Advertisement

ಕರಾವಳಿ ಜಿಲ್ಲೆಗಳಿಗೆ ಕುಚಲಕ್ಕಿ ಪೂರೈಕೆಗೆ ಬೊಮ್ಮಾಯಿ ಸಮ್ಮತಿ

10:10 PM Sep 15, 2022 | Team Udayavani |

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜನರ ಪ್ರಮುಖ ಆಹಾರವಾಗಿರುವ ಕುಚಲಕ್ಕಿಯನ್ನು ಗುಣಮಟ್ಟದಲ್ಲಿ ಪಡಿತರದಾರರಿಗೆ ವಿತರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ.

Advertisement

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾಣಾ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್‌ ಕುಮಾರ್‌ ಕೊಡ್ಗಿ ಅವರು ಗುರುವಾರ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ, ನಿಯೋಗದ ಪ್ರಸ್ತಾವನೆಗೆ ಸಮ್ಮತಿಸಿ ಕರಾವಳಿ ಜಿಲ್ಲೆಗಳ ಪಡಿತರದಾರರಿಗೆ ಗುಣಮಟ್ಟದ ಕುಚಲಕ್ಕಿ ವಿತರಣೆಗೆ ಕ್ರಮ ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪಿರುವುದಾಗಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ತಿಳಿಸಿದ್ದಾರೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಡಿತರ ಚೀಟಿದಾರರಿಗೆ ಸಾರ್ವಜನಿಕ ವಿತರಣಾ ಪದ್ಧತಿ ಅಡಿ ಕುಚಲಕ್ಕಿಯನ್ನು ವಿತರಿಸಲು ಅಗತ್ಯವಿರುವ 299.33 ಕೋಟಿ ರೂ.ಗಳಷ್ಟು ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಈ ಯೋಜನೆ ಅನುಷ್ಠಾನದಿಂದ 6,21,804 ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಅನುಕೂಲವಾಗಲಿದೆ. ಕರಾವಳಿಗರ ಪರವಾಗಿ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಸ್ತುತ ಕರಾವಳಿಯ ಮೂರು ಜಿಲ್ಲೆಯ ಪಡಿತರ ಚೀಟಿದಾರರಿಗೆ ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸುವ ಅಕ್ಕಿಯ ಪ್ರಮಾಣದಲ್ಲಿ ಶೇ.50ರಷ್ಟು ಕುಚಲಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಈ ಅಕ್ಕಿಯ ಪ್ರಮಾಣವನ್ನು ಭಾರತ ಆಹಾರ ನಿಗಮದಿಂದ ಎತ್ತುವಳಿ ಮಾಡಲಾಗುತ್ತಿದೆ. ಅದರೆ ಈ ಕುಚಲಕ್ಕಿಯ ರುಚಿಯ ಗುಣಮಟ್ಟ  ಕಡಿಮೆಯಿದ್ದು, ಜನರಿಂದ ದೂರುಗಳು ಬಂದ ಕಾರಣ,  ಕುಚಲಕ್ಕಿಯನ್ನು ಭಾರತ ಆಹಾರ ನಿಗಮದಿಂದ ಎತ್ತುವಳಿ ಮಾಡದೇ ಸ್ಥಳೀಯವಾಗಿ ಸರ್ಕಾರವೇ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು ಖರೀದಿಸಿ ಅದರಿಂದ ಕುಚಲಕ್ಕಿಯನ್ನಾಗಿ ಪರಿವರ್ತಿಸಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಚೀಟಿದಾರರಿಗೆ ವಿತರಿಸಿದರೆ, ಗುಣಮಟ್ಟದ ಆಹಾರದ ಜತೆಗೆ ಸ್ಥಳೀಯ ರೈತರಿಗೂ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಯವರಿಗೆ ವಿವರಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next