ಉಡುಪಿ: ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್)ಯಡಿ ಸ್ಥಳೀಯ ಕುಚ್ಚಲಕ್ಕಿ ವಿತರಿಸಲು ಕೇಂದ್ರ ಸರಕಾರ ಅನುಮತಿ ನವೀಕರಿಸಿದ್ದರೂ ವಿತರಣೆಗೆ ಸ್ಥಳೀಯ ಕುಚ್ಚಲಿಕ್ಕಿಯೇ ಸಿಗುವುದಿಲ್ಲ.
ಉಡುಪಿ, ದಕ್ಷಿಣ ಕನ್ನಡದಲ್ಲಿ ರೈತರು ಬೆಳೆದಿರುವ (ಕುಚ್ಚಲು ಅಕ್ಕಿಯಾಗಿ ಸಬಹುದಾದ) ಭತ್ತವನ್ನು ಈಗಾಗಲೇ ಮಾರಾಟ ಮಾಡಿಯಾಗಿದೆ. ಸಂಗ್ರಹಿಸಿರುವ ಕೆಲವರು ಮಾತ್ರ ಬೆಂಬಲ ಬೆಲೆಯಡಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಉಭಯ ಜಿಲ್ಲೆಯ ಎಲ್ಲ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲೂ ಭತ್ತ ಖರೀದಿ ಕೇಂದ್ರ ತೆಗೆದಿದ್ದು, ನೋಂದಣಿ ಪ್ರಕ್ರಿಯೆ ಆರಂಭವಾಗಿ ತಿಂಗಳು ಕಳೆದಿದೆ. ಉಡುಪಿ ಜಿಲ್ಲೆಯಲ್ಲಿ 45 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡಿರುವ ನಾಲ್ವರು ರೈತರು ಫೂÅಟ್ಸ್ ತಂತ್ರಾಂಶದಲ್ಲಿ ಸೇರಿಕೊಂಡಿರದ ಕಾರಣ ಅವರಿಂದ ಖರೀದಿ ಮಾಡಲು ಸಾಧ್ಯವಿಲ್ಲ ಸ್ಥಿತಿ ನಿರ್ಮಾಣವಾಗಿದೆ.
ಭಕ್ತ ಖರೀದಿ ಕೇಂದ್ರ ದಲ್ಲಿ ಬೆಂಬಲ ಬೆಲೆಯಡಿ ಸ್ಥಳೀಯ ಭತ್ತ ನೀಡಲು ರೈತರು ನೋಂದಣಿ ಮಾಡಿಕೊಳ್ಳುವ ದಿನಾಂಕವನ್ನು ಫೆಬ್ರವರಿ ವರೆಗೂ ವಿಸ್ತರಿಸಲಾಗಿದೆ.
ಗುಣಮಟ್ಟ ಪರೀಕ್ಷೆ:
Related Articles
ಉಡುಪಿ ಜಿಲ್ಲೆಯಲ್ಲಿ ಭತ್ತ ನೀಡಲು ನೋಂದಣಿ ಮಾಡಿಕೊಂಡಿರುವ 45 ರೈತರಲ್ಲಿ ಭತ್ತದ ಗುಣಮಟ್ಟ ಪರೀಕ್ಷೆಗೆ ಸ್ಯಾಂಪಲ್ ಸಂಗ್ರಹಿಸಲಾಗುತ್ತಿದೆ. ಈವರೆಗೆ ನಾಲ್ವರು ರೈತರು ಸ್ಯಾಂಪಲ್ ನೀಡಿದ್ದಾರೆ. ಖರೀದಿ ಕೇಂದ್ರದಲ್ಲಿಯೇ ಗುಣಮಟ್ಟದ ಪರೀಕ್ಷೆಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ನಡೆಸಲಿದ್ದಾರೆ. ಪಿಡಿಎಸ್‌ನಡಿ ನೀಡಲು ಇರುವ ನಿರ್ದಿಷ್ಟ ಮಾನದಂಡದಂತೆ ಭತ್ತದ ಗುಣಮಟ್ಟ ಇದ್ದರೆ ಮಾತ್ರ ಖರೀದಿ ಮಾಡಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಯಥಾಸ್ಥಿತಿ ಮುಂದುವರಿಯಲಿದೆ:
ಉಭಯ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಪಿಡಿಎಸ್‌ನಲ್ಲಿ ಸ್ಥಳೀಯ ಕುಚ್ಚಲಕ್ಕಿ ವಿತರಿಸಲು ಬೇಕಾದಷ್ಟು ಅಕ್ಕಿ ಲಭ್ಯವಿಲ್ಲದೆ ಯಥಾಸ್ಥಿತಿ ಮುಂದುವರಿಯಲಿದೆ. ಹೊರ ರಾಜ್ಯದ ಅಕ್ಕಿಯನ್ನೇ ಮುಂದೆಯೂ ನೀಡಲಾಗುತ್ತದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸ್ಥಳೀಯ ಕುಚ್ಚಲಕ್ಕಿ ತಳಿಯ ಭತ್ತ ಬೆಳೆಯಲಾಗುತ್ತದೆ. ಅಲ್ಲಿಂದ ಖರೀದಿಗೂ ಅವಕಾಶ ಕೋರಲಾಗಿದೆ. ಅದು ಅಂತಿಮಗೊಂಡು, ಖರೀದಿ ಪ್ರಕ್ರಿಯೆ ಆರಂಭ ಮಾಡುವಾಗ ಭತ್ತದ ಕೊರತೆ ಎದುರಾಗಬಹುದು. ಹೀಗಾಗಿ ಸ್ಥಳೀಯ ಕುಚ್ಚಲಕ್ಕಿ ಈ ಬಾರಿಯೂ ಸಿಗದು.
ದರ ಹೆಚ್ಚಳ :
ಈ ವರ್ಷ ಕೇಂದ್ರ ಸರಕಾರದಿಂದ ನವೀಕೃತ ಅನುಮತಿ ಬೇಗ ಸಿಕ್ಕಿದೆ. ಆದರೆ ಖರೀದಿ ಕೇಂದ್ರ ತೆರೆಯುವಾಗ ವಿಳಂಬವಾಗಿದೆ. ಕಟಾವು ಆರಂಭವಾಗುತ್ತಿದ್ದಂತೆಯೇ ಖರೀದಿ ಕೇಂದ್ರ ತೆರೆಯಬೇಕು ಎಂಬ ಬೇಡಿಕೆ ಇದೆ. ಸ್ಥಳೀಯ ಕುಚ್ಚಲಕ್ಕಿ ವಿತರಣೆಗೆ ಪ್ರತೀ ತಿಂಗಳು ಉಭಯ ಜಿಲ್ಲೆಗೆ ಸರಾಸರಿ 1 ಲಕ್ಷ ಕ್ವಿಂಟಾಲ್ ಅಕ್ಕಿ ಬೇಕಾಗುತ್ತದೆ. ಆದರೆ ದೊಡ್ಡ ಪ್ರಮಾಣದಲ್ಲಿ ಉಭಯ ಜಿಲ್ಲೆಯಲ್ಲಿ ಭತ್ತ ಉತ್ಪದನೆಯಾಗುತ್ತಿಲ್ಲ. ಉತ್ಪಾದನೆಯಾಗುವ ಭತ್ತ ಖಾಸಗಿಯವರ ಪಾಲಾಗುತ್ತಿದೆ. ಕಾರಣ ಈ ವರ್ಷ ರೈತರಿಗೆ ಒಂದು ಕೆ.ಜಿ. ಭತ್ತಕ್ಕೆ 22ರಿಂದ 26 ರೂ.ಗಳ ವರೆಗೂ ದರ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ 45 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಅವರಿಂದ ಭತ್ತದ ಸ್ಯಾಂಪಲ್ ಸಂಗ್ರಹಿಸಿ ಗುಣಮಟ್ಟ ಪರಿಶೀಲನೆ ಮಾಡಲಿದ್ದೇವೆ. ದ.ಕ. ಜಿಲ್ಲೆಯಲ್ಲಿ ಯಾರೂ ನೋಂದಾಯಿಸಿಲ್ಲ.– ಅನುರಾಧಾ,ಜಿಲ್ಲಾ ವ್ಯವಸ್ಥಾಪಕಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ದ.ಕ./ಉಡುಪಿ