Advertisement

ಬೊಲೇರೊ- ಸ್ಕೂಟಿ ಢಿಕ್ಕಿ: ಉಪ ಪ್ರಾಂಶುಪಾಲ ಸಾವು

02:32 AM Apr 22, 2019 | sudhir |

ಕುಂದಾಪುರ: ತ್ರಾಸಿಯ ರಾ. ಹೆ. 66ರಲ್ಲಿ ಬೊಲೇರೊ ಜೀಪು ಹಾಗೂ ದ್ವಿಚಕ್ರ ವಾಹನ ಢಿಕ್ಕಿಯಾದ ಪರಿಣಾಮ ಜೀಪಿನಲ್ಲಿದ್ದ ಮೂಳೂರು ಸುನ್ನೀ ಸೆಂಟರ್‌ ದಅವಾ ವಿಭಾಗದ ಉಪ ಪ್ರಾಂಶುಪಾಲ ಸುಹೈಲ್‌ ಸಅದಿ (28) ಮೃತಪಟ್ಟು, ಐವರು ಗಾಯಗೊಂಡ ಘಟನೆ ರವಿ ವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಕೇರಳ ಕಣ್ಣೂರಿನ ಪಯ್ಯನ್ನೂರಿನ ಅರಿಪ್ಪಾಂಬ್ರ ಮುಕ್ಕಿಲ್‌ ನಿವಾಸಿಯಾದ ಸುಹೈಲ್‌ ಸಅದಿ ಅವರು ಮೂಳೂರಿನ ಅಲ್‌ ಇಹ್ಸಾನ್‌ ಎಜುಕೇಶನ್‌ ಸೆಂಟರ್‌ನ ದಅವಾ ವಿಭಾಗದ ಉಪಪ್ರಾಂಶುಪಾಲರಾಗಿದ್ದರು.

ಗಂಭೀರ ಗಾಯಗೊಂಡ ಜೀಪಿನಲ್ಲಿದ್ದ ದಅವಾ ವಿಭಾಗದ ಪ್ರಾಂಶುಪಾಲ ಸ್ವಾಬಿರ್‌ ಸಅದಿ (28) ಹಾಗೂ ದ್ವಿಚಕ್ರ ವಾಹನ ಸವಾರ ಭರತ್‌ ಹಾಗೂ ಸಣ್ಣ ಪುಟ್ಟ ಗಾಯಗೊಂಡ ಜೀಪಿನಲ್ಲಿದ್ದ ಇಂಗ್ಲಿಷ್‌ ಉಪನ್ಯಾಸಕ ಮಂಜನಾಡಿಯ ಇಬ್ರಾಹಿಂ ಬಾತಿಶಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿ ತುಫೈಲ್‌ ಹಾಗೂ ದ್ವಿಚಕ್ರ ವಾಹನ ಹಿಂಬದಿ ಸವಾರ ಜಡ್ಕಲ್‌ನ ಜೋಸೆಫ್ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೀಪಿನಲ್ಲಿದ್ದ ವಿದ್ಯಾರ್ಥಿ ಹಜ್ಮಲ್‌ ಹಾಗೂ ಚಾಲಕ ಕಾಪು ಮಜೂರಿನ ಮಹಮ್ಮದ್‌ ರಫೀಕ್‌ ಪಾರಾಗಿದ್ದಾರೆ.

ಬೈಂದೂರು ಕಡೆಯಿಂದ ಕುಂದಾಪುರ ಕಡೆ ಬರುತ್ತಿದ್ದ ಬೊಲೇರೊ ಜೀಪು ಎದುರಿನಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಪರಿಣಾಮ ನಿಯಂತ್ರಣ ತಪ್ಪಿದ ಜೀಪು ರಸ್ತೆ ಮಧ್ಯೆ ಪಲ್ಟಿಯಾಯಿತು. ಇದರಿಂದ ಜೀಪಿನ ಮಧ್ಯ ಸೀಟಿನಲ್ಲಿ ಕುಳಿತಿದ್ದ ಸುಹೈಲ್‌ ಸಅದಿ ಗಂಭೀರವಾಗಿ ಗಾಯಗೊಂಡು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪಿದರು.
ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮೂಳೂರಿನಲ್ಲಿ ಅಂತಿಮ ನಮನ
ಕಾಪು: ತ್ರಾಸಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ ಅಧೀನದ ಮೂಳೂರು ಅಲ್‌ ಇಹ್ಸಾನ್‌ ಎಜುಕೇಶನ್‌ ಸೆಂಟರ್‌ನ ದಅವ ವಿಭಾಗದ ಉಪಪ್ರಾಂಶುಪಾಲ ಸುಹೈಲ್‌ ಸಅದಿ ಅವರಿಗೆ ಮೂಳೂರು ಸುನ್ನಿ ಸೆಂಟರ್‌ನಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.

ಮೂಳೂರು ಸುನ್ನಿ ಸೆಂಟರ್‌ನಲ್ಲಿ ಮೃತದೇಹದ ಸಾರ್ವಜನಿಕ ದರ್ಶನದ ಬಳಿಕ ಸಂಸ್ಥೆಯ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಮೃತದೇಹವನ್ನು ಹುಟ್ಟೂರು ಕೇರಳಕ್ಕೆ ಕಳುಹಿಸಿಕೊಡಲಾಯಿತು.

ಅಂತಿಮ ದರ್ಶನ ಮುಗಿಸಿ ಬರುವಾಗ ದುರಂತ
ಇಹ್ಸಾನ್‌ ಎಜು ಪ್ಲಾನೆಟ್‌ನ ವಿದ್ಯಾರ್ಥಿ, ದಾವಣಗೆರೆ ಮೂಲದ ಮಹಮ್ಮದ್‌ ನಿಯಾದ್‌ನ ತಾಯಿ ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಿಯಾದ್‌ನನ್ನು ಅಲ್ಲಿಗೆ ಕರೆದೊಯ್ದು, ಮೃತದೇಹದ ಅಂತಿಮ ದರ್ಶನ ಪಡೆದು ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಎರಡು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದ ಅವರಿಗೆ 1 ವರ್ಷದ ಗಂಡು ಮಗುವಿದೆ.

ಪರಿಶ್ರಮಿ: ಮೂಲತಃ ಕೇರಳ – ಕಣ್ಣೂರಿನ ತಳಿಪ್ಪರಂಬದ ನಿವಾಸಿ ಯಾಗಿದ್ದ ಸುಹೈಲ್‌ ಮೂರೂವರೆ ವರ್ಷಗಳಿಂದ ಮೂಳೂರು ಅಲ್‌ ಇಹ್ಸಾನ್‌ ದಅವ ಮತ್ತು ಎಜು ಪ್ಲಾನೆಟ್‌ನ ಪಿಯುಸಿ ವಿಭಾಗದ ಲೆಕ್ಕ ಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಷಯ ಬೋಧಿ ಸುತ್ತಿದ್ದರು. ಅವರ ವಿಶೇಷ ಮುತುವರ್ಜಿಯಿಂದಾಗಿ ಸಂಸ್ಥೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next