ಇದು ಜೀವನಪೂರ್ತಿ ಕಷ್ಟದ ಸರಮಾಲೆಯನ್ನೇ ಹೊದ್ದುಕೊಂಡ ಅಜ್ಜಿ ಗಂಗಮ್ಮಳ ಕತೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುಗಳಿಹಾಳ ಎಂಬ ಗ್ರಾಮದ ಗಂಗಮ್ಮ ಅವರು ತಯಾರಿಸುವ ಬಿಸಿಬಿಸಿ ಬೋಂಡಾ, ಅಲ್ಲಿನ ಪ್ರತಿ ಜಾತ್ರೆಗಳ ವಿಶೇಷ ಸ್ವಾದ…
ಜಾತ್ರೆಯೆಂದರೆ ಅದು ನೆನಪುಗಳ ಮೆರವಣಿಗೆ. ಬೊಂಬೆ ಮಿಠಾಯಿ, ಗಿರಿಗಿಟ್ಲೆ, ಜಾಯಿಂಟ್ ವ್ಹೀಲ್… ಇವೆಲ್ಲ ಕಾಮನ್ ನಿಜ. ಆದರೆ, ಬೆಳಗಾವಿ ಜಿಲ್ಲೆಯ ಸುತ್ತಮುತ್ತ ಜಾತ್ರೆ ನಡೆದರೆ, “ಕಾಮನ್’ ಎನ್ನುವ ಪದಕ್ಕೆ ಅಜ್ಜಿಯೊಬ್ಬಳು ಸೇರ್ಪಡೆ ಆಗುತ್ತಾಳೆ. ಅಲ್ಲಿನ ಯಾವ ಜಾತ್ರೆಗಾದರೂ ಹೋಗಿ, ಅಲ್ಲಿ ಈ ಅಜ್ಜಿಯ ಹಾಜರಿ ಇದ್ದಿದ್ದೇ. ಜಾತ್ರೆ ಮುಗಿಸಿ ಮನೆಗೆ ಹೋದ ಮೇಲೂ ಅದೇ ಅಜ್ಜಿಯದ್ದೇ ಧ್ಯಾನ ಎಲ್ಲರಿಗೂ. ಉರಿಯುವ ಒಲೆ, ಅದರ ಮೇಲೆ ಕೊತ ಕೊತ ಎನ್ನುವ ಎಣ್ಣೆಯ ಸಂಗೀತ, ಒಂದೊಂದಾಗಿಯೇ ಬಜ್ಜಿ, ಪಕೋಡಾ ಬಿಡುತ್ತಿರುವ ಆ ಅಜ್ಜಿಯ ಮೊಗದಲ್ಲಿ ಆಯಾಸದ ಗೆರೆಗಳೇ ಇಲ್ಲ. ಆಕೆಯ ಉತ್ಸಾಹ ಕಂಡವರು, ಆ ಅಜ್ಜಿಗೆ ವಯಸ್ಸು ತೊಂಬತ್ತೈದಾಯ್ತು ಅನ್ನೋದನ್ನು ಒಪ್ಪುವುದೂ ಇಲ್ಲ.
ಇದು ಜೀವನಪೂರ್ತಿ ಕಷ್ಟದ ಸರಮಾಲೆಯನ್ನೇ ಹೊದ್ದುಕೊಂಡ ಅಜ್ಜಿ ಗಂಗಮ್ಮಳ ಕತೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುಗಳಿಹಾಳ ಎಂಬ ಗ್ರಾಮದ ಗಂಗಮ್ಮ ಈ ಇಳಿ ವಯಸ್ಸಿನಲ್ಲೂ ಹಗಲಿರುಳು ದುಡಿದು ಮಾದರಿಯಾಗಿದ್ದಾರೆ. “ಎಷ್ಟಾದರೂ ಕಷ್ಟವಾಗಲಿ ನನ್ನ ಕುಟುಂಬ ಕಷ್ಟದಿಂದ ಹಗುರಾಗಲಿ’ ಎನ್ನುವ ತತ್ವ ಈಕೆಯದ್ದು. ತುತ್ತು ಅನ್ನಕ್ಕಾಗಿ ಯಾರ ಮುಂದೆಯೂ ಕೈಚಾಚಬಾರದೆಂಬ ಜೀವನಾದರ್ಶವೇ ಇವರಿಗೆ ಊರೂರು ತಿರುಗಿ ಬದುಕಿನ ರಥ ಎಳೆಯಲು ಸ್ಫೂರ್ತಿ.
ಸಮೀಪದ ಗ್ರಾಮಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಇವರ ಬೋಂಡಾ- ಬಜ್ಜಿಯ ರುಚಿ ಅನೇಕರನ್ನು ಕಾಡಿದೆ. ಯಾವ ಊರಲ್ಲಿ, ಯಾವತ್ತು ಜಾತ್ರೆ ಇರುತ್ತೆಯೆಂದು ಈ ಅಜ್ಜಿಗೆ ಚೆನ್ನಾಗಿ ಗೊತ್ತಿರುತ್ತದೆ. ನೀವೇನಾದರೂ ಆ ಜಾತ್ರೆಗಳಿಗೆ ಹೋದರೆ, ಅಲ್ಲಿ ಈ ಅಜ್ಜಿ ಬಿಸಿ ಬಾಣಲೆಯೆದುರು, ಬೇರೆ ಯಾರ ಸಹಾಯವೂ ಇಲ್ಲದೆ ರುಚಿ ರುಚಿ ತಿಂಡಿಯನ್ನು ಸಿದ್ಧಪಡಿಸುತ್ತಿರುತ್ತಾರೆ. ಸುತ್ತಲಿನ ಮುಗಳಿಹಾಳ, ಅಕ್ಕಿಸಾಗರ, ಬೆಟಗೇರಿ, ಮಮದಾಪೂರ, ದಾಸನಾಳ, ಮನ್ನಿಕೇರಿ, ಯರಗಟ್ಟಿ ಸೇರಿದಂತೆ ಯಾವುದೇ ಊರಲ್ಲಿ ಜಾತ್ರೆ ನಡೆದರೂ “ಮುಗಳಿಹಾಳ ಗಂಗಮ್ಮಳ ಬಜ್ಜಿ’ಯ ಅಂಗಡಿಗೆ ಮುಗಿಬೀಳುತ್ತಾರೆ ಜನ.
ಮದುವೆಯಾದ ಕೆಲ ವರ್ಷಗಳಲ್ಲೇ ಗಂಡನನ್ನು ಕಳಕೊಂಡ ಗಂಗಮ್ಮ ಎದೆಗುಂದಲಿಲ್ಲ. ಮಗಳನ್ನು ಸಮೀಪದ ಊರಿಗೆ ಮದುವೆ ಮಾಡಿಕೊಟ್ಟರೂ ಮಗಳು ಹಾಗೂ ಅಳಿಯ ಅಕಾಲಿಕ ಮರಣಕ್ಕೀಡಾದರಂತೆ. ಮಗಳ ಅಗಲಿಕೆಯಿಂದ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳಬೇಕಿದ್ದ ಈ ವೃದ್ಧೆಗೆ, ನಾಲ್ವರು ಮೊಮ್ಮಕ್ಕಳನ್ನು ಸಲಹುವ ಜವಾಬ್ದಾರಿಯೂ ಹೆಗಲಿಗೇರಿತು. ಮುಗಳಿಹಾಳ ಗ್ರಾಮಕ್ಕೆ ಅವರನ್ನು ಕರೆತಂದ ಗಂಗಮ್ಮ ಇಬ್ಬರು ಹೆಣ್ಣು ಮೊಮ್ಮಕ್ಕಳಿಗೆ ಮದುವೆಯನ್ನೂ ಮಾಡಿಕೊಟ್ಟರು. ಇಬ್ಬರು ಗಂಡು ಮೊಮ್ಮಕ್ಕಳಿಗೆ ಕಾಲೇಜು ಶಿಕ್ಷಣವನ್ನೂ ಕೊಡಿಸುತ್ತಿದ್ದಾರೆ. ಗಂಡನ ಮನೆಯಿಂದ ಒಲಿದು ಬಂದ ಮೂರು ಎಕರೆ ಜಮೀನನ್ನು ಮೊಮ್ಮಕ್ಕಳ ನೆರವಿನಿಂದ ನಿರ್ವಹಿಸುತ್ತಿದ್ದಾರೆ.
ಗಂಗಮ್ಮಳ ಕಂಗಳು ಈಗಲೂ ಚುರುಕು. ಹಳೇ ಬಟ್ಟೆಗಳಿಂದ ಕೌದಿಯನ್ನು ಹೊಲಿದು ಕೊಡುತ್ತಾರೆ. ಉತ್ತರ ಕರ್ನಾಟಕದ ಜನಪ್ರಿಯ ಕೌದಿ ಇಂದಿಗೂ ಜೀವಂತವಾಗಿದೆಯೆಂದರೆ, ಅದಕ್ಕೆ ಗಂಗಮ್ಮನಂಥ ಹಿರಿಯ ಜೀವಗಳ ಶ್ರಮವೇ ಕಾರಣ. ಜಾತ್ರೆ ಇಲ್ಲದ ದಿನಗಳಲ್ಲಿ ಗೋಕಾಕ್,ಯರಗಟ್ಟಿಯ ಸಂತೆಗಳಲ್ಲಿ ಕುಳಿತು ತರಕಾರಿ ಮಾರುತ್ತಾರೆ. ಹಾಗೂ ತರಕಾರಿ ಉಳಿದರೆ, ಮಾರನೇ ದಿನದಿಂದ ಹಳ್ಳಿ ಹಳ್ಳಿಗೆ ತಿರುಗಿ ಮಾರಾಟ ಮಾಡುತ್ತಾರೆ. “ಕೊನೆಯ ಉಸಿರು ಇರುವ ವರೆಗೂ ಹೀಗೆಯೇ ಚಟುವಟಿಕೆಯಿಂದ, ಲವಲವಿಕೆಯಿಂದ ಬದುಕು ಸಾಗಿಸುತ್ತೇನೆ’ ಎನ್ನುತ್ತಾರೆ ಗಂಗಮ್ಮ.
– ದುಂಡಪ್ಪ ಬೆಳವಿ