ಬೆಂಗಳೂರು: 500, 1000 ರೂಪಾಯಿ ನಿಷೇಧಿತ ಕೋಟ್ಯಂತರ ರೂಪಾಯಿ ಹಣವೆಲ್ಲಾ ಪೊಲೀಸರಿಗೆ ಸೇರಿದ್ದು, ಅದು ನನ್ನ ಹಣವಲ್ಲ. ಪೊಲೀಸರು ಒಳ್ಳೆಯವರಲ್ಲ, ಪೊಲೀಸರು ದೇಶಕ್ಕೆ ಒಳ್ಳೇದು ಮಾಡಲ್ಲ. ನನ್ನ ಎನ್ ಕೌಂಟರ್ ಮಾಡಲು 10 ಕೋಟಿ ರೂಪಾಯಿ ಫಿಕ್ಸ್ ಮಾಡಲಾಗಿತ್ತು ಎಂದು ಗಂಭೀರವಾಗಿ ಆರೋಪಿಸಿರುವ ರೌಡಿಶೀಟರ್ ಬಾಂಬ್ ನಾಗ ಅಜ್ಞಾತಸ್ಥಳದಿಂದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾನೆ.
ನಾನು ತಮಿಳನಾಗಿ ಹುಟ್ಟಿದ್ದೇ ತಪ್ಪಾಯ್ತು, ಅಂದು ನನ್ನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ನಾನು ಮನೆಯಲ್ಲಿ ಇರಲಿಲ್ಲವಾಗಿತ್ತು. ನನ್ನ ಮನೆ ಮೇಲೆ ದಾಳಿ ನಡೆಸಿ ಕೊಲ್ಲಲು ಪೊಲೀಸರು ಸ್ಕೆಚ್ ಹಾಕಿದ್ದರು ಎಂದು ಬಾಂಬ್ ನಾಗ ಶನಿವಾರ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಆರೋಪಿಸಿದ್ದಾನೆ.
ನಾನು ಏನೂ ತಪ್ಪು ಮಾಡಿಲ್ಲ. ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಬಾರದು ಎಂದು ಸಂಚು ರೂಪಿಸಿ ಈ ರೀತಿ ಮಾಡಿರುವುದಾಗಿ ಆರೋಪಿಸಿರುವ ನಾಗ, ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಕ್ರೈಂ ನಡೆಯುತ್ತಿರೋದೇ ಪೊಲೀಸ್ ಡಿಪಾರ್ಟ್ ಮೆಂಟ್ ನಲ್ಲಿ ಎಂದು ಬಾಂಬ್ ನಾಗ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹಲವು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದಾನೆ. ಪೊಲೀಸರು ಹಣಕ್ಕೋಸ್ಕರ ಏನು ಬೇಕಾದರು ಮಾಡುತ್ತಾರೆ. ನನ್ನ ಎನ್ ಕೌಂಟರ್ ಮಾಡೋಕೆ ನಿಂತಿದ್ದರು. ಆದರೆ ಆ ದಿನ ನಾನು ಮನೆಯಲ್ಲಿ ಇಲ್ಲದೆ ಇದ್ದು, ದೇವರ ದಯೆಯಿಂದ ಪಾರಾಗಿದ್ದೇನೆ ಎಂದು ತಿಳಿಸಿದ್ದಾನೆ.
ನನ್ನ ಮನೆಯಲ್ಲಿ ಸಿಕ್ಕಿರುವುದು 3 ಐಪಿಎಸ್ ಅಧಿಕಾರಿಗಳಿಗೆ ಸೇರಿರುವುದು. ಕಪ್ಪು ಹಣವನ್ನು ಬದಲಾಯಿಸಿ ಕೊಡುವಂತೆ ನನ್ನ ಬಳಿ ಸಿಎಂ ಸಿದ್ದರಾಮಯ್ಯ ಅವರ ಪಿಎ ಮಂಜುನಾಥ ಕೇಳಿಕೊಂಡಿದ್ದರು. ಆತ ನಮ್ಮ ಮನೆಗೆ ಬರುವಾಗ ಸಿಸಿಟಿವಿ ಸ್ವಿಚ್ ಆಫ್ ಮಾಡುವಂತೆ ಸೂಚಿಸುತ್ತಿದ್ದರು ಎಂದು ವಿಡಿಯೋದಲ್ಲಿ ಆರೋಪಿಸಿದ್ದಾನೆ. ದಂಧೆಯಲ್ಲಿ ಐವರು ಬ್ರೋಕರ್ ಗಳು ಭಾಗಿಯಾಗಿದ್ದಾರೆ ಎಂದು ದೂರಿದ್ದಾನೆ.
ಪಿಸಿ ಮೋಹನ್ ಹಾಗೂ ದಿನೇಶ್ ಗುಂಡೂರಾವ್ ನನ್ನ ಟಾರ್ಗೆಟ್ ಮಾಡಿರುವುದಾಗಿ ಬಾಂಬ್ ನಾಗ ನೇರವಾಗಿ ಉಲ್ಲೇಖಿಸಿದ್ದಾನೆ. ಹೆಣ್ಣೂರು ಪೊಲೀಸ್ ಠಾಣೆಯ ಎಸ್ ಐ ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿರುವುದು ವಿಡಿಯೋದಲ್ಲಿದೆ.
ನಾ ಎಲ್ಲಿಯೂ ಹೋಗಿಲ್ಲ:
ನಾನು ಎಲ್ಲಿಯೂ ತಲೆಮರೆಸಿಕೊಂಡು ಹೋಗಿಲ್ಲ. ಬೆಂಗಳೂರಿನಲ್ಲಿಯೇ ಇದ್ದೇನೆ. ಎಲ್ಲವನ್ನೂ ನೋಡುತ್ತಿದ್ದೇನೆ ಎಂದು ಬಾಂಬ್ ನಾಗ ವಿಡಿಯೋದಲ್ಲಿ ತಿಳಿಸಿದ್ದಾನೆ.
ಬಾಂಬ್ ನಾಗನ ಸುಳಿವಿಲ್ಲ: ಪೊಲೀಸ್ ಇಲಾಖೆ
ರೌಡಿ ಶೀಟರ್ ಬಾಂಬ್ ನಾಗನ ಸುಳಿವಿಲ್ಲ, ಆತನ ಬಂಧನಕ್ಕಾಗಿ ತೀವ್ರ ಶೋಧ ನಡೆಯುತ್ತಿದೆ, ಆತನನ್ನು ಬಂಧಿಸಿ ಜೈಲಿಗಟ್ಟಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಏತನ್ಮಧ್ಯೆ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿಯಾಗಿ ಬಾಂಬ್ ನಾಗನ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.