Advertisement
ಇತ್ತೀಚೆಗೆ ಸಯಾನ್‌ನ ನಿತ್ಯಾನಂದ ಸಭಾಗೃಹದಲ್ಲಿ ಜರಗಿದ ಬೋಂಬೆ ಬಂಟ್ಸ್ ಅಸೋಸಿಯೇಶನ್ ಮುಖವಾಣಿ ಪತ್ರಪುಷ್ಪದ ಸಂಪಾದಕ, ಸಾಹಿತಿ ರಾಮ ಮೋಹನ್ ಬಳ್ಕುಂಜೆ ಅವರ ವಿದಾಯಕೂಟ ಮತ್ತು ಅಭಿನಂದನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಮಾರು 25 ವರ್ಷಗಳ ಸೇವಾವಧಿಯ ಪ್ರಾರಂಭದಲ್ಲಿ ಕಚೇರಿಯ ಪ್ರಬಂಧಕರಾಗಿ, 2005ರಿಂದ ಅಸೋಸಿಯೇಶನ್ ಮುಖವಾಣಿ ಪತ್ರಪುಷ್ಪದ ಸಂಪಾದಕರಾಗಿ ಆಯ್ಕೆಯಾದರು. ಅವರ ಸಂಪಾದಕೀಯ ಬರಹಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಿತ್ತು. ಅವರ ನಿವೃತ್ತಿಯ ಜೀವನ ಸುಖ, ಶಾಂತಿ, ಆರೋಗ್ಯ, ಐಶ್ವರ್ಯದಿಂದ ಕೂಡಿರಲಿ ಎಂದು ಹಾರೈಸಿದರು.
Related Articles
Advertisement
ಯುವ ವಿಭಾಗದ ಕಾರ್ಯಾಧ್ಯಕ್ಷ ಶಶಿಕಾಂತ್ ಶೆಟ್ಟಿ ಮಾತನಾಡಿ, ಯುವ ವಿಭಾಗಕ್ಕೆ ಬಳ್ಕುಂಜೆಯವರಿಂದ ದೊರೆತ ಸಹಕಾರ, ಮಾರ್ಗದರ್ಶನ ಅನನ್ಯ. ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಪದಾಧಿಕಾರಿಗಳು, ಗಣ್ಯರು ಬಳ್ಕುಂಜೆ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗೌರವಿಸಿ ಅಭಿನಂದಿಸಿ ಶುಭಹಾರೈಸಿದರು. ಅಸೋಸಿಯೇಶನ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಮಾಜಿ ಅಧ್ಯಕ್ಷರುಗಳು, ಕಾರ್ಯಕ್ರಮ ವ್ಯವಸ್ಥಾಪನ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದವರು, ಬಳ್ಕುಂಜೆಯವರ ಹಿತೈಷಿಗಳು, ಅಭಿಮಾನಿ ಬಳಗದ ವತಿಯಿಂದ ಸಂಗ್ರಹಿಸಲಾದ ನಿಧಿಯನ್ನು ಅತಿಥಿ-ಗಣ್ಯರು ಬಳ್ಕುಂಜೆ ಅವರಿಗೆ ಪ್ರದಾನಿಸಿ ಶುಭಹಾರೈಸಿದರು. ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಕಾರ್ಯದರ್ಶಿ, ಅಸೋಸಿಯೇಶನ್ ಕಾರ್ಯಕಾರಿ ಸಮಿತಿಯ ಸದಸ್ಯ ಪೇಟೆಮನೆ ಪ್ರಕಾಶ್ ಶೆಟ್ಟಿ ನಿರ್ವಹಿಸಿದರು. ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ ವಂದಿಸಿದರು.
ಈ ಮೊದಲು 14 ವರ್ಷಗಳ ಕಾಲ ಬೇರೊಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಬಹಳಷ್ಟು ಕಷ್ಟವನ್ನು ಅನುಭವಿಸಿದ್ದೆ. ಆದರೆ ಇಲ್ಲಿನ ನನ್ನ 25 ವರ್ಷಗಳ ಸೇವೆಯಲ್ಲಿ ನನಗೆ ಸಿಕ್ಕ ಪ್ರೀತಿ, ಗೌರವ, ಅಭಿಮಾನವನ್ನು ನಾನು ಜೀವನ ಪರ್ಯಂತ ಮರೆಯುವಂತಿಲ್ಲ. ಇದಕ್ಕೆ ಕಾರಣ ಇವರೆಲ್ಲರೂ ನಮ್ಮವರು. ನನ್ನ ಕುಟುಂಬ ಎಂಬ ಭಾವನೆ ನನ್ನಲ್ಲಿ ಬೆಳೆದಿದೆ. ಇಂದು ನಿಮ್ಮೆಲ್ಲರನ್ನು ಬಿಟ್ಟು ಹುಟ್ಟೂರಿಗೆ ತೆರಳುವಾಗ ಮದುವೆಯ ದಿವಸ ಗಂಡನ ಮನೆಗೆ ಹೆಣ್ಣೊಬ್ಬಳು ಹೋಗುವ ಮನಸ್ಥಿತಿ ನನ್ನದಾಗಿದೆ. ಇಂದು ನನಗೆ ಬಹಳಷ್ಟು ಮಾನಸಿಕ ವೇದನೆಯಾಗುತ್ತಿದೆ. ನನಗೆ ಏನೇ ಕಷ್ಟ ಬಂದರೂ ಅಪತ್ಕಾಲದಲ್ಲಿ ಇಲ್ಲಿಯವರೆಲ್ಲರೂ ನನ್ನನ್ನು ಅವರ ಕುಟುಂಬದ ಓರ್ವ ಸದಸ್ಯನಂತೆ ಕಂಡಿದ್ದಾರೆ. ನಾನು ಅಸೋಸಿಯೇಶನ್‌ಗೆ ಋಣಿಯಾಗಿದ್ದೇನೆ. ಕಾರ್ಯಕ್ರಮದ ಆಯೋಜಕ ಶ್ರೀಧರ ಶೆಟ್ಟಿ ಅವರಿಗೆ ಕೃತಜ್ಞನಾಗಿದ್ದೇನೆ.-ರಾಮ ಮೋಹನ್ ಬಳ್ಕುಂಜೆ, ಸಮ್ಮಾನಿತರು ಸರಳ, ಸಜ್ಜನ ವ್ಯಕ್ತಿತ್ವದ ಬಳ್ಕುಂಜೆಯವರು 82ರ ಹರೆಯದ ನವ ತರುಣ. ಅವರಿಗೆ ಅಷ್ಟು ವಯಸ್ಸಾದರೂ ಅವರ ಪಾದರಸದಂತಹ ಕಾರ್ಯಚಟುವಟಿಕೆ ಇತರರಿಗೆ ಮಾದರಿ. ಅವರ ಚಿಂತನ-ಚಿಲುಮೆ ಬರಹಗಳು ಸಮಾಜಕ್ಕೆ ದಾರಿದೀಪವಾಗಿದ್ದು, ಮುಂಬಯಿ ಸಾಹಿತ್ಯ ಕ್ಷೇತ್ರಕ್ಕೆ ಅವರ ಸೇವೆ ಅಪಾರವಾಗಿದೆ. ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಮುಖವಾಣಿಗೆ ಹೊಸ ಆಯಾಮವನ್ನು ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.
-ನಾರಾಯಣ ಶೆಟ್ಟಿ ನಂದಳಿಕೆ, ರಂಗಕರ್ಮಿ, ಸಾಹಿತಿ ಬಳ್ಕುಂಜೆಯವರು 82 ರ ಹರೆಯದವರೆಗೆ ಬೋಂಬೆ ಬಂಟ್ಸ್ ಅಸೋಸಿಯೇಶನ್‌ನಲ್ಲಿ ಸೇವೆಗೈದು ಡಬ್ಬಲ್ ನಿವೃತ್ತಿಯನ್ನು ಪಡೆಯುತ್ತಿರುವುದು ಅಭಿಮಾನದ ಸಂಗತಿ. ಅವರ ಸಂಪಾದಕೀಯದಲ್ಲಿ ಇರುತ್ತಿದ್ದ ಸಾಮಾಜಿಕ ಕರ್ತವ್ಯಪ್ರಜ್ಞೆ ನಮಗೊಂದು ಪಾಠವಾಗಿದೆ. ದೇವರು ಅವರಿಗೆ ಸುಖ, ಶಾಂತಿ, ಆಯುರಾರೋಗ್ಯವನ್ನಿತ್ತು ನೂರಾರು ವರ್ಷಗಳ ಕಾಲ ಬಾಳುವಂತೆ ಅನುಗ್ರಹಿಸಲಿ. ಭವಿಷ್ಯದಲ್ಲಿ ಅವರಿಗೆ ಯಾವುದೆ ಸಂಕಷ್ಟ ಬಂದರೂ ಅಸೋಸಿಯೇಶನ್ ಮುಖಾಂತರ ಅವರೊಂದಿಗೆ ನಾವು ಸದಾಯಿದ್ದೇವೆ.
-ಕಡಂದಲೆ ಜಯರಾಮ್ ಶೆಟ್ಟಿ
ಮಾಲಕರು, ರಿಜೆನ್ಸಿ ಹೊಟೇಲ್ ಸಮೂಹ