Advertisement

ಬಾಂಡ್‌,ಗೋಲ್ಡ್‌ ಬಾಂಡ್‌!

10:31 AM Jul 23, 2019 | Sriram |

ನಮ್ಮ ದೇಶದ ಬ್ಯಾಂಕ್‌ಗಳಲ್ಲಿ ಇರುವ ಚಿನ್ನ 560 ಟನ್‌. ಆದರೆ, ಇತರೆ ರೂಪಗಳಲ್ಲಿ ನಮ್ಮ ಜನರ ಬಳಿ ಇರುವ ಚಿನ್ನ 24 ಸಾವಿರ ಟನ್‌. ಆಕಸ್ಮಾತ್‌ ಈ ಪರಿಸ್ಥಿತಿ ಉಲ್ಟಾ ಆಗಿದ್ದರೆ, ಅಂದರೆ ನಮ್ಮ ಬ್ಯಾಂಕುಗಳಲ್ಲಿ ಚಿನ್ನದ ಡೆಪಾಸಿಟ್‌ 24 ಸಾವಿರ ಟನ್‌ ಇದ್ದಿದ್ದರೆ ನಮ್ಮ ದೇಶದ ಆರ್ಥಿಕ ಚಿತ್ರಣವೇ ಬೇರೆಯಾಗಿರುತ್ತಿತ್ತು.


Advertisement

ಬಂಗಾರಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಇರುವ ಮಹತ್ವ ಇಂದಿನದಲ್ಲ. ಕ್ರಿಸ್ತಪೂರ್ವ 5ನೇ ಶತಮಾನದಲ್ಲೇ ಇಂದಿನ ಟರ್ಕಿ ದೇಶಕ್ಕೆ ಸೇರಿದ ಲಿಡಿಯ ಎಂಬ ನಗರದಲ್ಲಿ ಕೊಡು ಕೊಳ್ಳುವಿಕೆಯ ಮಾಧ್ಯಮವಾಗಿ ಬಂಗಾರವನ್ನು ಉಪಯೋಗಿಸುತ್ತಿದ್ದರು. ನಾಣ್ಯ ಎಷ್ಟು ತೂಕ ಹೊಂದಿದೆ ಎನ್ನುವುದರ ಆಧಾರದ ಮೇಲೆ ಅದರ ಮೌಲ್ಯ ನಿರ್ಧಾರವಾಗುತ್ತಿತ್ತು. 19ನೇ ಶತಮಾನದಲ್ಲಿ ಜಗತ್ತಿನ ಬಹುಪಾಲು ದೇಶಗಳು ತಮ್ಮ ಕರೆನ್ಸಿ ಮೌಲ್ಯವನ್ನು ಚಿನ್ನದೊಂದಿಗೆ ಹೋಲಿಕೆ ಮಾಡುತ್ತಿದ್ದವು. ಆದರೆ, ಇಲ್ಲೊಂದು ಸಮಸ್ಯೆಯಿತ್ತು. ಕರೆನ್ಸಿಯನ್ನಾದರೆ ಜೇಬಲ್ಲಿ, ಇಲ್ಲವೇ ಸೂಟ್‌ಕೇಸುಗಳಲ್ಲಿ ಒಯ್ಯಬಹುದು, ಆದರೆ ಹೆಚ್ಚಿನ ಮೊತ್ತದ, ಹೆಚ್ಚಿನ ತೂಕದ ಚಿನ್ನವನ್ನು ಜೊತೆಯಲ್ಲೇ ಒಯ್ಯುವುದು ಹೇಗೆ?

ತೂಕ ಇಳಿಸಿದ ಕಾಗದ
ಚಿನ್ನವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದು ಪ್ರಯಾಸಕರವಾಗಿ ಪರಿಣಮಿಸಿತು. ಅಲ್ಲದೆ ಹಡಗಿನಲ್ಲಿ ವ್ಯಾಪಾರ, ವಹಿವಾಟಿಗೆ ಹೊರಡುವ ನಾವಿಕರು ನೂರಾರು ಕೆ.ಜಿ ಚಿನ್ನವನ್ನು ಸಾಗಿಸುವುದು ಸುಲಭದ ಕೆಲಸವಾಗಿರಲಿಲ್ಲ , ಜೊತೆಗೆ ಕಳ್ಳಕಾಕರ ಭಯ ಬೇರೆ! ಈ ಕಾರಣದಿಂದಲೇ ಪೇಪರ್‌ ಮೇಲೆ ಚಿನ್ನದ ಮೌಲ್ಯ ಮುದ್ರಿಸಲು ಶುರುಮಾಡಿದರು. ಇಂಥ ಪೇಪರ್‌ ಕೊಟ್ಟು ಅಷ್ಟೇ ಮೌಲ್ಯದ ಚಿನ್ನ ಪಡೆಯುವ ಅವಕಾಶ ಕಲ್ಪಿಸಲಾಯಿತು. ಚಿನ್ನವನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸುವುದು ಇದರಿಂದ ತಪ್ಪಿತು. ಯಾವ ದೇಶ ಅತಿ ಹೆಚ್ಚು ಬಂಗಾರವನ್ನು ಹೊಂದಿದೆಯೋ ಆ ದೇಶ ಹೆಚ್ಚು ಶ್ರೀಮಂತ ದೇಶವೆಂದು ಪರಿಗಣಿಸಲಾಗುತ್ತಿತ್ತು.

ಚಿನ್ನದ ವಹಿವಾಟು
2013ರ ಅಂಕಿ ಅಂಶದ ಪ್ರಕಾರ, ಭಾರತ ದೇಶ ಒಂದರಲ್ಲೇ ನಡೆಯುವ ಚಿನ್ನಕ್ಕೆ ಸಂಬಂಧಿಸಿದ ವಹಿವಾಟಿನ ಒಟ್ಟು ಮೊತ್ತ 40 ಬಿಲಿಯನ್‌ ಅಮೆರಿಕನ್‌ ಡಾಲರ್‌! ಅಂದರೆ 4,000 ಕೋಟಿ ಡಾಲರ್‌! ಅದನ್ನು ಭಾರತದ ರುಪಾಯಿಗೆ ಬದಲಿಸಿದರೆ ಮಾಡಿದರೆ ಸಿಗುವ ಮೊತ್ತ 2 ಲಕ್ಷ 60 ಸಾವಿರ ಕೋಟಿ ರುಪಾಯಿ ವ್ಯವಹಾರ. 2013 ರಲ್ಲಿ ಭಾರತದ ರಕ್ಷಣಾ ಬಜೆಟ್‌ನ ಮೊತ್ತವೇ 38 ಬಿಲಿಯನ್‌ ಡಾಲರ್‌ ಆಗಿತ್ತು ಎಂದರೆ ಈ ಉದ್ದಿಮೆಯ ಮಹತ್ವ ಅರಿವಾದೀತು. ಅಚ್ಚರಿಯ ಸಂಗತಿ ಎಂದರೆ, 2018ರಲ್ಲಿ ಚಿನ್ನದ ವಹಿವಾಟಿನ ಮೊತ್ತ 31 ಬಿಲಿಯನ್‌ ಡಾಲರ್‌ಗೆ ಇಳಿದಿತ್ತು. ಡಿಮಾನಿಟೈಸೇಷನ್‌ನಿಂದಾಗಿ ಚಿನ್ನದ ಮೇಲಿನ ನಮ್ಮ ಜನರ ವ್ಯಾಮೋಹ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಯಿತು ಎನ್ನಬಹುದು.

ಆರ್ಥಿಕತೆ ಬಲ ಪಡಿಸಬಹುದು
ನಾವು ಚಿನ್ನದ ಮೇಲಿನ ಮೋಹ ಬಿಡದೆ, ಕೊಂಡಷ್ಟೂ ಅಮೆರಿಕಾ ಇನ್ನಷ್ಟು ಬಲಿಷ್ಠವಾಗುತ್ತದೆ. ಗಮನಿಸಿ, ಗೋಲ್ಡ… ಡೆಪಾಸಿಟ್‌ ಬ್ಯಾಂಕಿನಲ್ಲಿದ್ದರೆ ಮಾತ್ರ ಭಾರತ ದೇಶ ಅಮೆರಿಕಾಗಿಂತ ಬಲಿಷ್ಠವಾಗಲು ಸಾಧ್ಯ. ಆದರೆ, ನಮ್ಮ ದೇಶದಲ್ಲಿ ಆಗಿರುವುದೇನು ಗೊತ್ತೇ? ನಮ್ಮ ಬ್ಯಾಂಕ್‌ಗಳಲ್ಲಿ ಇರುವ ಚಿನ್ನ 560ಟನ್‌ ಆದರೆ, ಇತರೆ ರೂಪಗಳಲ್ಲಿ ದೇಶದ ಜನರ ಬಳಿ ಇರುವ ಚಿನ್ನ 24 ಸಾವಿರ ಟನ್‌. ಆಕಸ್ಮಾತ್‌ ಈ ಪರಿಸ್ಥಿತಿ ಉಲ್ಟಾ ಆಗಿದ್ದರೆ, ಅಂದರೆ ನಮ್ಮ ಬ್ಯಾಂಕುಗಳಲ್ಲಿ ಚಿನ್ನದ ಡೆಪಾಸಿಟ್‌ 24 ಸಾವಿರ ಟನ್‌ ಇದ್ದಿದ್ದರೆ ನಮ್ಮ ದೇಶದ ಆರ್ಥಿಕ ಚಿತ್ರಣವೇ ಬೇರೆಯಾಗಿರುತ್ತಿತ್ತು. ಅಮೆರಿಕದ ಬದಲು ಭಾರತ ವಿಶ್ವ ನಾಯಕನ ಪಟ್ಟವನ್ನು ಅನಾಯಾಸವಾಗಿ ಪಡೆಯುತ್ತಿತ್ತು .

Advertisement

ಚಿನ್ನದ ಗಟ್ಟಿಗಿಂತ ಪೇಪರ್‌ ಗಟ್ಟಿ
ಸಾಂಪ್ರದಾಯಿಕ ಫಿಸಿಕಲ್‌(ಭೌತಿಕ ರೂಪದ) ಚಿನ್ನಕ್ಕಿಂತ ಗೋಲ್ಡ… ಬಾಂಡ್‌ ಮೇಲಿನ ಹೂಡಿಕೆ ಸುರಕ್ಷಿತ. ಸರಕಾರದ ಅಭಯಹಸ್ತ ಬೇರೆ ಇರುತ್ತದೆ. ಹೀಗಾಗಿ, ಭೌತಿಕ ರೂಪದ ಚಿನ್ನದ ಮೇಲಿನ ಹೂಡಿಕೆಗಿಂತ ಬಾಂಡ್‌ ಮೇಲಿನ ಹೂಡಿಕೆ ಎÇÉಾ ರೀತಿಯಲ್ಲೂ ಸೂಕ್ತ. ಶುಭ ಸಮಾರಂಭವಿದ್ದು ಆಭರಣ ಮಾಡಿಸಿಕೊಳ್ಳುವ ತುರ್ತು ಇಲ್ಲದಿದ್ದರೆ ಇದು ಖಂಡಿತ ಲಾಭದಾಯಕ. ಹಾಗೊಮ್ಮೆ ಹೆಚ್ಚಿನ ಲಾಭ ತರುವಲ್ಲಿ ವಿಫ‌ಲವಾದರೂ ಕನಿಷ್ಠ ಹಣದುಬ್ಬರದ ಜೊತೆ ಜೊತೆಯಾಗಿ ನಡೆಯಲು ಚಿನ್ನದ ಮೇಲಿನ ಹೂಡಿಕೆ ಎÇÉಾ ಥರದಲ್ಲೂ ಸೂಕ್ತ.

ಡಾಲರ್‌ ಜೊತೆ ತುಲನೆ ಯಾಕೆ ಮಾಡ್ತಾರೆ?
1870ರಿಂದ 1914ರ ತನಕ ಚಿನ್ನ ಎಲ್ಲಾ ವ್ಯಾಪಾರ- ವಹಿವಾಟುಗಳ ಮೂಲವಾಗಿತ್ತು. ಮೊದಲನೇ ಮಹಾಯುದ್ದ ದ ನಂತರ ಸಾಂಬಾರ ಪದಾರ್ಥ, ಬೆಳ್ಳಿ , ತಾಮ್ರ ಕೂಡ ನಾಣ್ಯದ ಮೌಲ್ಯ ಅಳೆಯುವ ಸಾಧನಗಳಾಗಿ ಉಪಯೋಗಿಸಲ್ಪಟ್ಟವು. ಇಂಗ್ಲೆಂಡ್‌ ಹಾಗೂ ಅದರ ಸಾಮಂತ ದೇಶಗಳು ಮಾತ್ರ ಆಗಲೂ ಬಂಗಾರವನ್ನೇ ಮೌಲ್ಯ ಅಳೆಯುವ ಸಾಧನವನ್ನಾಗಿ ಬಳಸುತ್ತಿದ್ದವು . 1854ರಲ್ಲಿ ಪೋರ್ಚುಗಲ್‌, 1871ರಲ್ಲಿ ಜರ್ಮನಿ ಹೀಗೆ ಎಲ್ಲರೂ ಬಂಗಾರದ ಹಿಂದೆ ಬಿದ್ದರು. ಒಂದು ಗ್ರಾಂ ಚಿನ್ನಕ್ಕೆ ಇಷ್ಟು ಬೆಲೆ ಎಂದು ನಿಗದಿಪಡಿಸಿದರು. ಅಮೆರಿಕಾ ಆ ದಿನಗಳಲ್ಲಿ ಅತಿ ಹೆಚ್ಚು ಬಂಗಾರ ಹೊಂದಿದ ದೇಶವಾಗಿತ್ತು. ಹೀಗಾಗಿ ಎರಡನೇ ಮಹಾಯುದ್ದದ ನಂತರ ಜಗತ್ತಿನ ಎಲ್ಲಾ ದೇಶಗಳು ತಮ್ಮ ಕರೆನ್ಸಿ ಮೌಲ್ಯವನ್ನು ಅಮೆರಿಕದ ಡಾಲರ್‌ ಜೊತೆ ತುಲನೆ ಮಾಡಿ ನಿಗದಿ ಪಡಿಸಲು ಶುರು ಮಾಡಿದರು.

ಗೋಲ್ಡ್‌ ಬಾಂಡ್‌ನ‌ ಲಾಭಗಳು
ಚಿನ್ನವನ್ನು ಕೊಳ್ಳುವುದು ತಪ್ಪಲ್ಲ. ಆದರೆ ಚಿನ್ನಕ್ಕಿಂತ ಚಿನ್ನದ ಬಾಂಡ್‌ ಕೊಳ್ಳುವುದು ಉತ್ತಮ ನಿರ್ಧಾರ. ಕೇಂದ್ರ ಸರಕಾರ ಗೋಲ್ಡ್ ಬಾಂಡ್‌ಗಳನ್ನು ವಿತರಣೆ ಮಾಡುತ್ತದೆ. ಈ ಗೋಲ್ಡ್ ಬಾಂಡ್‌ಗಳ ಖರೀದಿಯಿಂದ ಗ್ರಾಹಕನಿಗೆ/ ಹೂಡಿಕೆದಾರನಿಗೆ ಆಗುವ ಲಾಭಗಳು ಹಲವು. ಅವೇನೆಂದರೆ…

1. ಮುಖ್ಯವಾಗಿ ಇದು ಷೇರು ಮಾರುಕಟ್ಟೆಯಲ್ಲಿ “ಟ್ರೇಡೆಬಲ್‌’. ಅಂದರೆ, ನಿಮಗೆ ಬೇಡ ಅನಿಸಿದರೆ ಇದನ್ನು ಷೇರು ಮಾರಿದಂತೆ ಡಿಮ್ಯಾಟ್‌ ಖಾತೆಯ ಮೂಲಕ ಮಾರಿಬಿಡಬಹುದು. ನಿಮ್ಮ ಬಾಂಡ್‌ ವಿತರಣೆಯಾದ ದಿನಾಂಕದಿಂದ ಹದಿನೈದು ದಿನದ ನಂತರ ಇದನ್ನು ನೀವು ಷೇರು ಮಾರುಕಟ್ಟೆಯಲ್ಲಿ ಮಾರಾಟಕ್ಕಿಡಬಹುದು.
2. ಮಾರಲು ಇಚ್ಛಿಸದೆ ಇರುವ ಹೂಡಿಕೆದಾರ, ಅಕಸ್ಮಾತ್‌ ಹಣದ ಅವಶ್ಯಕತೆ ಬಿದ್ದರೆ ಇದನ್ನು ಅಡವಿಟ್ಟು ಸಾಲ ಪಡೆಯುವ ಅವಕಾಶ ಕೂಡ ಇದೆ.
3. ಇದು ಪೇಪರ್‌ನಲ್ಲಿ ಇರುವ ಚಿನ್ನ. ಹಾಗಾಗಿ ಸಾಂಪ್ರದಾಯಿಕವಾಗಿ ಚಿನ್ನದ ಖರೀದಿಯಲ್ಲಿ ಆಗುವ ಚಿನ್ನದ ಸುರಕ್ಷತೆಯ ಚಿಂತೆ ಇರುವುದಿಲ್ಲ.
4. ಹೂಡಿಕೆದಾರ, ಹೂಡಿಕೆಯ ಪೂರ್ಣಾವಧಿ 8 ವರ್ಷ ಪೂರೈಸಿದರೆ ಕ್ಯಾಪಿಟಲ್‌ ಗೈನ್‌ ಟ್ಯಾಕ್ಸ್ ನಿಂದ ವಿನಾಯಿತಿ ಪಡೆಯಬಹುದು.
5. ಸಾಂಪ್ರದಾಯಿಕ ಚಿನ್ನದ ಮೇಲಿನ ಹೂಡಿಕೆ ಬಡ್ಡಿ ನೀಡುವುದಿಲ್ಲ. ಮಾರುವ ಸಮಯದಲ್ಲಿ ಹೆಚ್ಚಿರುವ ಬೆಲೆ ಮಾತ್ರವೇ ಅದರಲ್ಲಿನ ಲಾಭ. ಗೋಲ್ಡ್ ಬಾಂಡ್‌ ಮೂಲ ಹೂಡಿಕೆಯ ಮೇಲೆ 2.5 ಪ್ರತಿಶತ ಬಡ್ಡಿ ಪ್ರತಿ ಆರು ತಿಂಗಳಿಗೆ ಒಮ್ಮೆ ನೀಡುತ್ತದೆ.
6. ಪೂರ್ಣ ಹೂಡಿಕೆ ಅವಧಿ ಪೂರೈಸಿದ್ದೇ ಆದರೆ ಹೂಡಿಕೆಯ ಮೇಲೆ 20ರಿಂದ 25 ಪ್ರತಿಶತ ಲಾಭಾಂಶ ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿರುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next