ಯತಿರಾಜ್ ನಟಿಸಿ, ನಿರ್ದೇಶಿಸಿರುವ “ಬೊಂಬೆ ಹೇಳುತೈತೆ’ ಸಿನಿಮಾದ ಹಾಡು ಮತ್ತು ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.
ಬಿಬಿಎಂಪಿ ಆಯುಕ್ತರ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಂಕರ್, ಸಿರಿ ಮ್ಯೂಸಿಕ್‌ನ ಸುರೇಶ್ ಚಿಕ್ಕಣ್ಣ, ನಟ ಎಂ. ಡಿ ಕೌಶಿಕ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಾಜರಿದ್ದು, “ಬೊಂಬೆ ಹೇಳುತೈತೆ’ ಸಿನಿಮಾದ ಹಾಡು ಮತ್ತು ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ನಟ ಕಂ ನಿರ್ದೇಶಕ ಯತಿರಾಜ್, “”ಬೊಂಬೆ ಹೇಳುತೈತೆ’ ಏಕ ವ್ಯಕ್ತಿ ಅಭಿನಯಿಸಿ ಮತ್ತು ನಿರ್ದೇಶಿಸಿರುವ ಕನ್ನಡದ ಮೊದಲ ಸಿನಿಮಾ. ಕನ್ನಡ ಚಿತ್ರರಂಗದಲ್ಲಿ ಏಕ ವ್ಯಕ್ತಿ ಅಭಿನಯಿಸಿದ ಸಿನಿಮಾಗಳು ಈಗಾಗಲೇ ಕೆಲವು ಬಂದಿವೆಯಾದರೂ, ಒಬ್ಬನೇ ವ್ಯಕ್ತಿ ಅಭಿನಯಿಸಿ ಮತ್ತು ನಿರ್ದೇಶಿಸಿರುವ ಸಿನಿಮಾಗಳು ಯಾವುದೂ ಬಂದಿಲ್ಲ. “ಬೊಂಬೆ ಹೇಳುತೈತೆ’ ಸಿನಿಮಾದಲ್ಲಿ ತೆರೆಮುಂದೆ ಅಭಿನಯಿಸಿ, ತೆರೆಹಿಂದೆ ಸಿನಿಮಾವನ್ನು ನಿರ್ದೇಶಿಸಿದ್ದೇನೆ. ಕನ್ನಡದಲ್ಲಿ ಒಬ್ಬನೇ ವ್ಯಕ್ತಿ ಅಭಿನಯಿಸಿ, ನಿರ್ದೇಶಿಸಿರುವುದು ಮೊದಲ ಪ್ರಯತ್ನ. ಇದು ದಾಖಲೆಯೂ ಆಗಲಿದೆ’ ಎಂದು ವಿವರಣೆ ನೀಡಿದರು.
ಸದ್ಯ ಈಗಾಗಲೇ “ಬೊಂಬೆ ಹೇಳುತೈತೆ’ ಸಿನಿಮಾ ಸೆನ್ಸಾರ್‌ನಿಂದಲೂ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದು, ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಎನ್ನುವುದು ಚಿತ್ರತಂಡದ ಮಾಹಿತಿ.