ಬೆಳಗಾವಿ: ಸಾರ್ವಜನಿಕರು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ಸಹಕಾರದಿಂದ ಎಂದೂ ಕಂಡರಿಯದ ಪ್ರವಾಹ ಪರಿಸ್ಥಿತಿ ಹಾಗೂ ಕೋವಿಡ್ ದಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವುದು ಸಾಧ್ಯವಾಯಿತು ಎಂದು ನಿವೃತ್ತ ಜಿಲ್ಲಾಧಿಕಾರಿ ಡಾ| ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಂತಹದ್ದೇ ಸಂದರ್ಭ ಬಂದರೂ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನಸ್ಸು ಮಾಡಿದರೆ ಯಶಸ್ವಿಯಾಗಿ ನಿಭಾಯಿಸಬಲ್ಲರು ಎಂಬುದಕ್ಕೆ ಕೋವಿಡ್ ಮತ್ತು ಪ್ರವಾಹ ಸ್ಥಿತಿ ಸಾಕ್ಷಿಯಾಗಿದೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿನ ಸೇವೆ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣಗಳು ಎಂದು ಬಾವುಕರಾಗಿ ಹೇಳಿದ ಬೊಮ್ಮನಹಳ್ಳಿ, ಈ ಸಂದರ್ಭದಲ್ಲಿ ಧೆ„ರ್ಯ ಮತ್ತು ಆತ್ಮಸ್ಥೈರ್ಯ ತುಂಬಿದ ಪತ್ನಿಗೆ ಸೆಲ್ಯೂಟ್ ಸಲ್ಲಿಸುತ್ತೇನೆ ಎಂದರು. ಕೆಲಸವನ್ನು ಸಂಭ್ರಮಿಸಿದಾಗ ಅದು ಬೇಸರ ಎನಿಸುವುದಿಲ್ಲ. ಅದೇ ರೀತಿ ನಾನು ಕೆಲಸವನ್ನು ಸಂಭ್ರಮಿಸಿದ್ದೇನೆ. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕೆಲಸ ಮಾಡುವ ಅಪರೂಪದ ಅವಕಾಶಗಳನ್ನು ಮೂವರು ಮುಖ್ಯಮಂತ್ರಿಗಳು ಒದಗಿಸಿದ್ದಾರೆ. ಮುಖ್ಯಮಂತ್ರಿಗಳು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ಜನರ ಪ್ರೀತಿ-ವಿಶ್ವಾಸಕ್ಕೆ ಚಿರ ಋಣಿಯಾಗಿದ್ದೇನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಡಾ| ಎಸ್.ಬಿ. ಬೊಮ್ಮನಹಳ್ಳಿ ಅವರೊಂದಿಗಿನ ಒಡನಾಟ ಮತ್ತು ಅವರ ಸೇವಾನುಭವವನ್ನು ಸ್ಮರಿಸಿದರು. ಜಿಲ್ಲೆಯ ಅಧಿಕಾರಿಗಳು ಅದೇ ರೀತಿಯ ಸಹಕಾರವನ್ನು ತಮಗೂ ನೀಡುತ್ತೀರಿ ಎಂಬ ಆಶಯ ವ್ಯಕ್ತಪಡಿಸಿದರು.
ಜಿಪಂ ಸಿಇಒ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, ಡಾ| ಬೊಮ್ಮನಹಳ್ಳಿ ಅವರ ಆಡಳಿತದ ಅನುಭವ ತಮಗೆ ದೊಡ್ಡ ಪಾಠವಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಇದ್ದರು. ಅಶೋಕ ದುಡಗುಂಟಿ ಸ್ವಾಗತಿಸಿದರು. ಶಶಿಧರ್ ಕುರೇರ ವಂದಿಸಿದರು.