Advertisement

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

01:08 AM Jun 16, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಮಾಜಿ ಸಿಎಂಗಳಾದ ಬಸವರಾಜ್‌ ಬೊಮ್ಮಾಯಿ, ಎಚ್‌.ಡಿ. ಕುಮಾರಸ್ವಾಮಿ, ವಿಧಾನ ಪರಿಷತ್‌ನ ವಿಪಕ್ಷ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

Advertisement

ಶುಕ್ರವಾರವಷ್ಟೇ ಸಂಡೂರು ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ಈ. ತುಕಾರಾಂ ರಾಜೀನಾಮೆ ಸಲ್ಲಿಸಿದ್ದರು. ಸಂಸದರಾಗಿ ಆಯ್ಕೆಯಾದ 15 ದಿನಗಳೊಳಗಾಗಿ ಎರಡಲ್ಲಿ ಯಾವುದಾದರೊಂದು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಿತ್ತು. ಹೀಗಾಗಿ ಸಂಸತ್‌ ಸದಸ್ಯ ಸ್ಥಾನವನ್ನು ಉಳಿಸಿಕೊಂಡಿರುವ ನಾಯಕರು, ಶನಿವಾರ ವಿಧಾನಸೌಧದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರನ್ನು ಭೇಟಿ ಮಾಡಿ ವಿಧಾನಸಭಾ ಸದಸ್ಯ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ನಿರ್ಗಮಿತ ಶಾಸಕರಿಗೆ ಸ್ಪೀಕರ್‌ ಖಾದರ್‌ ಅವರು ಶಾಲು ಹೊದಿಸಿ ಶುಭ ಹಾರೈಸಿದರು.

ಕೋಟ ಶ್ರೀನಿವಾಸ ಪೂಜಾರಿ ಅವರು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆಯನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹೊÉàಟ್‌ ಅಂಗೀಕರಿಸಿದ್ದಾರೆ.

ಯಾವ ಕ್ಷೇತ್ರಗಳಿಗೆ ಚುನಾವಣೆ?
2023ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ 2024ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಗೆದ್ದು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಬಸವರಾಜ ಬೊಮ್ಮಾಯಿ ಪ್ರಸ್ತುತ ಹಾವೇರಿ ಲೋಕಸಭಾ ಕ್ಷೇತ್ರದಿಂದ ಚುನಾಯಿತಗೊಂಡಿದ್ದಾರೆ.

ಸಂಡೂರು ವಿಧಾನಸಭಾ ಕ್ಷೇತ್ರದಿಂದ ಜಯ ಗಳಿಸಿದ್ದ ತುಕಾರಾಂ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ವಿಪಕ್ಷ ನಾಯಕರೂ ಆಗಿದ್ದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು. ಈ ನಾಲ್ವರ ಶಾಸಕತ್ವದ ಅವಧಿಯು 2028ರ ವರೆಗೂ ಇತ್ತು.

Advertisement

ಶೀಘ್ರ ಉಪಚುನಾವಣೆ ಘೋಷಣೆ
ವಿಧಾನಸಭೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನ ಒಂದೊಂದು ಸ್ಥಾನಗಳು ಈ ರಾಜೀನಾಮೆಯಿಂದ ತೆರವಾಗಿದ್ದು, ತೆರವಾಗಿರುವ ಈ ಸ್ಥಾನಗಳಿಗೆ 6 ತಿಂಗಳೊಳಗಾಗಿ ಉಪಚುನಾವಣೆ ನಡೆಯಬೇಕಿದೆ.

ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ನಿಖೀಲ್‌ ಕುಮಾರಸ್ವಾಮಿ ಅಥವಾ ಸಿ.ಪಿ. ಯೋಗೇಶ್ವರ್‌ ಸ್ಪರ್ಧಿಸುವ ಸಾಧ್ಯತೆ ಸದ್ಯಕ್ಕಿದೆ. ಕಾಂಗ್ರೆಸ್‌ನಿಂದ ಡಿ.ಕೆ. ಸುರೇಶ್‌ ಸ್ಪರ್ಧೆ ಅನುಮಾನವಿದ್ದು, ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚಿಂತನೆ ನಡೆದಿವೆ.

ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಸತತ 4 ಬಾರಿ ಗೆದ್ದಿದ್ದಾರೆ. ಇಲ್ಲಿಗೆ ಯಾರು? ಕಾಂಗ್ರೆಸ್‌ನಿಂದ ಸ್ಪರ್ಧಿಸುವವರು ಯಾರು? ಹಾಗೂ ಸಂಡೂರಿನಲ್ಲಿ ತುಕಾರಾಂ 4 ಬಾರಿ ಗೆದ್ದಿದ್ದು, ಅಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎನ್ನುವುರ ಜತೆಗೆ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದಕ್ಕೆ ಉತ್ತರ ಸಿಗಬೇಕಿದೆ.

ಕೇಂದ್ರದ ಸಚಿವನಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಚನ್ನಪಟ್ಟಣದಿಂದ ಯಾರು ಸ್ಪರ್ಧಿಸುತ್ತಾರೆ? ವಿಧಾನಸಭೆಯಲ್ಲಿ ಯಾರು ಜೆಡಿಎಸ್‌ ನಾಯಕರಾಗಿರುತ್ತಾರೆ ಎಂಬುದಕ್ಕೆ ಶೀಘ್ರವೇ ಉತ್ತರ ಸಿಗಲಿದೆ.
-ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ಸಂಸದನಾಗಿ ಶಿಗ್ಗಾಂವಿ ಸಹಿತ ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುವ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಕೇಂದ್ರ ಸರಕಾರದ ಜತೆಗೂಡಿ ಈ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ.
-ಬಸವರಾಜ ಬೊಮ್ಮಾಯಿ, ಸಂಸದ

 

Advertisement

Udayavani is now on Telegram. Click here to join our channel and stay updated with the latest news.

Next