಾರ್ಯಕ್ರಮಗಳೂ ಇವೆ. ಚಲನಚಿತ್ರಗಳೂ ಇಲ್ಲಿ ಪ್ರದರ್ಶನಗೊಳ್ಳುತ್ತವೆ.
ಪುಸ್ತಕ ಪಟ್ಟಣದಲ್ಲಿ ಖಾಯಂ ಆಗಿರುವ ಮಳಿಗೆಗಳಲ್ಲಿ ಕಥೆ, ಕಾದಂಬರಿ, ನಾಟಕ, ವಿಜ್ಞಾನ ಹೀಗೆ ಪ್ರತ್ಯೇಕ ಶೀರ್ಷಿಕೆ ಇಟ್ಟುಕೊಂಡಂಥವು ಇವೆ. ಕೆಲವೆಡೆ ಅಂಗಡಿಗಳಲ್ಲಿ ಸೆಲ್ಫ್ಗಳೇ ಇರುವುದಿಲ್ಲ. ಇನ್ನೂ ಕೆಲವೆಡೆ ಅದನ್ನು ನೋಡಿಕೊಳ್ಳುವ ನಿರ್ವಾಹಕರೂ ಇರುವುದಿಲ್ಲ. ಆಸಕ್ತರು ತಮಗೆ ಬೇಕಾದ ಪುಸ್ತಕಗಳನ್ನು ಹುಡುಕಿಕೊಂಡು ಅದರ ಮೇಲೆ ನಮೂದಿಸಿರುವ ಹಣವನ್ನು ಅಲ್ಲಿಯೇ ಇರುವ ಪುಟ್ಟ ಕ್ಯಾಶ್ ಬಾಕ್ಸ್‌ನಲ್ಲಿ ಹಾಕಿದರಾಯಿತು. ಕೆಲವು ಅಂಗಡಿಗಳಲ್ಲಿ ಪುಸ್ತಕಗಳನ್ನ ಆಕರ್ಷಕವಾಗಿ ಜೋಡಿಸಿದ್ದರೆ, ಇನ್ನೂ ಕೆಲವಡೆ ಪುಸ್ತಕಗಳು ಎಲ್ಲೆಲ್ಲೂ ಬಿದ್ದಿರುತ್ತವೆ. ಇಷ್ಟವಾದ ಪುಸ್ತಕಗಳಿಗಾಗಿ ಹೇ- ಬುಕ್‌ಶಾಪ್‌ಗ್ಳಲ್ಲಿ ಗಂಟೆಗಟ್ಟಲೆ- ದಿನಗಟ್ಟಲೆ ಇರುವುದು ಇಲ್ಲಿ ಆಶ್ಚರ್ಯದ ವಿಚಾರವೇನೂ ಅಲ್ಲ.ಕೋಟೆಕೊತ್ತಲಗಳ ನಡುವೆ ಹರಡಿ ಹೋಗಿರುವ ಈ ಪಟ್ಟಣಕ್ಕೆ ಜಗತ್ತಿನ ಖ್ಯಾತನಾಮ ಸಾಹಿತಿಗಳು, ಬರಹಗಾರರು ಬರುವುದು ಮಾಮೂಲಿ. ಹೇ- ಫೆಸ್ಟಿವಲ್ ಸಂದರ್ಭದಲ್ಲಿ ನೂರಾರು ಸಾಹಿತಿಗಳು ಇಲ್ಲಿಗೆ ಭೇಟಿಕೊಡುತ್ತಾರೆ. ಸಾಹಿತ್ಯ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಜನಪ್ರಿಯ ಸಂಗೀತಗಾರರ ಸಂಗೀತ ಕಾರ್ಯಕ್ರಮಗಳಲ್ಲಿ ಅಸಂಖ್ಯ ಆಸಕ್ತರು ನೆರೆಯುತ್ತಾರೆ. ಕಳೆದ ವರ್ಷ ಅಂದಾಜು ಒಂದು ಲಕ್ಷ ಮಂದಿ ಭೇಟಿ ನೀಡಿದ ಪುಸ್ತಕ ಪರಿಷೆ, ಸಾಹಿತ್ಯೋತ್ಸವಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರುಗಳಾದ ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್ ಅವರೂ ಭಾಗವಹಿಸಿದ್ದೊಂದು ವಿಶೇಷ. ಬರಹಗಾರರು, ಪ್ರಕಾಶಕರು, ಪುಸ್ತಕ ಪ್ರೇಮಿಗಳು, ಸಾಹಿತ್ಯಾಸಕ್ತರು, ಮಾಧ್ಯಮದವರು ಬರುವ ಹೇ-ಸಾಹಿತ್ಯೋತ್ಸವ ಸಮಯದಲ್ಲಿ ಪಟ್ಟಣದಲ್ಲಿ ಮನೆ ಬಾಡಿಗೆ ಬಲು ದುಬಾರಿ. ಇದರ ಒತ್ತಡ ತಗ್ಗಿಸಲು ಹೇ-ದ ಹೊರಗಡೆ ತಾತ್ಕಾಲಿಕ ಟೆಂಟುಗಳನ್ನ ಹಾಕುತ್ತಾರೆ. ಇನ್ನೂ ಹಲವರು ಆಸುಪಾಸಿನ ಹಳ್ಳಿಗಳಲ್ಲಿ ತಂಗಿದ್ದು ಕಾರ್ಯಕ್ರಮಗಳಿಗಾಗಿ ಪುಸ್ತಕಗಳನ್ನು ನೋಡಲು, ಕೊಳ್ಳಲು ಪಟ್ಟಣಕ್ಕೆ ಬಂದುಹೋಗುವುದು ಸಾಮಾನ್ಯ. ಹೊಸ ಹಾಗೂ ಹಳೆಯ ಪುಸ್ತಕ ಮಳಿಗೆಗಳಿರುವ ಹೇ-ಆನ್- ವಿ ಪಟ್ಟಣದಲ್ಲಿ ವರ್ಷಕ್ಕೊಮ್ಮೆ (ಮೇ-ಜೂನ್) ನಡೆಯುವ ಹತ್ತು ದಿನಗಳ ಉತ್ಸವದಲ್ಲಿ ರಾಜಕಾರಣಿಗಳು, ಅರ್ಥಶಾಸ್ತ್ರ ಜ್ಞರು ಲೇಖಕರು, ಸಂಗೀತಗಾರರ ಜೊತೆ ವಿಚಿತ್ರ ವೇಷ-ಭೂಷಣಗಳೊಂದಿಗೆ ವಿಧೂಷಕರ ದಂಡೇ ಇಲ್ಲಿ ಸೇರುತ್ತದೆ. ಗಂಭೀರ ಹಾಸ್ಯ ಮಾಡಿಕೊಂಡು ನೋಡುಗರನ್ನು ರಂಜಿಸುವುದು ಇವರ ಪ್ರವೃತ್ತಿ. ಬಿ.ಬಿ.ಸಿ. ಸುದ್ದಿ ಸಂಸ್ಥೆಯ ನೇತೃತ್ವದಲ್ಲಿ ಪ್ರಚಾರ ಪಡೆಯುವ “ಹೇ-ಉತ್ಸವ’ ಇದೀಗ ಮಕ್ಕಳ ಹಬ್ಬವನ್ನೂ ಆರಂಭಿಸಿದೆ. ಆರ್ಟ್ ಗ್ಯಾಲರಿಗಳಿಗೂ ಸ್ಥಳಾವಕಾಶ ಹೆಚ್ಚಿದೆ. ಸೆಕೆಂಡ್ ಹ್ಯಾಂಡ್ ಪುಸ್ತಕಗಳೊಂದಿಗೆ ಹೊಸ ಹೊತ್ತಿಗೆ ಬಿಡುಗಡೆ ಮಾರಾಟಕ್ಕೂ ಅನುವು ಮಾಡಿಕೊಟ್ಟಿದೆ. ಸಾಹಿತ್ಯ, ಸಂಗೀತ ಸವಿಯುವ ಜೊತೆಗೆ ನದಿಯಲ್ಲಿ “ಕೆನೋಯಿಂಗ್’ ಮೋಜಿನಾಟಗಳಲ್ಲೂ ಪಾಲ್ಗೊಳ್ಳುವ ವ್ಯವಸ್ಥೆಯೂ ಇದೆ. ಪ್ರಪಂಚದ ಮೊದಲ ಪುಸ್ತಕ ಪಟ್ಟಣವೆಂಧೆ ಪ್ರಸಿದ್ಧವಾಗಿರುವ ಹೇ-ಆನ್-ವೀ ಪಟ್ಟಣ ಜಗತ್ತಿನ ವಿವಿದಡೆ ಇಂತಹ ಪುಸ್ತಕ ಹಬ್ಬ ಏರ್ಪಡಿಸಲು ನೆರವಾಗುತ್ತಿದ್ದು ವರ್ಷ ವರ್ಷ ಇದರ ಜನಪ್ರಿಯತೆ ಏರುಮುಖದಲ್ಲಿಯೇ ಸಾಗುತ್ತಿದೆ. – ಎನ್. ಜಗನ್ನಾಥ ಪ್ರಕಾಶ್