Advertisement

ದೇಹ ದಾನ

06:15 AM Feb 18, 2018 | |

ಪ್ರಪಂಚದ ಎಲ್ಲಾ ಜೀವ ರಾಶಿಗಳಲ್ಲಿ ಮನುಷ್ಯನ ಜನ್ಮ ಅತೀ ಶ್ರೇಷ್ಠವಾದುದು. ಮನುಷ್ಯನಿಗೆ ಎಲ್ಲಾ ವಿಷಯಗಳ ಬಗ್ಗೆ  ಜ್ಞಾನ, ತಿಳುವಳಿಕೆ, ಪರೋಪಕಾರದ ಮನೋಭಾವ  ಎಲ್ಲವೂ ಇವೆ. ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ಪರೋಪಕಾರ, ದಾನ ಧರ್ಮಗಳನ್ನು ಮಾಡಿ ಪುನೀತರಾಗಬೇಕಾಗಿದೆ. ಮಾನವನಿಗೆ ಹುಟ್ಟು ಮತ್ತು ಸಾವು ಎರಡೂ ಸಮಾನವಾಗಿವೆ. ಕಟುಸತ್ಯದ ವಾಡಿಕೆಯ ಮಾತೆಂದರೆ.ಮಾನವನ ಹುಟ್ಟು ಅನಿರೀಕ್ಷಿತ : ಸಾವು ನಿಶ್ಚಿತ 

Advertisement

ನಾವು ಹುಟ್ಟಿ ನಮ್ಮ ಜೀವನದಲ್ಲಿ ಎಲ್ಲಾ ಕಷ್ಟ ಸುಖಗಳನ್ನು ಅನುಭವಿಸಿ, ಕೊನೆಗೆ ಒಂದು ದಿನ ಎಲ್ಲವನ್ನೂ ಇಲ್ಲಿಯೇ ಬಿಟ್ಟು ಇಹಲೋಕ ತ್ಯಜಿಸುತ್ತೇವೆ. ಆದರೆ ಭೂಮಿಯಲ್ಲಿ ಶಾಶ್ವತವಾಗಿ, ಅವಿಸ್ಮರಣೀಯವಾಗಿ ಉಳಿಯುವುದು ನಾವು ಮಾಡಿದ ದಾನ, ಧರ್ಮ, ಪಾಪ, ಪುಣ್ಯ ಮಾತ್ರ. ನಮ್ಮ ಮೃತ ಶರೀರವು ಮಣ್ಣಲ್ಲಿ ಕೊಳೆತು ಅಥವಾ ಅಗ್ನಿಯಲ್ಲಿ  ಸುಟ್ಟು ಭಸ್ಮವಾಗಿ, ಯಾರಿಗೂ ಉಪಯೋಗವಾಗದೆ ಹೋಗುತ್ತದೆ. ಆದರೆ ನಾವು ಜೀವಿತ ಅವಧಿಯಲ್ಲಿ ಮಾಡಿದ ಸಾಧನೆ, ತ್ಯಾಗ, ಪರೋಪಕಾರ, ಸಜ್ಜನಿಕೆ, ಮಾನವೀಯ ಮೌಲ್ಯಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ನಾವು ಇಂದು ವೈಜ್ಞಾನಿಕ ಯುಗದಲ್ಲಿದ್ದೇವೆ. ಇಂದಿನ ಈ ವೈಜ್ಞಾನಿಕ ವೈದ್ಯಕೀಯ ವಿಜ್ಞಾನ ಎಷ್ಟು ಮುಂದುವರಿದಿದೆಯೋ, ಅದೇ ರೀತಿ ದಿನಕ್ಕೊಂದರಂತೆ ಹೊಸ ಕಾಯಿಲೆ ಕಸಾಲೆಗಳು ಹುಟ್ಟಿಕೊಳ್ಳುತ್ತಿವೆ. ಇಂತಹ ಹೊಸ ಹೊಸ ಕಾಯಿಲೆಗಳ ಬಗ್ಗೆ ಸಂಶೋಧನೆ ಮಾಡಿ, ಗುಣಪಡಿಸುವುದು ವೈದ್ಯರ ಆದ್ಯ ಕರ್ತವ್ಯವಾಗಿರುತ್ತದೆ.

ಮನುಷ್ಯನಿಗೆ ಯಾವೂದೇ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ, ಪ್ರಥಮವಾಗಿ ನಾವು ನೀವೆಲ್ಲರೂ ಮೊರೆ ಹೋಗುವುದು ಉತ್ತಮ ವೈದ್ಯರಲ್ಲಿ. ಅವರು ಸೂಕ್ತ ರೀತಿಯ ಸಲಹೆ, ಮಾರ್ಗದರ್ಶನ ನೀಡಿ, ನಮ್ಮ ಕಾಯಿಲೆಯನ್ನು ಗುಣ ಮಾಡುತ್ತಾರೆ. ಒಬ್ಬ ಒಳ್ಳೆಯ ವೈದ್ಯನಾಗಬೇಕಾದರೆ, ಮೊದಲಿಗೆ ಆ ವಿದ್ಯಾರ್ಥಿಯು ಅಂಗರಚನಾ ಶಾಸ್ತ್ರದ ಬಗ್ಗೆ ವ್ಯಾಸಂಗ ಮಾಡಬೇಕು.

ವೈದ್ಯಕೀಯ ವಿದ್ಯಾರ್ಥಿಗಳ ಪ್ರಥಮ ಹಂತದ ವಿದ್ಯಾಭ್ಯಾಸ ಮುಗಿದಾಕ್ಷಣ, ಅವರು ಉತ್ತಮ ವೈದ್ಯರಾಗಲು ಸಾಧ್ಯವಿಲ್ಲ. ಮುಂದಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಮಾನವ ಅಂಗರಚನಾ ಶಾಸ್ತ್ರ ವಿಭಾಗ ಹಾಗೂ ಇತರ ವಿಷಯಗಳ ಬಗ್ಗೆ ತಿಳಿಯಲು ಮಾನವ ಮೃತ ಶರೀರ ಬಹಳ ಪ್ರಮುಖವಾಗಿರುತ್ತದೆ. ಆ ಕಾರಣದಿಂದಲೇ ಪುರಾಣದಲ್ಲಿ ವೈದ್ಯರನ್ನು “”ವೈದ್ಯೋ ನಾರಾಯಣ ಹರಿ” ಎಂದು ಉಲ್ಲೇಖೀಸಲಾಗಿದೆ. ದಾನಗಳಲ್ಲಿ ಮಹಾದಾನ ದೇಹದಾನ. ನಮ್ಮ ಜೀವಿತಾವಧಿಯಲ್ಲಿ ಯಾವುದಾದರೂ ಒಂದು ಸಾಧನೆ ಮಾಡಬೇಕೆಂಬ ಧೃಡ ನಿರ್ಧಾರವನ್ನು ಮಾಡಬೇಕು. ದಾನಗಳಲ್ಲಿ ಮಹಾದಾನ ದೇಹದಾನ. ನಮ್ಮ ಜೀವಿತದ ಅನಂತರ ಪ್ರಮುಖವಾಗಿ ದಾನ ಮಾಡಲು ಸಾಧ್ಯವಾಗುವುದು, ಒಂದು ನೇತ್ರ ದಾನ ಇನ್ನೊಂದು ದೇಹದಾನ. ಇವೆರಡೂ ಕೂಡ ಅತ್ಯುನ್ನತ ದಾನಗಳಾಗಿವೆ.

ನಮಗೆ ಸಮಾಜ ಏನು ಕೊಟ್ಟಿದೆ ಎನ್ನುವ ಬದಲು, ನಾವು ಸಮಾಜಕ್ಕೆ ಏನು ಕೊಡಬಹುದು ಎಂಬ ಬಗ್ಗೆ ನಾವು ಯೋಚಿಸಬೇಕು. ನಾವು ಮೃತಪಟ್ಟ ಮೇಲೆ, ನಮ್ಮ ನೇತ್ರವನ್ನು ದಾನ ಮಾಡಿದ್ದಲ್ಲಿ, ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಬಹುದಾಗಿದೆ. ಹಾಗೆಯೇ, ನಾವು ಮೃತಪಟ್ಟ ಮೇಲೆ ನಮ್ಮ ಮೃತ ಶರೀರವನ್ನು ವೈದ್ಯಕೀಯ ವಿದ್ಯಾರ್ಜನೆಯ ಸದುದ್ದೇಶಕ್ಕೆ ದಾನ ಮಾಡಿದಲ್ಲಿ, ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿ, ಅವರು ಉತ್ತಮ ವೈದ್ಯರಾಗಲು  ಸಾಧ್ಯವಾಗುತ್ತದೆ. ಸಮಾಜಕ್ಕೆ ಒಳ್ಳೆಯದನ್ನು ಬಯಸುವ ನಾವು “”ದೇಹದಾನಂ ಮಹಾದಾನಂ” ಎಂದು ಅರಿತು, ದೇಹದಾನ ಮಾಡಲು ಮುಂದಾಗಬೇಕಾಗಿದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲ ಸಂಘ ಸಂಸ್ಥೆಗಳು, ಸಮಾಜ ಸೇವಕರು ಹಾಗೂ ಜನಪ್ರತಿನಿಧಿಗಳು ಸಕ್ರಿಯವಾಗಿ ಪಾಲುಗೊಂಡು ದೇಹದಾನದ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ.

Advertisement

ಮೃತ ಶರೀರವನ್ನು ವೈದ್ಯಕೀಯ ಸಂಸ್ಥೆಗೆ ನೀಡುವ ವಿಧಾನ
ನಮ್ಮ ಸಂಸ್ಥೆಯ ವಿಭಾಗ ಮುಖ್ಯಸ್ಥರ ಕಚೇರಿಯಿಂದ ದೇಹದಾನ ಮಾಡುವ ಎರಡು ಅರ್ಜಿ ನಮೂನೆಗಳನ್ನು ಪಡೆದು, ಆ ಅರ್ಜಿಯನ್ನು ಪೂರ್ತಿಯಾಗಿ ಭರ್ತಿಮಾಡಬೇಕು. ತಾವು ದೇಹದಾನ ಮಾಡುವ ಮೊದಲು ತಮ್ಮ ಬಂಧು – ಮಿತ್ರರಲ್ಲಿ ಕುಟುಂಬದ ಪ್ರಮುಖರಲ್ಲಿ ಈ ವಿಷಯದ ಬಗ್ಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕು. ಈ ಎರಡು ಅರ್ಜಿಗಳಲ್ಲಿ ತಮ್ಮ ಕುಟುಂಬದ ಇಬ್ಬರು ಸದಸ್ಯರ ಹಾಗೂ ಆತ್ಮೀಯ ಮಿತ್ರ ಸಾಕ್ಷಿದಾರರ ವಿಳಾಸ ಮತ್ತು ಸಹಿಗಳನ್ನು ಪಡೆದುಕೊಳ್ಳಬೇಕು. ಈ 2 ಭರ್ತಿ ಮಾಡಿದ ಅರ್ಜಿಗಳಲ್ಲಿ ಒಂದನ್ನು ತಮ್ಮ ಬಳಿಯೇ ಇಟ್ಟುಕೊಂಡು, ಇನ್ನೊಂದು ಅರ್ಜಿಯನ್ನು ಮುಖತ: ಅಥವಾ ಅಂಚೆ ಮೂಲಕ ನಮಗೆ ತಲುಪಿಸಬಹುದು. 

ದೇಹದಾನ ಮಾಡಲು ಇಚ್ಚಿಸಿದ ವ್ಯಕ್ತಿ ಮೃತಪಟ್ಟ ಕನಿಷ್ಠ ಒಂದು ಅಥವಾ ಗರಿಷ್ಠ ಆರು ಘಂಟೆಗಳ ಒಳಗಾಗಿ ಸಂಭಂದಪಟ್ಟವರು ಈ ಕೆಳಗೆ ಕಾಣಿಸಿದ ವಿಳಾಸ ಯಾ ದೂರವಾಣಿ ಸಂಖ್ಯೆಗೆ ಕರೆ ಮಾಡಿದಲ್ಲಿ ಯಾವುದೇ ಖರ್ಚು ವೆಚ್ಚಗಳಿಲ್ಲದೆ ನಾವು ದೇಹದಾನ ಪಡೆಯುವೆವು. ದೇಹದಾನ ಮಾಡಿದ ವ್ಯಕ್ತಿಯ ಶವವು ಕೆಡದಂತೆ ಸಂಸ್ಕರಿಸಿ ಇಡಲಾಗುವುದು. ಇದುವರೆಗೆ ಹಲವಾರು ಜಿಲ್ಲೆಗಳಿಂದ ಹಲವಾರು ವ್ಯಕ್ತಿಗಳು ದೇಹದಾನ ಮಾಡುವುದಾಗಿ ನಮ್ಮ ಸಂಸ್ಥೆಗೆ ಅರ್ಜಿಯನ್ನು ಭರ್ತಿ ಮಾಡಿ ನೀಡಿರುತ್ತಾರೆ. ಈ ಸತ್ಕಾರ್ಯದಲ್ಲಿ ಹಲವಾರು ಸಮಾಜ ಸೇವಕರು, ಸಂಘ ಸಂಸ್ಥೆಯವರು ಈಗಾಗಲೇ ನಮ್ಮ  ಸಂಸ್ಥೆಗೆ ಬಂದು ಮೌಖೀಕವಾಗಿ ವಿಚಾರಿಸಿರುತ್ತಾರೆ. ತಾವು ಕೂಡ ದೇಹದಾನ ಮಹಾದಾನ ಎಂಬ ನಾಣ್ಣುಡಿಗೆ ಭಾಜನರಾಗಲು ಇದು ಒಂದು ಸುವರ್ಣಾವಕಾಶ.

ವಿಭಾಗ ಮುಖ್ಯಸ್ಥರ ವಿಳಾಸ, ಸಂಪರ್ಕ ಮಾಹಿತಿ:
ಡಾ| ಸ್ನೇಹ ಜಿ ಕೆ, ವಿಭಾಗ ಮುಖ್ಯಸ್ಥರು,
ಅಂಗರಚನಾ ಶಾಸ್ತ್ರ  ವಿಭಾಗ, ಬೇಸಿಕ್‌ ಸಾಯನ್ಸ್‌ ಕಟ್ಟಡ,
ಮಣಿಪಾಲ ಬಸ್ಸು ನಿಲ್ದಾಣ ಸಮೀಪ, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ – 576 104.
ದೂರವಾಣಿ ಸಂಖ್ಯೆ : 0820-2922327 / 2922712

– ಡಾ| ಸ್ನೇಹ ಜಿ ಕೆ,
ಮುಖ್ಯಸ್ಥರು, ಅಂಗರಚನಾ ಶಾಸ್ತ್ರ  ವಿಭಾಗ, ಬೇಸಿಕ್‌ ಸಾಯನ್ಸ್‌ ಕಟ್ಟಡ,
ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next