Advertisement

ಬೊಮ್ಮಾಯಿ ಅವರಿಗೆ ಒಬ್ಬಂಟಿಯಾಗಿ ಯಾತ್ರೆ ಹೊರಡುವ ಧೈರ್ಯ ಇಲ್ಲ,ಅದಕ್ಕೆ.. : ಸಿದ್ದರಾಮಯ್ಯ

08:19 PM Oct 12, 2022 | Team Udayavani |

ಬೆಂಗಳೂರು : ”ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಒಬ್ಬಂಟಿಯಾಗಿ ಯಾತ್ರೆ ಹೊರಡುವ ಧೈರ್ಯ ಇಲ್ಲ, ಜನ ಕಲ್ಲು ಹೊಡೆಯುತ್ತಾರೋ ಎಂಬ ಭಯ. ಇದಕ್ಕಾಗಿ ರಕ್ಷಣೆಗಾಗಿ ಯಡಿಯೂರಪ್ಪ ಅವರನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಬಡಾಯಿಬೊಮ್ಮಾಯಿ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಲೇವಡಿ ಮಾಡಿದ್ದಾರೆ.

Advertisement

ಜನಸಂಕಲ್ಪ ಯಾತ್ರೆಗೆ ಹೊರಟಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ನನ್ನ ಎರಡೇ ಎರಡು ಸವಾಲು.. 1. ಕಾರು-ಜೀಪು ಬಿಟ್ಟು ನಾಲ್ಕು ಕಿ.ಮೀ. ಎಡವದೆ ನಡೆದುಕೊಂಡು ಹೋಗಿ. 2. ಸಿದ್ದರಾಮಯ್ಯ ಎಂಬ ಹೆಸರೆತ್ತದೆ ಐದು ನಿಮಿಷ ಭಾಷಣ ಮಾಡಿ ಎಂದು ಸರಣಿ ಟ್ವೀಟ್ ಗಳ ಮೂಲಕ ಬುಧವಾರ ಸವಾಲು ಹಾಕಿದ್ದಾರೆ.

‘ಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಂಡಾಗ ಬಹಿರಂಗವಾಗಿಯೇ ಯಡಿಯೂರಪ್ಪ ಅವರು ಕಣ್ಣೀರು ಹಾಕಿದ್ದನ್ನು ರಾಜ್ಯದ ಜನ ನೋಡಿದ್ದಾರೆ. ಅವರ ಬೆನ್ನಿಗೆ ಇರಿದವರು ಯಾರು ಎನ್ನುವುದೂ ಜನರಿಗೆ ಗೊತ್ತು. ಯಡಿಯೂರಪ್ಪನವರನ್ನು ಕರೆದುಕೊಂಡು ಬಂದ ಕೂಡಲೇ ಜನ ನಿಮ್ಮ ದ್ರೋಹವನ್ನು ಮರೆಯಲಾರರು’ ಎಂದು ಟ್ವೀಟ್ ಮಾಡಿದ್ದಾರೆ.

‘ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳುವಂತೆ ಬಸವರಾಜ್ ಬೊಮ್ಮಾಯಿ ಅವರೊಬ್ಬ ‘ಎರಡುವರೆ ಸಾವಿರ ಕೋಟಿ ರೂಪಾಯಿಯ #PayCM’’ ಹೈಕಮಾಂಡ್ ಗೆ ಸರಿಯಾಗಿ ಕಂತು ಪಾವತಿಯಾದರೆ ಮಾತ್ರ ಅವರು ಸುರಕ್ಷಿತ. ತಪ್ಪಿದರೆ ಮನೆಗೆ.’ ಎಂದು ಆಕ್ರೋಶ ಹೊರ ಹಾಕಿದ್ದಾರೆ.

‘ರಾಹುಲ್ ಗಾಂಧಿಯವರನ್ನು ಬಚ್ಚಾ ಎಂದು ಹೇಳುವ ಯಡಿಯೂರಪ್ಪ ಅವರೇ, ನಿಮ್ಮ ನರೇಂದ್ರ ಮೋದಿ ಅವರು ವಿಶ್ವಗುರು ಅಲ್ಲ ಅವರೊಬ್ಬ ಪುಕ್ಕಲು ಗುರು. ಅವರು ನಮ್ಮನ್ನು ಎದುರಿಸುವುದು ಬೇಡ, ಧೈರ್ಯವಿದ್ದರೆ ಒಂದು ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೇಳಿ’ ಎಂದು ಸವಾಲೆಸೆದಿದ್ದಾರೆ.

Advertisement

‘ಪಾಪ, ಯಡಿಯೂರಪ್ಪ ಅವರು ಯಾರೋ ಬರೆದುಕೊಟ್ಟದ್ದನ್ನು ಓದಿ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅವರು ಈ ರೀತಿ ಕಾಲ ವ್ಯರ್ಥ ಮಾಡುವುದರ ಬದಲಿಗೆ ಒಳ್ಳೆಯ ವಕೀಲರ ಜೊತೆ ಸಮಾಲೋಚಿಸಿ ಮತ್ತೊಮ್ಮೆ ಜೈಲು ಪಾಲಾಗದಂತೆ ನೋಡಿಕೊಳ್ಳುವುದು ಒಳ್ಳೆಯದು’ ಎಂದು ಲೇವಡಿ ಮಾಡಿದ್ದಾರೆ.

‘ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಿದ ಮಂಡಲ್ ವರದಿಯಿಂದ ಹಿಡಿದು ಇಲ್ಲಿಯ ವರೆಗೆ ಮೀಸಲಾತಿಯನ್ನು ಅಡಿಯಿಂದ ಮುಡಿವರೆಗೆ ವಿರೋಧಿಸುತ್ತಾ ಬಂದಿರುವ ಬಿಜೆಪಿ ಯ ಡಿಎನ್ ಎಯಲ್ಲಿಯೇ ಮೀಸಲಾತಿ ವಿರೋಧ ಇದೆ. ಈ ನಾಲ್ಕು ದಿನಗಳ ನಾಟಕದ ಮಾತುಗಳನ್ನು ನಂಬುವಷ್ಟು ಜನ ಮೂರ್ಖರಲ್ಲ’ ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next