Advertisement

ಮಂಗ್ಳೂರು ಬಾಂಬ್‌; ರಾಜ್ಯದೆಲ್ಲೆಡೆ ಹೈ ಅಲರ್ಟ್‌

10:26 AM Jan 22, 2020 | Lakshmi GovindaRaj |

ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಸಜೀವ ಬಾಂಬ್‌ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ಎಲ್ಲೆಡೆ ಹೆಚ್ಚಿನ ಭದ್ರತೆ ಕೈಗೊಳ್ಳುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು (ಕಾನೂನು ಸುವ್ಯವಸ್ಥೆ) ಎಲ್ಲಾ ಜಿಲ್ಲಾ ವರಿಷ್ಠಾಧಿಕಾರಿಗಳು ಮತ್ತು ವಲಯ ಐಜಿಪಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿದ್ದು, ಸ್ಥಳೀಯವಾಗಿ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮೈಸೂರು, ತೋರಣಗಲ್ಲು ವಿಮಾನ ನಿಲ್ದಾಣಗಳಿವೆ. ಜತೆಗೆ, ಎರಡು ಖಾಸಗಿ ಮತ್ತು ಐದು ಮಿಲಿಟರಿ ವಿಮಾನ ನಿಲ್ದಾಣಗಳು ಹಾಗೂ ಆರು ವಿಮಾನ ನಿಲ್ದಾಣಗಳು ಕಾಮಗಾರಿ ಹಂತದಲ್ಲಿವೆ.

ಈ ಎಲ್ಲ ಮಾದರಿಯ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಳ ಮಾಡುವಂತೆ ಈಗಾಗಲೇ ಸೂಚಿಸಲಾಗಿದೆ. ಮುಖ್ಯವಾಗಿ ಕೆಂಪೇಗೌಡ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರತಿಯೊಂದು ಸ್ಥಳ ಮತ್ತು ಪ್ರಯಾಣಿಕರನ್ನು ತಪಾಸಣೆ ನಡೆಸಬೇಕು. ಜತೆಗೆ, ನಿಲ್ದಾಣದ ಆವರಣದಲ್ಲಿರುವ ಸಿಸಿಕ್ಯಾಮರಾಗಳು ಕಾರ್ಯ ನಿರ್ವಹಿಸುತ್ತಿವೆಯೇ? ಇಲ್ಲವೇ? ಎಂಬ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭದ್ರತಾ ಸಿಬ್ಬಂದಿ ನಿಯೋಜನೆ: ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಸಿಐಎಸ್‌ಎಫ್, ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ಭದ್ರತೆ ವಹಿಸಿಕೊಂಡಿದ್ದಾರೆ. ಜತೆಗೆ, ಸ್ಥಳೀಯ ಪೊಲೀಸರು ಕೂಡ ನಿತ್ಯ ಐದಾರು ಬಾರಿ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಬೇಕು.

ಅಗತ್ಯಬಿದ್ದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳ ಜತೆ ಚರ್ಚಿಸಿ ಹೆಚ್ಚಿನ ಪೊಲೀಸ್‌ ಭದ್ರತೆ ನಿಯೋಜಿಸಬೇಕು. ಹಾಗೆಯೇ ಶ್ವಾನದಳ, ಬಾಂಬ್‌ ನಿಷ್ಟ್ರೀಯ ದಳದ ಜತೆಗೂ ತಪಾಸಣೆ ನಡೆಸಬೇಕು. ಸ್ಥಳೀಯ ವಿಮಾನ ನಿಲ್ದಾಣಗಳಲ್ಲೂ ಭದ್ರತೆ ಬಗ್ಗೆ ನಿಗಾ ವಹಿಸಬೇಕೆಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಸಾರ್ವಜನಿಕ ಸ್ಥಳದಲ್ಲೂ ನಿಗಾ: ವಿಮಾನ ನಿಲ್ದಾಣಗಳು ಮಾತ್ರವಲ್ಲ, ರೈಲು ನಿಲ್ದಾಣ, ಬಸ್‌ ನಿಲ್ದಾಣ, ಮಾಲ್‌, ಪಾರಂಪರಿಕ ಕಟ್ಟಡ, ಪ್ರವಾಸಿ ತಾಣಗಳಲ್ಲೂ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ವಾನ ದಳದಿಂದ ತಪಾಸಣೆ: ರಾಜ್ಯ ಶ್ವಾನದಳದಲ್ಲಿ ಸ್ಫೋಟಕ ವಸ್ತು ಮತ್ತು ಮಾದಕ ವಸ್ತು ಪತ್ತೆ ಕುರಿತು ತರಬೇತಿ ಪಡೆದಿರುವ ಬೆಲ್ಜಿಯಂನ “ನಿಧಿ ಮತ್ತು ರಾಣಾ’ ಹೆಸರಿನ ಶ್ವಾನಗಳಿಂದ ಸೋಮವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಯೊಂದು ಸ್ಥಳದ ತಪಾಸಣೆ ನಡೆಸಲಾಯಿತು.

ವಿಮಾನ ನಿಲ್ದಾಣದ ಕಾರ್ಗೋ ವಿಭಾಗದ ಸರಕು ಮತ್ತು ಸಾಗಾಟ ಕೇಂದ್ರದಲ್ಲಿರುವ ಪ್ರತಿಯೊಂದು ಬಾಕ್ಸ್‌ಗಳನ್ನು ಪರಿಶೀಲಿಸಲಾಯಿತು. ಈ ತಪಾಸಣೆ ಕಾರ್ಯ ನಿರಂತರವಾಗಿ ನಡೆಯಲಿದೆ. ವಿದೇಶಿ ಮಾತ್ರವಲ್ಲದೆ, ಸ್ವದೇಶಿ ನೋಂದಣಿ ಬಾಕ್ಸ್‌ ಗಳನ್ನು ಕೂಡ ತಪಾಸಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.

ಮಂಗಳೂರು ಬಾಂಬ್‌ ಟೈಮ್‌ಲೈನ್‌
8.50: ಆಟೋ ರಿಕ್ಷಾದಲ್ಲಿ ಬಂದ ಅಪರಿಚಿತ ವ್ಯಕ್ತಿ ತನ್ನ ಕೈಯಲ್ಲಿದ್ದ ಬ್ಯಾಗನ್ನು ವಿಮಾನ ನಿಲ್ದಾಣದ ಟಿಕೆಟ್‌ ಕೌಂಟರ್‌ನ ಹೊರ ಭಾಗದಲ್ಲಿ ಇರುವ ಕಬ್ಬಿಣದ ಚೇರ್‌ ಮೇಲೆ ಇರಿಸಿ ಹೋಗಿದ್ದ.

9.00: ಹತ್ತು ನಿಮಿಷಗಳಾದರೂ ಬ್ಯಾಗ್‌ನ ವಾರಸುದಾರ ಬಾರದೆ ಇದ್ದಾಗ ಸಂಶಯದಿಂದ ಅಲ್ಲಿದ್ದ ಸಿಐಎಸ್‌ಎಫ್‌ ಸಿಬ್ಬಂದಿಯಿಂದ ಬ್ಯಾಗ್‌ ಪರಿಶೀಲನೆ. ಬ್ಯಾಗ್‌ನಲ್ಲಿ ಶಂಕಿತ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಶ್ವಾನದಳಕ್ಕೆ ಮಾಹಿತಿ ರವಾನೆ.

9.05: ಸ್ಥಳಕ್ಕೆ ಶ್ವಾನದಳ ಆಗಮನ ಮತ್ತು ಪರಿಶೀಲನೆ; ಬ್ಯಾಗ್‌ನಲ್ಲಿ ಬಾಂಬ್‌ ಇರುವುದಾಗಿ ಗುರುತಿಸಿದ ಶ್ವಾನ.

9.10: ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಾಂಬ್‌ ನಿರೋಧಕ ವಾಹನ ತರಿಸಲಾಯಿತು.

9.15: ಶಂಕಿತ ಬ್ಯಾಗನ್ನು ಬಾಂಬ್‌ ನಿರೋಧಕ ವಾಹನದಲ್ಲಿ ಇರಿಸಿ ಸುಮಾರು 200 ಮೀ.ದೂರ ಇರುವ ವಾಹನ ಪಾರ್ಕಿಂಗ್‌ ಜಾಗದ ಹಿಂಬದಿಯ ಖಾಲಿ ಜಾಗಕ್ಕೆ ರವಾನೆ, ನಿಲುಗಡೆ.

12.00: ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳದ ಅಧಿಕಾರಿಗಳ ಆಗಮನ.

1.30: ಪೊಲೀಸ್‌, ಸಿಐಎಸ್‌ಎಫ್‌ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳ ಸಭೆ, ಬಾಂಬ್‌ನ್ನು ವಿಮಾನದ ಹೊರವಲಯಕ್ಕೆ ಕೊಂಡೊಯ್ದು ನಿಷ್ಕ್ರಿಯಗೊಳಿಸಲು ನಿರ್ಧಾರ.

1.48: ಬಾಂಬ್‌ ಹೊಂದಿದ ಬ್ಯಾಗು ಕಂಟೈನರ್‌ ಸಹಿತ 2 ಕಿ.ಮೀ. ದೂರದ ಕೆಂಜಾರು ಮೈದಾನಕ್ಕೆ ಸ್ಥಳಾಂತರ.

2.30: ಬಾಂಬ್‌ ಇದ್ದ ವಾಹನ ಕೆಂಜಾರಿನ ಮುಖ್ಯರಸ್ತೆಗೆ ಆಗಮನ.

2.50: ಕಾವೂರಿನಿಂದ ಕ್ರೇನ್‌ ಆಗಮನ.

3.00: ಕ್ರೇನ್‌ ಸಹಾಯದಿಂದ ಬಾಂಬ್‌ ಇರಿಸಲಾದ ಬಾಂಬ್‌ ನಿರೋಧಕ ವಾಹನ ಮುಖ್ಯರಸ್ತೆಯಿಂದ ಅರ್ಧ ಕಿ.ಮೀ. ದೂರದ ನಿರ್ಜನ ಮೈದಾನಕ್ಕೆ ರವಾನೆ.

3.25: ನಿರ್ಜನ ಮೈದಾನ ತಲುಪಿದ ಬಾಂಬ್‌ ಇದ್ದ ಕಂಟೈನರ್‌.

3.45: ಬಾಂಬ್‌ ನಿರೋಧಕ ಉಡುಪು ಧರಿಸಿದ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಕಂಟೈನರ್‌ನಲ್ಲಿದ್ದ ಬ್ಯಾಗನ್ನು ಎತ್ತಿ 100 ಮೀ. ದೂರದ ನಿಗದಿತ ಸ್ಥಳಕ್ಕೆ ರವಾನೆ.

3.48: ಬಾಂಬ್‌ ಇರುವ ಬ್ಯಾಗನ್ನು ಮರಳಿನ ಚೀಲಗಳ ಆವರಣದೊಳಗೆ ಇರಿಸಿದ ಸಿಬ್ಬಂದಿ.

4.00: ಬಾಂಬ್‌ ನಿಷ್ಕ್ರಿಯಗೊಳಿಸಲು ವ್ಯವಸ್ಥೆ ಮಾಡಿದ್ದ ಜಾಗದಿಂದ 200 ಮೀ.ದೂರದ ತನಕ ಕೇಬಲ್‌ ಹಾಕಿ ಸ್ಫೋಟಿಸಲು ಸಿದ್ಧತೆ.

5.00: ಕೇಬಲ್‌ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಹೊಸ ಕೇಬಲ್‌ ತರಿಸಿ ಜೋಡಣೆ.

5.47: ಬಾಂಬ್‌ ನಿಷ್ಕ್ರಿಯಗೊಳಿಸಿ ಸ್ಫೋಟಿಸಿದ ಬಾಂಬ್‌ ಪತ್ತೆ ಮತ್ತು ಬಾಂಬ್‌ ನಿಷ್ಕ್ರಿಯ ದಳ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಹೈಅಲರ್ಟ್‌ ಘೋಷಿಸಿದ್ದು, ಭದ್ರತೆ ಹೆಚ್ಚಳಕ್ಕೆ ಸೂಚಿಸಲಾಗಿದೆ.
-ಅಮರ್‌ ಕುಮಾರ್‌ ಪಾಂಡೆ, ಎಡಿಜಿಪಿ, ರಾಜ್ಯ ಕಾನೂನು ಸುವ್ಯವಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next