Advertisement

ದೇಹ ಸ್ಪಂದಿಸಿದಷ್ಟೂ ಕಾಲ ಬಾಕ್ಸಿಂಗ್‌: ಮೇರಿ ಕೋಮ್‌

07:45 AM Apr 20, 2018 | |

ಹೊಸದಿಲ್ಲಿ: ಮೇರಿ ಕೋಮ್‌ ಬಾಕ್ಸಿಂಗ್‌ನಲ್ಲಿ ಮುಂದುವರಿಯುತ್ತಾರೋ ಇಲ್ಲವೋ ಎಂಬ ಗೊಂದಲಕ್ಕೆ ಒಂದು ಹಂತದ ತೆರೆ ಬಿದ್ದಿದೆ. 5 ಬಾರಿಯ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಬಳಿಕ ವಯಸ್ಸಿನ ಸಮಸ್ಯೆಯಿಂದಾಗಿ ಬಾಕ್ಸಿಂಗ್‌ ಕಣದಿಂದ ಹೊರಗುಳಿಯುವ ಆಲೋಚನೆ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ದೇಹ ಸ್ಪಂದಿಸುವಷ್ಟು ಕಾಲ ತಾನು ಬಾಕ್ಸಿಂಗ್‌ನಲ್ಲಿ ಮುಂದುವರಿಯುವುದಾಗಿ ಮೇರಿ ಹೇಳಿದ್ದಾರೆ.

Advertisement

35ರ ಹರೆಯದ ಮೇರಿ ಕೋಮ್‌ ಗೋಲ್ಡ್‌ಕೋಸ್ಟ್‌ ಗೇಮ್ಸ್‌ನ 48 ಕೆಜಿ ಲೈಟ್‌ ಫ್ಲೈವೇಟ್‌ ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ ಚಿನ್ನಕ್ಕೆ ಕೊರಳೊಡ್ಡುವ ಮೂಲಕ ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಜಗತ್ತಿಗೆ ಸಾರಿದ್ದರು.

ವಿದಾಯದ ಬಗ್ಗೆ ಮಾತಾಡಿಲ್ಲ
“ನಾನು ವಿದಾಯ ನಿರ್ಧಾರದ ಬಗ್ಗೆ ಯಾವತ್ತಿಗೂ ಮಾತನಾಡಿಲ್ಲ. ಅವೆಲ್ಲ ಗಾಳಿಸುದ್ದಿಗಳು. ಒಲಿಂಪಿಕ್ಸ್‌ ಪದಕ ಗೆಲ್ಲುವ ಏಕಮಾತ್ರ ಗುರಿ ನನ್ನ ಮುಂದಿದೆ. ನಾನು ಲಿಂಪಿಕ್ಸ್‌ ಪದಕ ಗೆಲ್ಲುತ್ತೇನೊ, ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ನನ್ನ ಗುರಿ ಸಾಧಿಸುವ ನಿಟ್ಟಿನಲ್ಲಿ ನಾನು ಪರಿಶ್ರಮವನ್ನಂತೂ ಪಡುತ್ತಿದ್ದೇನೆ’ ಎಂದಿದ್ದಾರೆ.

“ವಯಸ್ಸು ನನ್ನ ಮಟ್ಟಿಗೆ ದೊಡ್ಡ ವಿಚಾರವೇ ಅಲ್ಲ. ಸಾಧನೆಯ ಗುರಿಯನ್ನಿಟ್ಟುಕೊಂಡಿರುವ ನಾವು ವಯಸ್ಸಿನ ಸಂಗತಿಯನ್ನು ತಲೆಯಿಂದ ಹೊರಗಿಡಬೇಕು. ದೇಹ ಸ್ಪಂದಿಸುವ ವರೆಗೂ ನಾನಂತೂ ಬಾಕ್ಸಿಂಗ್‌ನಲ್ಲಿ ಮಂದುವರಿಯುತ್ತೇನೆ’ ಎಂದು ಮೇರಿ ಕೋಮ್‌ ಹೇಳಿದ್ದಾರೆ.

“ಕಾಮನ್ವೆಲ್ತ್‌ ಗೇಮ್ಸ್‌ ಬಂಗಾರವನ್ನು ನಾನು ಸಾವಾಲಿನೆದುರಿನ ನನ್ನ ಗೆಲುವೆಂದು ಭಾವಿಸುತ್ತೇನೆ. ಈ ಗೆಲುವಿನೊಂದಿಗೆ ನಾನು ನನ್ನೆದುರಿನ ಟೀಕೆಗಳನ್ನು ಮೆಟ್ಟಿ ನಿಂತಿರುವುದಾಗಿ ನಂಬುತ್ತೇನೆ. ನನ್ನ ಅಭ್ಯಾಸದ ವಿಚಾರದಲ್ಲಿ ನಾನು ಯಾವತ್ತಿಗೂ ಮೇಲ್ಮಟ್ಟದಲ್ಲಿರುವಾಗ ನಾನು ಯಾರಿಗೂ ಸವಾಲು ಹಾಕಬಲ್ಲೆ’ ಎಂದು ಮೇರಿ ಕೋಮ್‌ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Advertisement

ವೃತ್ತಿಪರ ಕ್ರೀಡಾಪಟುವಾಗಿ, ತಾಯಿಯಾಗಿ, ಜಿಮ್‌ ಮಾಲಕಿಯಾಗಿ, ಎಂಪಿಯಾಗಿ… ಹೀಗೆ ಮೇರಿ ಕೋಮ್‌ ಬಹಳ ಬ್ಯುಸಿಯಾಗಿರುವುದರಿಂದ ಅವರು ಬಾಕ್ಸಿಂಗ್‌ ಕಣದಿಂದ ದೂರ ಸರಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ತಾನು ಸದ್ಯ ಬಾಕ್ಸಿಂಗ್‌ನಿಂದ ದೂರ ಉಳಿಯುವುದಿಲ್ಲ ಎನ್ನುವ ಮೂಲಕ ಮೇರಿ ತನ್ನ ಎದುರಾಳಿಗಳನ್ನು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next