ಕನಕಪುರ: ಇಲ್ಲಿಗೆ ಸಮೀಪದ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಸ್ಟೌಕ್ರಾಪ್ಟ್ ಕಾರ್ಖಾನೆಯಲ್ಲಿ ಮಂಗಳವಾರ ಬಾಯ್ಲರ್ ಸ್ಫೋಟಗೊಂಡು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 8 ರಿಂದ 9 ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳು ಗಳನ್ನು ಮೊದಲು ಹಾರೋಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ ಎಂದು ಆಸ್ಪತ್ರೆಯ
ಮೂಲಗಳು ತಿಳಿಸಿವೆ.
ಗಾಯಗೊಂಡವರನ್ನು ಹರಿಹರದ ಪ್ರಭು (37), ರಾಯಚೂರು ಮೂಲದ ಸಿದ್ದಲಿಂಗಯ್ಯ (39), ಮೇಡಮಾರನಹಳ್ಳಿ ನಿವಾಸಿ, ಲತಾ (31), ವಿನೋದ್, ತಮಿಳುನಾಡು ಮೂಲದ ಸುರೇಶ್ (21), ಹಾರೋಹಳ್ಳಿ ಹೋಬಳಿ ಬಡೇಸಾಬರದೊಡ್ಡಿಯ ಶಿವು (22), ಚಿತ್ರದುರ್ಗ ಮೂಲದ ಸಿದ್ದಲಿಂಗಯ್ಯ, ರಾಮಕೃಷ್ಣ ಎಂದು ಗುರುತಿಸಲಾಗಿದೆ. ಉಳಿದವರ ಪತ್ತೆ ಇನ್ನಷ್ಟೇ ಆಗಬೇಕಿದೆ.
ಸ್ಫೋಟದ ತೀವ್ರತೆಗೆ ಕಾರ್ಮಿಕರ ಕೈ, ಕಾಲು ಮತ್ತು ಕೆಲವರ ಮುಖ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಕಾರ್ಖಾನೆಯಲ್ಲಿ ಫಿಜನ್ ಬ್ರ್ಯಾಂಡ್‌ನ ಕುಕ್ಕರ್, ಮಿಕ್ಸಿ ಸೇರಿದಂತೆ ಗೃಹ ಬಳಕೆಯ ವಸ್ತುಗಳನ್ನು ಉತ್ಪಾದನೆ ಮಾಡಲಾಗುತ್ತಿದ್ದು, ಸುಮಾರು 2,500 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಮಾಲಿಕರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.