ನವಿಮುಂಬಯಿ: ನಗರದ ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲಿ ಒಂದಾದ ಬೋಂಬೆ ಬಂಟ್ಸ್ ಅಸೋಸಿಯೇಶನ್ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೆರವು ನೀಡುತ್ತಿದ್ದು, ಈ ಬಾರಿ ಜು. 22ರಂದು ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಸಯಾನ್‌ನ ನಿತ್ಯಾನಂದ ಸಭಾಗೃಹದಲ್ಲಿ ನಡೆಯಿತು.
ಅಸೋಸಿಯೇಶನ್‌ನ ಅಧ್ಯಕ್ಷ ನ್ಯಾಯವಾದಿ ಸುಭಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಿಎ ಸುರೇಂದ್ರ ಶೆಟ್ಟಿ ಅವರು ಕಾರ್ಯಕ್ರಮದ ವಿವರ ನೀಡಿ, ಜು. 22 ರಂದು ಬೆಳಗ್ಗೆ 10 ರಿಂದ ವೈವಿಧ್ಯಮಯ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದೆ. ನಗರದ ಬಂಟ ಸಮಾಜದ ದಾನಿಗಳು, ಉದ್ಯಮಿಗಳು ಪಾಲ್ಗೊಳ್ಳಲಿದ್ದು ಮಧ್ಯಾಹ್ನ ಎರಡರಿಂದ ಅಸೋಸಿಯೇಶನ್‌ನ ಸದಸ್ಯರುಗಳಿಂದ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನಿರ್ದೇಶನದಲ್ಲಿ ನಳದಮಯಂತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಅಧ್ಯಕ್ಷ ನ್ಯಾಯವಾದಿ ಸುಭಾಶ್ ಶೆಟ್ಟಿ ಅವರು ಮಾತನಾಡಿ, ಆರ್ಥಿಕ ನೆರವು ನೀಡುವ ಯೋಚನೆ ಮತ್ತು ಯೋಜನೆಯನ್ನು ಪ್ರಾರಂಭಿಸಿದ್ದೇ ಬೋಂಬೆ ಬಂಟ್ಸ್ ಅಸೋಸಿಯೇಶನ್ ಎನ್ನಲು ಹೆಮ್ಮೆಯಾಗುತ್ತಿದೆ. ನಿರಂತರವಾಗಿ ಅಸೋಸಿಯೇಶನ್ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಕಾರ ನೀಡುತ್ತಿದೆ. ಈ ವರ್ಷದ ಆರ್ಥಿಕ ನೆರವಿನ ಮೇಳಕ್ಕೆ ಬಂಟ ಸಮಾಜದ ದಾನಿಗಳು ಸ್ಪಂದಿಸುತ್ತಿರುವುದು ಅಭಿಮಾನದ ವಿಷಯವಾಗಿದೆ. ಅಸೋಸಿ ಯೇಶನ್‌ನ ಸದಸ್ಯರು, ಸಮಾಜ ಬಾಂಧವರು ಈ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು.
ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷೆ ಸರಳಾ ಬಿ. ಶೆಟ್ಟಿ ಅವರು ಸ್ವಾಗತಿಸಿದರು.
ಸಭೆಯಲ್ಲಿ ಅಸೋಸಿಯೇಶನ್‌ನ ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್. ಶೆಟ್ಟಿ, ಮಾಜಿ ಅಧ್ಯಕ್ಷ ಎನ್. ಸಿ. ಶೆಟ್ಟಿ, ನ್ಯಾಯವಾದಿ ಉಪ್ಪೂರು ಶೇಖರ ಶೆಟ್ಟಿ, ಕಟ್ಟಡ ಸಮಿತಿಯ ರಮೇಶ್ ಶೆಟ್ಟಿ, ಮಾಜಿ ಕಾರ್ಯದರ್ಶಿ ನ್ಯಾಯವಾದಿ ಡಿ. ಕೆ. ಶೆಟ್ಟಿ, ಸಂತೋಷ್ ಶೆಟ್ಟಿ, ದಾಮೋದರ ಶೆಟ್ಟಿ, ಮಹಿಳಾ ವಿಭಾಗದ ಶಾಂತಾ ಎನ್. ಶೆಟ್ಟಿ, ಹರಿಣಿ ಶೆಟ್ಟಿ, ಲತಾ ಆರ್. ಶೆಟ್ಟಿ, ಕೃಷ್ಣ ಕುಮಾರಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.