Advertisement

ಜಿಲ್ಲಾದ್ಯಂತ ಯೋಗದ ಮೂಲಕ ದೇಹ ದಂಡನೆ

06:33 AM Jun 22, 2019 | Lakshmi GovindaRaj |

ಜಿಲ್ಲಾದ್ಯಂತ ಎಲ್ಲಿ ನೋಡಿದರೂ ಶುಕ್ರವಾರ ಯೋಗದ್ದೇ ಸದ್ದು. 5 ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಯೋಗ ಪ್ರದರ್ಶನದಲ್ಲಿ ಪುಟಾಣಿ ಮಕ್ಕಳಿಂದ ಹಿಡಿದು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ವಯೋ ವೃದ್ಧರ ಹಾದಿಯಾಗಿ ಯೋಗಾಭ್ಯಾಸದಲ್ಲಿ ಮಿಂದೆದ್ದರು.

Advertisement

ಯೋಗ ಪಟುಗಳು ವಿವಿಧ ಭಂಗಿಗಳಲ್ಲಿ ಪ್ರದರ್ಶಿಸಿದ ಯೋಗಾಸನಗಳು ಗಮನ ಸೆಳೆಯಿತು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತಿತರ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಸರ್ಕಾರಿ ಅಧಿಕಾರಿಗಳು ಯೋಗ ಪಟುಗಳು ಪಾಲ್ಗೊಂಡಿದ್ದರು. ಈ ಬಾರಿಯೂ ಯೋಗ ದಿನಕ್ಕೆ ಚುನಾಯಿತ ಜನಪ್ರತಿನಿಧಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಚಿಕ್ಕಬಳ್ಳಾಪುರ: ಸಾಮಾನ್ಯರಂತೆ ಸಾರ್ವಜನಿಕರ ಸಾಲಿನಲ್ಲಿ ಕೂತು ಡೀಸಿ, ಸಿಇಒ ಯೋಗಾಭ್ಯಾಸ. ಕಲ್ಯಾಣಿಗಳಿಗೆ ಕಳೆ ತಂದುಕೊಟ್ಟ ವಿಶ್ವ ಯೋಗದ ದಿನ. ಸಾಮೂಹಿಕ ಯೋಗ ಪ್ರದರ್ಶನಕ್ಕೆ ಜಿಲ್ಲಾದ್ಯಂತ ನಿರೀಕ್ಷೆಗೂ ಮೀರಿ ಜನಸ್ತೋಮ. ಯೋಗಭ್ಯಾಸಕ್ಕಾಗಿ ಆಟದ ಮೈದಾನಗಳಲ್ಲಿ ಬೆಳ್ಳಂ ಬೆಳಗ್ಗೆಯೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಹಿರಿಯ ನಾಗರಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳ ದಂಡು. ದೇಹ ದಂಡನೆಗೆ ಸಾಕ್ಷಿಯಾದ ವಿಶ್ವ ಯೋಗ ದಿನಾಚರಣೆ.

ಹೌದು, 5ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜಿಲ್ಲಾದ್ಯಂತ ಜಿಲ್ಲಾಡಳಿತ, ಪತಂಜಲಿ ಯೋಗ ಸಮಿತಿ, ಜಿಲ್ಲೆಯ ಶಾಲಾ, ಕಾಲೇಜುಗಳಲ್ಲಿ ಕಂಡು ಬಂದ ಈ ದೃಶ್ಯಗಳು ಭಾರತೀಯ ಸಾಂಸ್ಕೃತಿಕ ಹಿರಿಮೆಯಾದ ಯೋಗ ದಿನಾಚರಣೆಗೆ ಮೆರಗು ತಂದವು. ಸ್ವಯಂ ಪ್ರೇರಣೆಯಿಂದ ಬೆಳಗ್ಗೆಯೇ ಸಾರ್ವಜನಿಕ ಆಟದ ಮೈದಾನಗಳಲ್ಲಿ ಭರ್ತಿಯಾಗಿದ್ದ ಯೋಗ ಪಟುಗಳು ಎಂದಿನಂತೆ ಯೋಗ ಪ್ರದರ್ಶಿಸಿದರೆ, ತಮ್ಮೊಂದಿಗೆ ಇತರರನ್ನು ಕರೆ ತಂದು ಯೋಗಾಭ್ಯಾಸ ಮಾಡಿ ಗಮನ ಸೆಳೆದರು.

ಡೀಸಿ ಚಾಲನೆ: ಚಿಕ್ಕಬಳ್ಳಾಪುರ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೇಂದ್ರಿಯ ಯೋಗ ಸೇವಾ ಪ್ರಾಕೃತಿಕ ಚಿಕಿತ್ಸಾ ಅನುಸಂಧಾನ ಪರಿಷತ್‌, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಮತ್ತು ಜಿಲ್ಲಾ ಆಯುಷ್‌ ಇಲಾಖೆ, ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ನಡೆದ ಯೋಗ ದಿನಾಚರಣೆಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಚಾಲನೆ ನೀಡಿದರು.

Advertisement

ಬಳಿಕ ಸಾರ್ವಜನಿಕರ ಸಾಲಿನಲ್ಲಿ ಕೂತ ಡೀಸಿ, ಜಿಪಂ ಸಿಇಒ ಗುರುದತ್‌ ಹೆಗಡೆ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಯೋಗಾಭ್ಯಾಸದ ಮೂಲಕ ದೇಹ ದಂಡನೆ ಮಾಡಿ ಗಮನ ಸೆಳೆದರು. ಕ್ರೀಡಾಂಗಣದ ಮುಖ್ಯ ವೇದಿಕೆಯಲ್ಲಿ ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳು ವಿವಿಧ ಭಂಗಿಗಳಲ್ಲಿ ಯೋಗ ಪ್ರದರ್ಶಿಸಿ ಯೋಗ ಪಟುಗಳನ್ನು ಹುರಿದುಂಬಿಸಿದರು.

ಡೀಸಿ, ಸಿಇಒ ಜೊತೆಗೆ ಜಿಲ್ಲಾ ನಗರಾಭಿವೃದ್ಧಿ ಕೋಶಾದ ಯೋಜನಾ ನಿರ್ದೇಶಕಿ ರೇಣುಕಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗೇಶ್‌, ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸರಾದ ಡಾ.ವಿಜಯ್‌ ಕುಮಾರ್‌, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಇಂದುಮತಿ, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ನಗರಸಭೆ ಆಯುಕ್ತ ಉಮಾಕಾಂತ್‌ ಮತ್ತಿತರರು ಪಾಲ್ಗೊಂಡು ಸಾಥ್‌ ನೀಡಿದರು.

ಯೋಗದಿಂದ ಮಾನಸಿಕ, ದೈಹಿಕ ಸದೃಢತೆ: ವಿಶ್ವ ಯೋಗ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ವ್ಯಕ್ತಿಯ ಉತ್ತಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಲಿದ್ದು, ಪ್ರತಿಯೊಬ್ಬರು ದೈನಂದಿನ ಚಟುವಟಿಕೆಯಾಗಿ ಯೋಗಭ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಮನುಕುಲದ ದೆಹಿçಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಯೋಗ ಪರಿಣಾಮಕಾರಿಯಾಗಿ ಕಾರ್ಯನಿರ್ವಸುತ್ತಿದ್ದು, ಯೋಗ ಎಂಬುದು ದೇಹಕ್ಕೆ ಉತ್ತಮ ಆರೋಗ್ಯ ನೀಡುವುದರ ಜೊತೆಗೆ ಶಿಸ್ತು, ಏಕಾಗ್ರತೆಗೆ ಜ್ಞಾನ ಭಂಡಾರವಾಗಿದೆ ಎಂದರು.

ಯೋಗದ ಬಗ್ಗೆ ಜನ ಜಾಗೃತಿ: ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನದ ಬಳಿಕ ನಗರದ ಅಂಬೇಡ್ಕರ್‌ ಭವನದವರೆಗೂ ನಗರದ ಶಾಲಾ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್‌ ಹಾಗೂ ಭಾರತ್‌ ಸ್ಕೌಟ್ಸ್‌ ಆಂಡ್‌ ಗೈಡ್ಸ್‌ ವಿದ್ಯಾರ್ಥಿಗಳು ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಯೋಗದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಘೋಷಣೆಗಳ ಮೂಲಕ ಅರಿವು ಮೂಡಿಸಿದರು.

ಯೋಗಾಭ್ಯಾಸಕ್ಕೆ ಜನಪ್ರತಿನಿಧಿಗಳು ಚಕ್ಕರ್‌: ಕಾರ್ಯಕ್ರಮವನ್ನು ಉದ್ಘಾಟಿಸಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಸ್ಥಳೀಯ ಶಾಸಕರು ಮತ್ತಿತರ ಚುನಾಯಿತ ಜನಪ್ರತಿನಿಧಿಗಳು ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಯೋಗ ಸಾಧಕರಿಗೆ ಸನ್ಮಾನ: ಜಿಲ್ಲಾಡಳಿತ, ಜಿಪಂ ಹಾಗೂ ಆಯುಷ್‌ ಇಲಾಖೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ನಾಲ್ಕು ಗೋಲ್ಡನ್‌ ಬುಕ್‌ ಆಫ್ ರೇಕಾರ್ಡ್‌ ಮಾಡಿರುವ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಗಶ್ರೀಶೈಲ್‌ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ಚಿನ್ನದ ಪದಕ ಪಡೆದುಕೊಂಡಿರುವ ನವನೀತ್‌ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ತಮ್ಮ ಯೋಗದ ಪ್ರತಿಭೆ ಆನಾವರಣಗೊಳಿಸಿದರು.

ನಂತರ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ಸಿಇಒ ಗುರುದತ್‌ ಹೆಗಡೆ ಮತ್ತಿತರ ಯೋಗಪಟುಗಳಾದ ನಾಗಶ್ರೀಶೈಲ್‌, ನವನೀತ್‌ ಮತ್ತು ರಕ್ಷಿತ್‌ರನ್ನು ಸನ್ಮಾನಿಸಿದರು.

ಕಲ್ಯಾಣಿಯಲ್ಲಿ ಯೋಗಾಭ್ಯಾಸ: ಇತ್ತೀಚಿಗೆ ಜಿಲ್ಲಾಡಳಿತ ನಗರದ ವಿವಿಧೆಡೆಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳು ಬಿದ್ದು ಸ್ವಚ್ಚಗೊಳಿಸುವ ಮೂಲಕ ಕಂಗೊಳಿಸುತ್ತಿದ್ದ ಕಲ್ಯಾಣಿಗಳಲ್ಲಿ ಕೂಡ ಯೋಗದ ದಿನದಂದು ಯೋಗ ಪಟುಗಳು ಯೋಗಾಭ್ಯಾಸದ ಮೂಲಕ ಗಮನ ಸೆಳೆದರು. ನಗರದ ಎಲ್‌ಐಸಿ ಕಚೇರಿ ಎದುರುವ ಭಾರತೀನಗರ ಕಲ್ಯಾಣಿಯಲ್ಲಿ ಬೆಳಗ್ಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ 150 ಕ್ಕೂ ಹೆಚ್ಚು ಮಂದಿ ಸಾರ್ವಜನಿಕರು ಕಲ್ಯಾಣದ ಸುತ್ತ ಕೂತು ಯೋಗ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next