ನವದೆಹಲಿ: ಸಿಬಿಐನ ಉಪ ಕಾನೂನು ಸಲಹೆಗಾರರೊಬ್ಬರ ಮೃತದೇಹ ದಕ್ಷಿಣ ದೆಹಲಿಯ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಬಿಐ ಲೋಧಿ ರಸ್ತೆಯ ಕಚೇರಿಯಲ್ಲಿ ಉಪ ಕಾನೂನು ಸಲಹೆಗಾರರಾಗಿ ನೇಮಕಗೊಂಡ ಜಿತೇಂದ್ರ ಕುಮಾರ್ (48) ಅವರು ಎಸ್ -22, ಟೈಪ್ -4 ಹುಡ್ಕೊ ಪ್ಲೇಸ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಬೆನಿಟಾ ಮೇರಿ ಜೈಕರ್ ಹೇಳಿದರು.ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಗೆ ಬೆಳಗ್ಗೆ 6.47ಕ್ಕೆ ಈ ಬಗ್ಗೆ ಮಾಹಿತಿ ಲಭಿಸಿದೆ.
ಕುಮಾರ್ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯವರು. ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿದ್ದು, ಕುಮಾರ್‌ರ ನಿರ್ಧಾರಕ್ಕೆ ಯಾರೂ ಜವಾಬ್ದಾರರಲ್ಲ ಎಂದು ಡಿಸಿಪಿ ಹೇಳಿದ್ದಾರೆ.
ಕುಮಾರ್ ಅವರ ಪತ್ನಿ ಜ್ಯೋತಿ ಮತ್ತು ಸಹೋದರ ರಾಜೇಂದರ್ ಕ್ರಮವಾಗಿ ಮಂಡಿ ಮತ್ತು ಚಂಡೀಗಢದಿಂದ ದೆಹಲಿ ತಲುಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಬಿಐ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಯಾವುದೇ ಅವ್ಯವಹಾರ ನಡೆದಿರುವ ಶಂಕೆ ಇಲ್ಲ, ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.