Advertisement
ಜಿಲ್ಲೆಯಲ್ಲಿ 10 ವರ್ಷಗಳ ಹಿಂದಿನ ದಾಖಲೆಗಳನ್ನು ಪರಿಶೀಲಿಸಿದಾಗ ಸುಮಾರು 30ರಿಂದ 35 ಮಂದಿ ಮರಣದ ಅನಂತರ ತಮ್ಮ ದೇಹ ದಾನ ಮಾಡಲು ಬಯಸಿದ್ದರು. ಈಗ ಈ ಸಂಖ್ಯೆ ಮತ್ತಷ್ಟು ಹೆಚ್ಚಳ ಕಂಡಿದೆ.2020ರಲ್ಲಿ 45 ಹಾಗೂ 2021ರಲ್ಲಿ 42 ಮಂದಿ ಸ್ವಯಂಪ್ರೇರಿತರಾಗಿ ದೇಹದಾನ ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ವ್ಯಾಸಾಂಗ ಮಾಡುವ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ.
ದೇಹದಾನ ಮಾಡಲಿಚ್ಛಿಸುವ ವ್ಯಕ್ತಿಯು ಯಾವುದೇ ಸರಕಾರಿ ಅಥವಾ ಕರ್ನಾಟಕ ಸರಕಾರದ ಗೆಜೆಟ್‌ನಲ್ಲಿ ನೋಂದಾ ಯಿಸಲ್ಪಟ್ಟ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ದೇಹದಾನ ಸ್ವೀಕೃತಿಗಾಗಿ ನೋಂದಾಯಿಸಬಹುದು. ಉಡುಪಿ ಜಿಲ್ಲೆಯಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಸ್ವಯಂ ಪ್ರೇರಿತ ದೇಹದಾನಕ್ಕೆ ಸರಕಾರದ ಅನುಮತಿ ಪಡೆದಿದೆ. ಅರ್ಜಿ ಫಾರಂ ಅನ್ನು ದ್ವಿಪ್ರತಿಯಲ್ಲಿ ಭರ್ತಿಮಾಡಿ ಒಂದು ಪ್ರತಿಯನ್ನು ತಮ್ಮಲ್ಲಿರಿಸಿ ಮತ್ತೊಂದು ಪ್ರತಿ ಅಂಗರಚನಾ ಶಾಸ್ತ್ರ ವಿಭಾಗಕ್ಕೆ ನೀಡಬೇಕು. ದಾನಿಗಳು ತಮ್ಮ ಹೆಸರು, ವಿಳಾಸ, ಮೊಬೈಲ್, ದೂರವಾಣಿ ಸಂಖ್ಯೆ, ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ಲಗತ್ತಿಸಬೇಕು. ಅರ್ಜಿ ಫಾರಂನಲ್ಲಿ ದಾನಿಯ ಕುಟುಂಬದ ಸದಸ್ಯರು, ರಕ್ತಸಂಬಂಧಿಗಳು, ಸ್ನೇಹಿತರು ಅಥವಾ ನೆರೆಹೊರೆಯವರಿಂದ ನಾಲ್ಕು ಜನರ ಸಹಿ ಮಾಡಿಸಬೇಕು. ಅರ್ಜಿಯನ್ನು ಅಂಗರಚನಾ ಶಾಸ್ತ್ರ ವಿಭಾಗಕ್ಕೆ ತಲುಪಿಸ ಬೇಕು. ದೇಹದಾನಿಯ ಹೆಸರನ್ನು ನೋಂದಾಯಿಸಿ ನೋಂದಣಿ ಸಂಖ್ಯೆ ಸ್ವೀಕೃತಿ ಪತ್ರದ ಮೂಲಕ ತಿಳಿಸಲಾಗುತ್ತದೆ. ಇದಕ್ಕೆ ಕಾನೂನು ಪ್ರಮಾಣ ಪತ್ರ, ನೋಟರಿ ದೃಢೀಕರಣ ಅಥವಾ ಯಾವುದೇ ಕಾನೂನು ಅಂಶ ಇರುವುದಿಲ್ಲ.
Related Articles
ಮರಣಪೂರ್ವದಲ್ಲಿ ದೇಹದಾನಿಯಾಗುವ ಇಂಗಿತ ಕುಟುಂಬ ಸದಸ್ಯರಿಗೆ ತಿಳಿಸಿದಲ್ಲಿ ಸಂಬಂಧಿಕರು ದೇಹದಾನಿಯ ಮರಣದ ಅನಂತರ ಅಂಗರಚನಾಶಾಸ್ತ್ರ ವಿಭಾಗಕ್ಕೆ ತಿಳಿಸಬಹುದಾಗಿದೆ. ಜೀವಿತಾವಧಿ
ಸಮಯದಲ್ಲಿ ತನ್ನ ಮನಸ್ಸು ಬದಲಾಯಿಸಿದರೆ ನೋಂದಣಿ ರದ್ದುಪಡಿಸಲಾಗುತ್ತದೆ.
Advertisement
ಪ್ರಕ್ರಿಯೆ ಹೇಗೆ?ಮರಣದ ಅನಂತರ ದೇಹವನ್ನು ಸ್ಥಳಾಂತರಿಸುವ ಮತ್ತು ಸಂಸ್ಕರಣೆ ವಿಧಾನದ ಎಲ್ಲ ಶುಲ್ಕವನ್ನು ಇಲಾಖೆಯೇ ಭರಿಸುತ್ತದೆ. ಇಲಾಖೆಗೆ ತಂದ ದೇಹಗಳನ್ನು ಫಾರ್ಮಲಿನ್ ದ್ರಾವಣದಿಂದ ಸಂಸ್ಕರಿಸಿಡಲಾಗುತ್ತದೆ. ಅನಂತರ ದೇಹವನ್ನು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಅಂಗರಚನಾ ಶಾಸ್ತ್ರವನ್ನು ಕಲಿಸಲು ಉಪಯೋಗಿಸಲಾಗುತ್ತದೆ. ಪ್ರತೀ ದೇಹವನ್ನು 10ರಿಂದ 15 ವಿದ್ಯಾರ್ಥಿಗಳ ಕಲಿಕೆಗೆ ಬಳಸಲಾಗುತ್ತದೆ. ಜಾಗೃತಿ ಕಾರ್ಯಕ್ರಮ
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕಾರ್ಯಾಗಾರದ ಸಮಯದಲ್ಲಿ, ನವೀನ ಹೊಸ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಕಲಿಸಲು ಶವಗಳನ್ನು ಶಸ್ತ್ರಚಿಕಿತ್ಸೆ ಓದುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ನಡುವೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದರಿಂದಲೂ ನೋಂದಣಿ ಸಂಖ್ಯೆ ಹೆಚ್ಚಳವಾಗಿದೆ.
-ಡಾ| ಪ್ರಸನ್ನ ಎಲ್.ಸಿ.,
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಅಂಗರಚನಾಶಾಸ್ತ್ರ ವಿಭಾಗ, ಕೆಎಂಸಿ, ಮಣಿಪಾಲ -ಪುನೀತ್ ಸಾಲ್ಯಾನ್