ಜಕರ್ತಾ: ಟೇಕ್ ಆಫ್ ಆದ 5 ನಿಮಿಷದಲ್ಲೇ ನಾಪತ್ತೆಯಾದ ಇಂಡೋನೇಷ್ಯಾದ ಶ್ರೀ ವಿಜಯ ಏರ್ ಪ್ಯಾಸೆಂಜರ್ ವಿಮಾನದ ಅವಶೇಷಗಳು, ಮೃತದೇಹದ ತುಂಡುಗಳು, ಬಟ್ಟೆಗಳು ಜಾವಾ ಸಮುದ್ರದಲ್ಲಿ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
ಶನಿವಾರ ಜಕಾರ್ತಾ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ ಕೇವಲ ಐದು ನಿಮಿಷದಲ್ಲೇ ಸಂಪರ್ಕ ಕಳೆದುಕೊಂಡಿತ್ತು. ವಿಮಾನದಲ್ಲಿ ಸಿಬ್ಬಂದಿ ಸೇರಿ 62 ಮಂದಿ ಪ್ರಯಾಣಿಕರಿದ್ದರು. ಬೋಯಿಂಗ್ 737-500 ವಿಮಾನವು ಜಕಾರ್ತಾದಿಂದ ಪೋಂಟಿನಾಕ್ ಗೆ ತೆರಳುತ್ತಿತ್ತು.
ಇದನ್ನೂ ಓದಿ:ಬೀದಿಗಿಳಿದ ಅನ್ನದಾತರು : 80ರ ದಶಕದ ರೈತ ಚಳವಳಿ ನೆನಪಿಸಿದ ಟ್ರ್ಯಾಕ್ಟರ್ ಜಾಥಾ
ವಿಮಾನ ಪತನವಾದ ಸ್ಥಳದ ಬಗ್ಗೆ ಮಾಹಿತಿ ತಿಳಿದ ಬಳಿಕ ಅಧಿಕಾರಿಗಳು ಭಾರಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತದೇಹದ ಭಾಗಗಳು, ಬಟ್ಟೆ ತುಂಡುಗಳು ಮತ್ತು ಲೋಕದ ತುಣುಕುಗಳನ್ನು ಲಂಕಾಂಕ್ ದ್ವೀಪ ಮತ್ತು ಲಕಿ ದ್ವೀಪದ ನಡುವೆ ಪತ್ತೆ ಮಾಡಲಾಗಿದೆ ಎಂದು ಇಂಡೋನೇಷ್ಯಾದ ಸಾರಿಗೆ ಸಚಿವ ಬುದಿ ಕರ್ಯಾ ಸುಮಾದಿ ಹೇಳಿಕೆ ನೀಡಿದ್ದಾರೆ.
ಸಂಕೇತಗಳು ಪತ್ತೆ: ಸಮುದ್ರದಲ್ಲಿ ಪತನವಾದ ವಿಮಾನದಿಂದ ಸಂಕೇತಗಳನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಎರಡು ರೀತಿಯ ಸಂಕೇತಗಳನ್ನು ಪತ್ತೆ ಮಾಡಿದ್ದೇವೆ. ಇದು ಕಪ್ಪು ಪೆಟ್ಟಿಗೆಯಿಂದ ಬಂದಿರುವ ಸಂಕೇತವೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಇಂಡೊನೇಷ್ಯಾ ರಾಷ್ಟ್ರೀಯ ರಕ್ಷಣಾ ಕಾರ್ಯಾಚರಣೆ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.