Advertisement

ಪ್ರೇಮ ಪಲ್ಲಕಿಯಿಂದ ಮದುವೆ ಮಂಟಪಕ್ಕೆ

07:04 PM Feb 13, 2020 | Sriram |

ಈ ವರ್ಷದ ಆರಂಭದಿಂದಲೂ ಅನೇಕ ಬಾಲಿವುಡ್‌ ಸಿನಿಪ್ರಿಯರ ಚಿತ್ತ ನೆಟ್ಟಿರುವುದು ನಟಿ ಆಲಿಯಾ ಭಟ್‌ ಮೇಲೆ. ಇದಕ್ಕೆ ಕಾರಣ ಆಲಿಯಾ ಭಟ್‌ ಇದೇ ವರ್ಷ ನಟ ರಣ್‌ಬೀರ್‌ ಕಪೂರ್‌ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ. ಹೌದು, 2017ರಿಂದ ರಣ್‌ಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಯಾವುದೇ ಪಾರ್ಟಿ, ಫ‌ಂಕ್ಷನ್‌ಗಳಿಗೆ ಹೋದರೂ- ಒಟ್ಟಿಗೆ ಹಾಜರ್‌ ಆಗುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಾಲಿವುಡ್‌ನ‌ಲ್ಲಿ ನಟಿ ಆಲಿಯಾ ಭಟ್‌ ಮತ್ತು ರಣ್‌ಬೀರ್‌ ಕಪೂರ್‌ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಆಗಾಗ್ಗೆ ಹರಿದಾಡುತ್ತಿದ್ದು, ಈ ವರ್ಷ ಈ ಜೋಡಿ ಸಪ್ತಪದಿ ತುಳಿಯೋದು ಗ್ಯಾರೆಂಟಿ ಎನ್ನಲಾಗುತ್ತಿದೆ.

Advertisement

ರಣ್‌ಬೀರ್‌ ಕಪೂರ್‌ ತಂದೆ ರಿಷಿ ಕಪೂರ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದು , ಕಳೆದ ವರ್ಷವಷ್ಟೆ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಸ್‌ ಆಗಿದ್ದರು. ಆದರೆ, ಸೋಂಕಿನಿಂದ ರಿಷಿ ಕಪೂರ್‌ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಅನಾರೋಗ್ಯವಿರುವುದರಿಂದ, ಆದಷ್ಟು ಬೇಗ ರಿಷಿ ಕಪೂರ್‌ ಮಗನ ಮದುವೆಯನ್ನು ಮಾಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನ‌ಲ್ಲಿ ಕೇಳಿಬಂದಿದೆ.

ಬಾಲಿವುಡ್‌ ಮೂಲಗಳ ಪ್ರಕಾರ, ಸದ್ಯ ಬಾಲಿವುಡ್‌ನ‌ಲ್ಲಿ ಪ್ರೇಮ ಪಕ್ಷಿಗಳು ಅಂತಾನೇ ಕರೆಸಿಕೊಳ್ಳುತ್ತಿರುವ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಇದೇ ವರ್ಷ ವೈವಾಹಿಕ ಬದುಕಿಗೆ ಅಡಿಯಿಡಲು ನಿರ್ಧರಿಸಿದ್ದಾರೆ. ಈಗಾಗಲೇ ಎರಡೂ ಕುಟುಂಬದವರು ಕೂತು ಮದುವೆ ದಿನಾಂಕವನ್ನು ನಿಗದಿ ಮಾಡಿದ್ದಾರೆ ಎನ್ನಲಾಗಿದೆ. ಇದೇ ವರ್ಷದ ಕೊನೆಗೆ ಅಂದರೆ, ಡಿಸೆಂಬರ್‌ 18ರಂದು ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಮದುವೆ ಮುಂಬೈನಲ್ಲಿ ನಡೆಯಲಿದೆ. ವಿವಾಹ ಶಾಸ್ತ್ರಗಳು ಮನೆಯಲ್ಲಿ ನೆರವೇರಲಿದ್ದು, ಆರತಕ್ಷತೆ ಸಮಾರಂಭ ಐಷಾರಾಮಿ ಹೊಟೇಲ್‌ನಲ್ಲಿ ಜರುಗಲಿದೆ ಎಂಬ ಸುದ್ದಿ ಬಾಲಿವುಡ್‌ ತುಂಬೆಲ್ಲ ಗಿರಕಿ ಹೊಡೆಯುತ್ತಿದೆ.

ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಅಭಿನಯದ ಬ್ರಹ್ಮಾಸ್ತ್ರ ಚಿತ್ರ ಈ ವರ್ಷ ಡಿಸೆಂಬರ್‌ 4ರಂದು ಬಿಡುಗಡೆ ಆಗಲಿದೆ. ಈ ಚಿತ್ರ ರಿಲೀಸ್‌ ಆದ ನಂತರ ಅಂದ್ರೆ, ಡಿಸೆಂಬರ್‌ 18 ರಂದು ಇಬ್ಬರೂ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಸದ್ಯ ಬಾಲಿವುಡ್‌ನ‌ಲ್ಲಿ ಹರಿದಾಡುತ್ತಿರುವ ಸುದ್ದಿ ನಿಜವೇ ಆಗಿದ್ದರೆ, ಇದೇ ವರ್ಷಾಂತ್ಯಕ್ಕೆ ಆಲಿಯಾ ಭಟ್‌ ಮತ್ತು ರಣ್‌ಬೀರ್‌ ಕಪೂರ್‌ ವಿವಾಹ ಮಹೋತ್ಸವ ನಡೆಯಲಿದೆ. ಆದರೆ, ಮದುವೆಯ ಬಗ್ಗೆ ಇಷ್ಟೆಲ್ಲ ಸುದ್ದಿಗಳು ಬಾಲಿವುಡ್‌ನ‌ಲ್ಲಿ ಸದ್ದು ಮಾಡುತ್ತಿದ್ದರೂ, ಈ ಬಗ್ಗೆ ಸ್ವತಃ ಆಲಿಯಾ ಭಟ್‌ ಆಗಲಿ ರಣಬೀರ್‌ ಕಪೂರ್‌ ಆಗಲಿ ಅವರ ಕುಟುಂಬದವರಾಗಲಿ ಇನ್ನೂ ಏನನ್ನೂ ಖಚಿತಪಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.