ಬೆಂಗಳೂರು: ಬಿಜೆಪಿಗೆ ಕಾಮಾಲೆ ರೋಗ ಬಂದಿದೆ. ಸುಳ್ಳು ಹೇಳುವುದು, ಸುಳ್ಳು ಹಬ್ಬಿಸುವುದು ಇವರೇ. ಬೊಮ್ಮಾಯಿ ಆರ್ ಎಸ್ಎಸ್ ಕೈಗೊಂಬೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಪೋಟೋ ಹಾಕಿದ್ದಾರೆ. ಫೋಟೋ ಹಾಕಲಿ ಬೇಡ ಎನ್ನುವುದಿಲ್ಲ. ಆದರೆ, ಸಾವರ್ಕರ್ ಫೋಟೋ ಹಾಕಿ ಟಿಪ್ಪು ಪೋಟೋ ತೆಗೆದಿದ್ದಾರೆ. ಹೀಗೆ ಮಾಡಿದರೆ ಗಲಭೆ ಆಗುವುದಿಲ್ಲವೆ ಎಂದು ಪ್ರಶ್ನಿಸಿದರು.
ಈಶ್ವರಪ್ಪ ಕಾಂಗ್ರೆಸ್ ಬಗ್ಗೆ ಆರೋಪ ಮಾಡುತ್ತಲೇ ಇರುತ್ತಾರೆ. ಬಿಜೆಪಿಯವರು ತಪ್ಪು ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ. ಮಗುವನ್ನು ಚಿವುಟುವವರೂ ಇವರೇ, ತೊಟ್ಟಿಲು ತೂಗುವವರೂ ಇವರೇ. ಘಟನೆಯಲ್ಲಿ ಎಸ್‌ಡಿಪಿಐ ಕೈವಾಡವಿದ್ದರೆ ಕ್ರಮ ತೆಗೆದುಕೊಳ್ಳಿ. ಸರ್ಕಾರ ಇವರದೇ ಇದೆ. ಇವರ ಬಳಿ ದಾಖಲೆಯಿದ್ದರೆ ಕ್ರಮ ತೆಗೆದುಕೊಳ್ಳಲಿ. ಇಬ್ಬಂದಿ ರಾಜಕೀಯ ಮಾಡಬೇಡಿ ಎಂದು ಹೇಳಿದರು.
ಇದನ್ನೂ ಓದಿ:ನಿಷೇಧಾಜ್ಞೆ ನಡುವೆ ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ
ಸಿಎಂ ಪ್ರವೀಣ್ ಮನೆಗೆ ಮಾತ್ರ ಹೊಗುತ್ತಾರೆ. ಇನ್ನಿಬ್ಬರು ಮನೆಗೆ ಯಾಕೆ ಹೋಗುವುದಿಲ್ಲ. ಸರ್ಕಾರದ ದುಡ್ಡು ಅಲ್ವ, ತೆರಿಗೆ ಹಣ ಅಲ್ಲವಾ? ಮಸೂದ್, ಫಾಜಿಲ್ ಅವರಿಬ್ಬರಿಗೂ ಪರಿಹಾರ ಕೊಡಬೇಕಲ್ವಾ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಬಸವರಾಜ್ ಬೊಮ್ಮಾಯಿ ಆರ್‌ಎಸ್‌ಎಸ್ ಕೈಗೊಂಬೆ. ಹೀಗಿರುವಾಗ ಮತ್ತೇನು ಹೇಳುತ್ತಾರೆ. ಇವರು ನೆಹರು ಫೋಟೋನೇ ಹಾಕಿಲ್ಲ. ನರೇಂದ್ರ ಮೋದಿ ನೆಹರು ಸ್ಮರಣೆ ಮಾಡುತ್ತಾರೆ. ಇವರಿಗೆ ಇತಿಹಾಸವೇ ಗೊತ್ತಿಲ್ಲ. ಸಾವರ್ಕರ್ ಮುಚ್ಚಳಿಕೆ ಬರೆದು ಕೊಟ್ಟು ಬಂದ ಮೇಲೆ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಎಂದು ಪ್ರಶ್ನಿಸಿದರು