Advertisement
ಇತ್ತೀಚೆಗಿನ ವರ್ಷಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ಸೇವಾ ಸೌಲಭ್ಯಗಳ ಪ್ರಗತಿಯಿಂದಾಗಿ ಮನುಷ್ಯನ ಜೀವಿತಾವಧಿಯು ಹೆಚ್ಚಿದೆ. 65 ವರ್ಷ ವಯಸ್ಸಿಗಿಂತ ಹೆಚ್ಚು ವಯೋಮಾನದವರನ್ನು ಹಿರಿಯರು ಎಂದೂ 75 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರನ್ನು ವಯೋವೃದ್ಧರು ಎಂಬುದಾಗಿಯೂ ವೈದ್ಯಕೀಯ ಸಮುದಾಯವು ಪರಿಭಾವಿಸುತ್ತದೆ. 2050ರ ವೇಳೆಗೆ ಜಾಗತಿಕವಾಗಿ ಹಿರಿಯರ ಜನಸಂಖ್ಯೆಯು 140 ಕೋಟಿಗಳಿಗೇರಲಿದೆ ಎಂಬುದಾಗಿ ಅಂದಾಜಿಸಲಾಗಿದೆ. ಅಂದರೆ ಪ್ರತೀ ನಾಲ್ವರಲ್ಲಿ ಒಬ್ಬರು 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಾಗಿರುತ್ತಾರೆ.
Related Articles
Advertisement
ಸ್ನಾಯುವಿನ ಸ್ಥಾನವನ್ನು ಕೊಬ್ಬು ಆಕ್ರಮಿಸಿಕೊಂಡಂತೆ ದೇಹದ ಸಂರಚನೆಯೂ ಬದಲಾಗುತ್ತದೆ, ಈ ವಿದ್ಯಮಾನವನ್ನು ಸರ್ಕೊಪೇನಿಯಾ ಎನ್ನಲಾಗುತ್ತದೆ. ವ್ಯಾಯಾಮ, ಅದರಲ್ಲೂ ನಿರ್ದಿಷ್ಟವಾಗಿ ತೂಕ ಎತ್ತುವ ತರಬೇತಿಯಿಂದ ಈ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು ಎಂಬುದಾಗಿ ಅಧ್ಯಯನಗಳು ಹೇಳಿವೆ. ವೃದ್ಧಾಪ್ಯದಲ್ಲಿ ದೇಹ ತೆಳುವಾದಂತೆ ಪರಿಮಾಣವೂ ಕುಸಿಯುವುದರಿಂದ ಬೇಸಲ್ ಮೆಟಬಾಲಿಕ್ ರೇಟ್ (ಬಿಎಂಆರ್) ದಶಕದಲ್ಲಿ ಶೇ.5ರಂತೆ ಕಡಿಮೆಯಾಗುತ್ತ ಹೋಗುತ್ತದೆ. ಒಟ್ಟು ಕ್ಯಾಲೊರಿ ಕುಸಿತ ಮತ್ತು ಪ್ರೊಟೀನ್ ದಾಸ್ತಾನು ಕಡಿಮೆ ಇರುವುದರಿಂದ ಗಾಯ ಅಥವಾ ಶಸ್ತ್ರಚಿಕಿತ್ಸೆಗಳಿಗೆ ದೇಹ ಸ್ಪಂದಿಸುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ದೇಹ ಪರಿಮಾಣ ಕುಸಿದಂತೆ ದೇಹದಲ್ಲಿ ದ್ರವಾಂಶವೂ ಕಡಿಮೆಯಾಗುತ್ತದೆ. ಅವಧಿಪೂರ್ವ ಮುಪ್ಪಾಗುವುದು ಮತ್ತು ವೃದ್ಧಾಪ್ಯದ ಕಾಯಿಲೆಗಳಿಂದ ಜೀವಿತಾವಧಿ ಕಡಿಮೆಯಾಗುತ್ತದೆ; ಆದರೆ ಈ ಎರಡನ್ನೂ ವ್ಯಾಯಾಮ ಮತ್ತು ಆಹಾರಾಭ್ಯಾಸಗಳ ಮೂಲಕ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಅಥವಾ ಮುಂದೂಡಬಹುದು. ಪೌಷ್ಟಿಕಾಂಶ ಕೊರತೆ, ದೀರ್ಘಕಾಲಿಕವಾದ ಆಹಾರಾಭ್ಯಾಸ ಸಂಬಂಧಿ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗಗಳು ಮತ್ತು ಕ್ಯಾನ್ಸರ್‌ಗಳನ್ನು ಪೌಷ್ಟಿಕಾಂಶ ನಿರ್ವಹಣೆಯ ಮೂಲಕ ತಡೆದು ನಮಗೆ ವಂಶವಾಹೀಯವಾಗಿ ನೀಡಲ್ಪಟ್ಟ ಪೂರ್ಣಾವಧಿಯ ಬದುಕನ್ನು ಬದುಕಲು ಅನುವು ಮಾಡಿಕೊಡಬಹುದಾಗಿದೆ. ಯುವ ಜನರಿಗೆ ಹೋಲಿಸಿದಲ್ಲಿ ಸಾಮಾನ್ಯವಾಗಿ ಹಿರಿಯರಿಗೆ ಕಡಿಮೆ ಪೌಷ್ಟಿಕಾಂಶ ಸಾಕಾಗುತ್ತದೆ. ಮನೆಯಲ್ಲಿಯೇ ಇರುವ ಅಥವಾ ಹಾಸಿಗೆಯಲ್ಲಿ ಇರುವ ವಯೋವೃದ್ಧರಿಗೆ ಬಿಸಿಲಿಗೆ ಒಡ್ಡಿಕೊಳ್ಳುವ ಅವಕಾಶ ಇರುವುದಿಲ್ಲವಾದ್ದರಿಂದ ಅವರಿಗೆ ವಿಟಮಿನ್ ಡಿ ಹೆಚ್ಚುವರಿಯಾಗಿ ಬೇಕಾಗುತ್ತದೆ.
ದೀರ್ಘಕಾಲಿಕ ಅನಾರೋಗ್ಯಗಳಿಂದ ಮುಕ್ತರಾಗಿ ಪೂರ್ಣ ಜೀವಿತಾವಧಿಯನ್ನು ಅನುಭವಿಸಲು ಅಗತ್ಯವಾದ ಪೌಷ್ಟಿಕಾಂಶ ಅಗತ್ಯಗಳೆಂದರೆ ಹೆಚ್ಚು ಶಕ್ತಿ ಮತ್ತು ಕೊಬ್ಬಿನಿಂದ ದೂರ ಉಳಿಯುವುದು. ವಯೋವೃದ್ಧರಲ್ಲಿ ಪೌಷ್ಟಿಕಾಂಶ ವಿಶ್ಲೇಷಣೆಯು ಪೌಷ್ಟಿಕಾಂಶ ಕೊರತೆಯನ್ನು ಮಾತ್ರ ಗುರುತಿಸುವ ಗುರಿ ಹೊಂದಿರುವುದಲ್ಲ; ಬದಲಾಗಿ ಹೆಚ್ಚುವರಿ ಪೌಷ್ಟಿಕಾಂಶ ಹಾಗೂ ದೀರ್ಘಕಾಲಿಕ ಆಹಾರಾಭ್ಯಾಸ ಸಂಬಂಧಿ ಕಾಯಿಲೆಗಳನ್ನು ಗುರುತಿಸುವ ಗುರಿಯನ್ನೂಹೊಂದಿರುತ್ತದೆ. ಮುಂದುವರಿಯುವುದು ಹೆನಿಟಾ ವೆನಿಸಾ ಡಿ’ಸೋಜಾ,
ಪಥ್ಯಾಹಾರ ತಜ್ಞೆ
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ.