ಮುಂಬಯಿ : ‘ಕ್ಯಾಪಿಟಲ್ ಗೇನ್ಸ್ ತೆರಿಗೆ ಇರುವುದಿಲ್ಲ, ಆದರೆ ಲಾಂಗ್ ಟರ್ಮ್ ಗೆ ಸಂಬಂಧಿಸಿದಂತೆ 3 ವರ್ಷಗಳ ತೆರಿಗೆ ನಿಯಮ ಜಾರಿಗೆ ಬರಬಹುದು’ ಎಂಬ ಬಜೆಟ್ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಎಚ್ಚರಿಕೆಯ ನಡೆ ತೋರಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಸೋಮವಾರದ ವಹಿವಾಟನ್ನು 32.68 ಅಂಕಗಳ ನಷ್ಟದೊಂದಿಗೆ 26,726.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 7.75 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 8,236.05 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಡಾ. ರೆಡ್ಡಿ ಮತ್ತು ಓಎನ್‌ಜಿಸಿ ಟಾಪ್ ಲೂಸರ್‌ಗಳಾಗಿ ಕಂಡುಬಂದಿರುವುದು ಗಮನಾರ್ಹವಾಗಿದೆ. ದೇಶೀಯ ಹಾಗೂ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ದುರ್ಬಲ ಪ್ರವೃತ್ತಿ, ಡಾಲರ್ ಎದುರು ರೂಪಾಯಿಯ ಇನ್ನಷ್ಟು ಕುಸಿತ, ಮುಂಬರಲಿರುವ ಮೂರನೇ ತ್ತೈಮಾಸಿಕ ಕಾರ್ಪೊರೇಟ್ ಫಲಿತಾಂಶ ಇತ್ಯಾದಿ ಅಂಶಗಳೆಲ್ಲ ಇಂದಿನ ಶೇರು ವಹಿವಾಟದ ಮೇಲೆ ಪ್ರಭಾವ ಬೀರಿವೆ.
ಇಂಡಸ್‌ಇಂಡ್ ಬ್ಯಾಂಕ್, ಇನ್ಫೋಸಿಸ್, ಟಿಸಿಎಸ್ ಕಂಪೆನಿಗಳ ತ್ತೈಮಾಸಿಕ ಫಲಿತಾಂಶ ಇಂದೇ ಪ್ರಕಟಗೊಳ್ಳಲಿವೆ. ನೋಟು ಅಪನಗದೀಕರಣದ ಬಳಿಕದ ಮೊದಲ ಫಲಿತಾಂಶವಾಗಿರುವುದರಿಂದ ಇವುಗಳ ಮೇಲೆ ಸಹಜವಾಗಿಯೇ ಶೇರುದಾರರಿಗೆ ಕುತೂಹಲವಿದೆ.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,567 ಶೇರುಗಳು ಮುನ್ನಡೆ ಸಾಧಿಸಿದರೆ 1,253 ಶೇರುಗಳು ಹಿನ್ನಡೆಗೆ ಗುರಿಯಾದವು.