Advertisement

ಬೋಹಿಮಿಯನ್‌ ಹೊಸತನದ ಶೃಂಗಾರ 

10:48 PM Jun 21, 2019 | mahesh |

ಮನೆ ಸದಾ ಹೊಸತನದಿಂದ ಕೂಡಿರಬೇಕು ಎನ್ನುವುದು ಬಹುತೇಕರ ಕನಸು. ಆದರೆ ಮನೆಯನ್ನು ನಿರಂತರವಾಗಿ ನೀಟಾಗಿ, ನವೀನತೆಯಿಂದ ಕೂಡಿರುವಂತೆ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಆಕಸ್ಮಿಕವಾಗಿ ಅತಿಥಿಗಳು ಬಂದಾಗ ಕೆಲವೊಮ್ಮೆ ಮುಜುಗರ ಅನುಭವಿಸುವಂತಾಗುತ್ತದೆ.

Advertisement

ಇದನ್ನು ತಪ್ಪಿಸಲು ಬೋಹಿಮಿಯನ್‌ ಶೈಲಿಯನ್ನು ಬಳಸಬಹುದು. ಇದಕ್ಕಾಗಿ ನೀವು ಮೊದಲು ಮಾಡಬೇಕಾದುದು ಇಷ್ಟೇ. ದುಬಾರಿ ಲೆದರ್‌ ಸೋಫಾಗಳನ್ನು ಬದಿಗಿಟ್ಟು ಹಗುರವಾದ, ಗಟ್ಟಿಮುಟ್ಟಾದ ಮತ್ತು ಪರಿಸರ ಸ್ನೇಹಿ ಕುರ್ಚಿ, ಸೋಫಾಗಳನ್ನು ಆಯ್ಕೆ ಮಾಡಿ. ಇದು ಹೆಚ್ಚು ಆರಾಮದಾಯಕ. ಮಾತ್ರವಲ್ಲಿ ಈಗ ಟ್ರೆಂಡ್‌ ಕೂಡ ಆಗಿದೆ.

ವರ್ಣಮಯ ದಿಂಬು
ಸೋಫಾ, ಕುರ್ಚಿ ಮೇಲಿರುವ ಹಳೆಯದಾದ, ಬಣ್ಣ ಮಾಸಿರುವ ದಿಂಬನ್ನು ಬದಲಾಯಿಸಿ. ಮೆತ್ತನೆ ಹಾಗೂ ವೈವಿಧ್ಯಮಯ ಬಣ್ಣಗಳನ್ನು ಒಳಗೊಂಡ ದಿಂಬನ್ನು ಆರಿಸಿ. ಗೋಡೆಗೆ ಹೊಂದಿಕೆಯಾಗುವ ಬಣ್ಣವನ್ನೇ ಆಯ್ಕೆ ಮಾಡಿಕೊಳ್ಳಲು ಎಚ್ಚರವಹಿಸಿ.

ವೃತ್ತಾಕಾರದ ಟೇಬಲ್‌
ವೃತ್ತಾಕಾರ ಮನೆ ಅಲಂಕಾರದ ಸದ್ಯದ ಟ್ರೆಂಡ್‌. ಆದ್ದರಿಂದ ಟೇಬಲ್‌ ಆಯ್ಕೆ ಮಾಡುವಾಗ ನಿಮ್ಮ ಗಮನ ವೃತ್ತಾಕಾರದ ಮರದ ಟೇಬಲ್‌ ಕಡೆಗಿರಲಿ. ಟೇಬಲ್‌ ಮೇಲೆ ಅತಿ ಎನಿಸುವ ಆಲಂಕಾರಿಕ ವಸ್ತುಗಳನ್ನು ಜೋಡಿಸಬೇಡಿ. ಡೈನಿಂಗ್‌ ಟೇಬಲ್‌ ಮಧ್ಯದಲ್ಲಿ ಗ್ಲಾಸ್‌ ಅಳವಡಿಸಿ ಅದರೊಳಗೆ ಬಣ್ಣ ಬಣ್ಣದ ಚಿಕ್ಕ ಚಿಕ್ಕ ಕಲ್ಲುಗಳನ್ನು ತುಂಬಿದರೆ ಆಕರ್ಷಕವಾಗಿರುತ್ತದೆ.

ಮಣಿಗಳಿಂದ ಕೂಡಿದ ಕರ್ಟನ್‌
ಗೋಡೆ, ಕಲಾಕೃತಿ, ಟೇಬಲ್‌, ಕುರ್ಚಿಗಳು ಮಾತ್ರವಲ್ಲದೆ ಕರ್ಟನ್‌ಗಳೂ ಕೂಡಾ ಮನೆಯ ಅಂದವನ್ನು ಹೆಚ್ಚಿಸಬಲ್ಲವು. ಅವಗಳನ್ನು ಆಯ್ಕೆ ಮಾಡಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು. ಪ್ರಸ್ತುತ ಮಣಿಗಳಿಂದ ಕೂಡಿದ ವಿವಿಧ ರೀತಿಯ ಕರ್ಟನ್‌ಗಳು ಮಾರುಕಟ್ಟೆಯಲ್ಲಿದ್ದು, ಬೇಗ ಕೊಳೆಯಾಗದಂತಹ, ಆಕರ್ಷಕ ಬಣ್ಣದ ಪರದೆಗಳನ್ನು ಆರಿಸಿ.

Advertisement

ಆಕರ್ಷಕ ದೀಪಗಳು
ಮನೆಯ ಅಂದ ಹೆಚ್ಚಿಸಲು ದುಬಾರಿ ಬೆಲೆಯ ದೀಪಗಳ ಗೊಂಚಲುಗಳೇ ಆಗಬೇಕೆಂದಿಲ್ಲ. ಚಿಕ್ಕ ಚಿಕ್ಕ ದೀಪಗಳಲ್ಲಿ ನಿಮ್ಮ ಸೃಜನಾತ್ಮಕ ಕಲೆಯನ್ನು ಅರಳಿಸಿಬಿಟ್ಟರೆ ಸಾಕು. ಅವುಗಳು ಅತಿಥಿಗಳ ಗಮನ ಸೆಳೆಯುತ್ತವೆ. ದೇವರ ಕೋಣೆಗಳಲ್ಲಿ ಸಾಂಪ್ರದಾಯಿಕ ಶೈಲಿಯ ದೀಪಗಳನ್ನೇ ಬಳಸಿ. ಹಣತೆ, ಕಂಚಿನ ದೀಪಗಳು ನಿಮ್ಮ ಆದ್ಯತೆಯಾಗಿರಲಿ. ಲ್ಯಾಂಪ್‌, ಲಾಟೀನು ಮಾದರಿ ದೀಪಗಳನ್ನು ಕೋಣೆಗಳಲ್ಲಿ ತೂಗು ಹಾಕಿ ಮನೆಯನ್ನು ಇನ್ನಷ್ಟು ಅಂದವಾಗಿಸಬಹುದು.

ಒಟ್ಟಿನಲ್ಲಿ ವಿಭಿನ್ನವಾಗಿ, ಸೃಜನಾತ್ಮಕವಾಗಿ ಆಲೋಚಿಸುವುದರಿಂದ ಹೆಚ್ಚಿನ ಖರ್ಚಿಲ್ಲದೆ ಮನೆಯನ್ನು ಸಿಂಗರಿಸಬಹುದು. ವಸ್ತುಗಳ ಆಯ್ಕೆಯಲ್ಲಿ ಜಾಣತನ ತೋರಿದರೆ ಸಾಕು.

- ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next