Advertisement

ಬೊಮ್ಮಾಯಿ ಬಸವ ಚಿಂತಕರಲ್ಲ, ಮೋಸಗಾರ ಸಿಎಂ : ರೇವುನಾಯಕ ಬೆಳಮಗಿ

04:29 PM Feb 08, 2023 | Team Udayavani |

ವಾಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಸವಣ್ಣನ ಚಿಂತನೆ ಹೊಂದಿದ್ದಾರೆ. ಎಲ್ಲರಿಗೂ ನ್ಯಾಯ ಕೊಟ್ಟು ಸಮಾನತೆ ಕೊಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರು ಇತರರಂತೆ ಮೋಸಗಾರ ಸಿಎಂ ಆಗಿದ್ದಾರೆ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಆರೋಪಿಸಿದರು.

Advertisement

ಚಿತ್ತಾಪುರ ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ತಾಂಡಾಗಳಲ್ಲಿ ವಾಸಿಸುವ ಬಂಜಾರಾ ಸಮುದಾಯದ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ನಾಟಕ ಇತ್ತೀಚೆಗೆ ಸೇಡಂ ಪಟ್ಟಣದಲ್ಲಿ ಬಿಜೆಪಿ ಮಾಡಿತು. ನೂರಾರು ವರ್ಷಗಳಿಂದ ತಾಂಡಾಗಳಲ್ಲಿ ನಮ್ಮ ಲಂಬಾಣಿ ಜನ ಬದುಕುತ್ತಿದ್ದಾರೆ. ಪೂರ್ವಜರ ಆಸ್ತಿಯನ್ನು ಹೊಂದಿದ್ದಾರೆ. ಇಂಥಹ ಸಮುದಾಯಕ್ಕೆ ಪ್ರಧಾನಿ ಮೋದಿ ಮೂಲಕ ಹಕ್ಕು ಪತ್ರ ಕೊಡಿಸಿದ್ದು ಹಾಸ್ಯಾಸ್ಪದವಾಗಿದೆ ಎಂದರು.

ನಮ್ಮ ಜನಗಳು ಸ್ವಂತ ಕಟ್ಟಿಕೊಂಡ ಮನೆಗಳಿಗೆ ಹಕ್ಕು ಪತ್ರ ವಿತರಿಸಿದ್ದು ಮಹಾನಾಟಕ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ದೃಷ್ಠಿಯಲ್ಲಿ ಇಟ್ಟುಕೊಂಡು ಬಿಜೆಪಿ ಬಂಜಾರಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನಾನು ಶಾಸಕನಾಗಿ ಮಂತ್ರಿಯಾದಾಗ ಉತ್ತಮ ಆಡಳಿತ ನೀಡಿದ್ದೆ. ಭ್ರಷ್ಟಾಚಾರ ಮಾಡಲಿಲ್ಲ, ಕಮಿಷನ್ ಕೇಳಲಿಲ್ಲ, ಜನರಿಗೆ ಮೋಸ ಮಾಡಲಿಲ್ಲ, ಸುಳ್ಳು ಹೇಳಲಿಲ್ಲ. ಆದರೂ ಬಿಜೆಪಿ ನಾಯಕರು ನನಗೆ ಟಿಕೆಟ್ ಕಟ್ ಮಾಡುವ ಮೂಲಕ ಮೋಸ ಮಾಡಿದರು ಎಂದು ನೋವು ಹೇಳಿಕೊಂಡ ಬೆಳಮಗಿ, ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಕಲಂ ಜಾರಿಗೆ ತರುವ ಮೂಲಕ ಈ ಭಾಗದ ಯುವಜನತೆಗೆ ಉದ್ಯೋಗ ಹಾಗೂ ಉನ್ನತ ಶಿಕ್ಷಣ ಪಡೆಯಲು ಸಹಕಾರ ಮಾಡಿದ್ದಾರೆ. ಖರ್ಗೆ ಕೊಡುಗೆ ಹೇಳಲು ದಿನವೇ ಬೇಕಾಗುತ್ತದೆ ಎಂದರು‌.

ಮಾಜಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಬಾಬುರಾವ ಚವ್ಹಾಣ, ಶಾಸಕ ಪ್ರಿಯಾಂಕ್ ಖರ್ಗೆ, ಎಂ.ವೈ.ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮಹೆಮೂದ್ ಸಾಹೇಬ, ನಾಗರೆಡ್ಡಿಗೌಡ ಪಾಟೀಲ ಕರದಾಳ, ಮಾಪಣ್ಣ ಗಂಜಿಗೇರಿ, ಶಂಭುಲಿಂಗ ಗುಂಡಗುರ್ತಿ, ವೀರಣ್ಣಗೌಡ ಪರಸರೆಡ್ಡಿ, ಶ್ರೀನಿವಾಸ ಸಗರ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next