Advertisement

ಅಂಬೋಲಿ ಅರಣ್ಯದಲ್ಲಿ ಬಾಂಬ್‌ ಸ್ಫೋಟ ಟ್ರಯಲ್‌

10:21 PM Jul 29, 2023 | Team Udayavani |

ಬೆಳಗಾವಿ: ಪುಣೆ ಪೊಲೀಸರು ಬಂಧಿಸಿದ ಐಸಿಸ್‌ ಉಗ್ರ ಸಂಘಟನೆಯ ಶಂಕಿತ ಇಬ್ಬರು ಉಗ್ರರು ಬೆಳಗಾವಿ ಸಮೀಪದ ಅಂಬೋಲಿ ಅರಣ್ಯ ಪ್ರದೇಶದಲ್ಲಿ ಬಾಂಬ್‌ ಸ್ಫೋಟದ ಟ್ರಯಲ್‌ ನಡೆಸಿ ನಿಪ್ಪಾಣಿ- ಸಂಕೇಶ್ವರದಲ್ಲಿ ತಂಗಿದ್ದ ಮಾಹಿತಿ ಬೆಳಕಿಗೆ ಬಂದಿದೆ.

Advertisement

ಮಹ್ಮದ್‌ ಇಮ್ರಾನ್‌ ಮೊಹ್ಮದ್‌ ಯೂಸುಫ್ ಖಾನ್‌ ಉರ್ಫ್‌ ಅಮೀರ್‌ ಅಬ್ದುಲ್‌ ಹಮೀದ್‌ ಖಾನ್‌ ಹಾಗೂ ಮೊಹ್ಮದ್‌ ಯುನೂಸ್‌ ಮೊಹ್ಮದ್‌ ಯಾಕೂಬ್‌ ಸಾಕಿ ಎಂಬವರನ್ನು ಗಸ್ತು ನಿರತ ಪುಣೆ-ಕೊಥರುಡ್‌ ಪೊಲೀಸರು ದ್ವಿಚಕ್ರ ವಾಹನ ಕಳ್ಳತನದ ಸಂಶಯದಲ್ಲಿ ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಇವರಿಬ್ಬರೂ ಐಸಿಸ್‌ ಸಂಘಟನೆ ಸಂಪರ್ಕದಲ್ಲಿದ್ದುದು ಹಾಗೂ ಮಹಾರಾಷ್ಟ್ರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ.

ಕಳೆದ ಜು.25ರಂದು ಎಟಿಎಸ್‌ ತಂಡ ಇಬ್ಬರೂ ಶಂಕಿತರನ್ನು ಕರೆದುಕೊಂಡು ಸಿಂಧದುರ್ಗ ಜಿಲ್ಲೆಯ ಅಂಬೋಲಿ ಅರಣ್ಯ ಪ್ರದೇಶದಲ್ಲಿ ಪರಿಶೀಲಿಸಿದೆ. ಅಲ್ಲಿ ಕೆಲವು ಮಹತ್ವದ ವಸ್ತುಗಳು ಪತ್ತೆಯಾಗಿವೆ. ಅಲ್ಲದೆ, ಇವರಿಬ್ಬರು ಅಂಬೋಲಿಯ ಅರಣ್ಯ ಪ್ರದೇಶದಲ್ಲಿ ನಾಲ್ಕು ದಿನಗಳ ಕಾಲ ವಾಸ್ತವ್ಯ ಹೂಡಿದ್ದರು ಎಂದು ತಿಳಿದುಬಂದಿದೆ.

ಬೆಳಗಾವಿಯ ಗಡಿಭಾಗದ ನಿಪ್ಪಾಣಿ ಹಾಗೂ ಸಂಕೇಶ್ವರದಲ್ಲಿ ತಂಗಿದ್ದು, ಇಲ್ಲಿಂದಲೇ ಅಂಬೋಲಿ ಅರಣ್ಯ ಪ್ರದೇಶಕ್ಕೆ ಹೋಗಿ ಬಾಂಬ್‌ ಸ್ಫೋಟದ ಟ್ರಯಲ್‌ ನಡೆಸಿದ್ದರು. ಜತೆಗೆ ಕೊಲ್ಲಾಪುರ ಮತ್ತು ಸತಾರಾ ಪ್ರದೇಶದಲ್ಲಿಯೂ ಬಾಂಬ್‌ ಸ್ಫೋಟದ ಟ್ರಯಲ್‌ ನಡೆಸಿದ್ದಾಗಿ ಬಂಧಿತರು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.

ಮೊಹ್ಮದ್‌ ಇಮ್ರಾನ್‌ ಮೊಹ್ಮದ್‌ ಯುಸೂಫ್ ಖಾನ್‌ ಅಮೀರ್‌ ಅಬ್ದುಲ್‌ ಹಮೀದ್‌ ಖಾನ್‌, ಮೊಹ್ಮದ್‌ ಯೂನುಸ್‌ ಮೊಹ್ಮದ್‌ ಯಾಕೂಬ್‌ ಸಾಕಿ ಹಾಗೂ ಮೊಹ್ಮದ್‌ ಆಲಮ್‌ ಎಂಬ ಮೂವರು ಶಂಕಿತ ಉಗ್ರರು ಪುಣೆಯಿಂದ ಕೊಲ್ಲಾಪುರ, ನಿಪ್ಪಾಣಿ, ಅಜಾರಾ ಮಾರ್ಗವಾಗಿ ಅಂಬೋಲಿ ತಲುಪಿದ್ದರು. ಈ ಪ್ರವಾಸ ವೇಳೆ ನಿಪ್ಪಾಣಿ ಮತ್ತು ಸಂಕೇಶ್ವರದಲ್ಲಿ ವಾಸ್ತವ್ಯ ಮಾಡಿದ್ದರು. ಈ ಶಂಕಿತರ ಸಂಪರ್ಕದಲ್ಲಿರುವ ಹಾಗೂ ಆಶ್ರಯ ನೀಡಿದ ಜನರ ಮಾಹಿತಿ ಪಡೆದು ವಿಚಾರಣೆ ನಡೆಸಿರುವ ಪೊಲೀಸರು, ಶಂಕಿತರು ಪುಣೆಯಿಂದ ಅಂಬೋಲಿವರೆಗೆ ಪ್ರಯಾಣಿಸಿದ ಮಾರ್ಗದ ಕೆಲವು ಸಿಸಿ ಕೆಮರಾಗಳ ತುಣುಕುಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

ಪುಣೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿರುವ ಎಟಿಎಸ್‌ ತಂಡ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿಲ್ಲ. ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಭೇಟಿ ನೀಡಿದ್ದಾದರೆ ನಮ್ಮ ಗಮನಕ್ಕೆ ಬರುತ್ತಿತ್ತು. ಇಂಥ ಯಾವುದೇ ಬೆಳವಣಿಗೆ ನಡೆದಿಲ್ಲ.
-ಸಂಜೀವ ಪಾಟೀಲ್‌, ಎಸ್‌ಪಿ-ಬೆಳಗಾವಿ

ಟ್ರಯಲ್‌ ಬ್ಲಾಸ್ಟ್‌ ಪ್ರಕರಣ: ರೆಡ್‌ ಪಾಸ್ಪರಸ್‌ ಪೌಡರ್‌ ವಶ
ಶಿವಮೊಗ್ಗ: ತುಂಗಾ ತೀರದಲ್ಲಿ ನಡೆದಿದ್ದ ಟ್ರಯಲ್‌ ಬ್ಲಾಸ್ಟ್‌ ಪ್ರಕರಣ ಸಂಬಂಧ ಮತ್ತೂಂದು ವಸ್ತುವನ್ನು ಎನ್‌ಐಎ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎನ್‌ಐಎ ಅಧಿಕಾರಿಗಳು ಎರಡು ದಿನಗಳ ಹಿಂದೆ ಶಂಕಿತ ಉಗ್ರ ಸಯ್ಯದ್‌ ಯಾಸೀನ್‌ನನ್ನು ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಶಿವಮೊಗ್ಗ, ತೀರ್ಥಹಳ್ಳಿ, ಹೊನ್ನಾಳಿ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಮಹಜರು ನಡೆಸಿದ್ದು, ಈ ವೇಳೆ ಆತನ ಸಂಬಂಧಿಯೊಬ್ಬರ ಮನೆಯಲ್ಲಿ ಗೋಡೆ ಮೇಲೆ ಇಟ್ಟಿದ್ದ ರೆಡ್‌ ಪಾಸ್ಪರಸ್‌ ಪೌಡರನ್ನು ವಶಪಡಿಸಿಕೊಂಡಿದ್ದಾರೆ.

ತುಂಗಾ ನದಿ ಬಳಿ ನಡೆಸುತ್ತಿದ್ದ ಟ್ರಯಲ್‌ ಬ್ಲಾಸ್ಟ್‌ನಲ್ಲಿ ಗನ್‌ಪೌಡರ್‌ ಬದಲಿಗೆ ರೆಡ್‌ ಪಾಸ್ಪರಸ್‌ ಬಳಸಿದ್ದರು ಎನ್ನಲಾಗಿದೆ. ಬಾಕಿ ಉಳಿದ ಪೌಡರನ್ನು ಮನೆಯಲ್ಲಿ ಅಡಗಿಸಿಟ್ಟಿದ್ದರು. ತನಿಖೆ ವೇಳೆ ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಯಾಸೀನ್‌ನನ್ನು ಕರೆತಂದು ಮಹಜರು ನಡೆಸಿದರು. ಪತ್ತೆಯಾದ ವಸ್ತುವನ್ನು ಎನ್‌ಐಎ ಪೊಲೀಸರು ಬೆಂಗಳೂರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಯಾರು ಯಾಸೀನ್‌?
ಶಿವಮೊಗ್ಗದ ತುಂಗಾ ತೀರದಲ್ಲಿ ನಡೆಸಿದ ಟ್ರಯಲ್‌ ಬ್ಲಾಸ್ಟ್‌ನಲ್ಲಿ ಮೂವರು ಪ್ರಮುಖ ಆರೋಪಿಗಳಿದ್ದರು. ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಆರೋಪಿ ಶಾರೀಖ್‌ ಮೊದಲ ಆರೋಪಿಯಾಗಿದ್ದು, ಸಯ್ಯದ್‌ ಯಾಸೀನ್‌ ಹಾಗೂ ಮಾಜ್‌ ಎರಡು ಮತ್ತು ಮೂರನೇ ಆರೋಪಿಯಾಗಿದ್ದಾರೆ.

ಶಿವಮೊಗ್ಗದ ಅಮೀರ್‌ ಅಹಮ್ಮದ್‌ ಸರ್ಕಲ್‌ ಬಳಿ ನಡೆದ ಸಾವರ್ಕರ್‌ ಫ್ಲೆಕ್ಸ್‌ ವಿವಾದದ ಬಳಿಕ ಪ್ರೇಮ್‌ ಸಿಂಗ್‌ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿತ್ತು. ಈ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡ ಆರೋಪಿಗಳ ಮೂಲಕ ಉಗ್ರ ಚಟುವಟಿಕೆ ಬಯಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ರಾಷ್ಟ್ರಧ್ವಜ ಸುಟ್ಟ ವಿಚಾರ, ಟ್ರಯಲ್‌ ಬ್ಲಾಸ್ಟ್‌ ವಿಚಾರ ಪತ್ತೆ ಹಚ್ಚಿದ್ದರು. ಆ ಮೂಲಕ ದೊಡ್ಡ ವಿಧ್ವಂಸಕ ಕೃತ್ಯದ ಸಂಚು ಬಯಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next