ಚಿಕ್ಕಬಳ್ಳಾಪುರ: ಕೇವಲ ಮಹಾ ನಗರಗಳಲ್ಲಿ ಅದರಲ್ಲೂ ಸಂಚಾರಿ ಪೊಲೀಸರು ಮಾತ್ರ ಬಳಸುತ್ತಿದ್ದ ಬಾಡಿ ಕ್ಯಾಮರಾ ಇದೀಗ ಜಿಲ್ಲಾ, ತಾಲೂಕು ಹಂತಕ್ಕೂ ಬಂದು ತಲುಪಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಜಿಲ್ಲೆಯ ಪೊಲೀಸರಲ್ಲಿ ನೇತಾಡುವ ಬಾಡಿ ಕ್ಯಾಮರಾಗಳು ಕಣ್ಗಾವಲು ಇಡಲಿವೆ.
ಹೌದು, ಪೊಲೀಸ್ ಇಲಾಖೆ ಯಲ್ಲಿ ಇನ್ನಷ್ಟು ಪಾರದರ್ಶಕತೆ ತರುವ ದಿಕ್ಕಿನಲ್ಲಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗೂ ಒಂದೊಂದು ಬಾಡಿ ಕ್ಯಾಮರಾ ರವಾನಿಸಲಾಗಿದ್ದು, ಅಧಿಕಾರಿಗಳು ತಮ್ಮ ಕರ್ತವ್ಯದ ವೇಳೆ ಬಾಡಿ ಕ್ಯಾಮರಾಗಳನ್ನು ಚಾಚು ತಪ್ಪದೇ ಧರಿಸಿ ಕೆಲಸ ಮಾಡುವುದು ಕಡ್ಡಾಯವಾಗಿದೆ.
ಕರ್ತವ್ಯದ ಅವಧಿಯಲ್ಲಿ ಬಳಕೆ ಕಡ್ಡಾಯ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುವ ಪೊಲೀಸರು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಮೇಲೆ ಅನುಚಿತವಾಗಿ ವರ್ತಿಸುವುದು, ಕ್ಷುಲ್ಲಕ ಕಾರಣಗಳಿಗೆ ದೌರ್ಜನ್ಯ ನಡೆಸುವುದು ಅವಾಚ್ಯ ಶಬ್ದಗಳ ಬಳಕೆ ಮಾಡಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಆರೋಪಗಳು ಹೆಚ್ಚಾಗಿ ವರದಿ ಆಗುತ್ತಿವೆ. ಅದೇ ರೀತಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲಿರುಳು ಕೆಲಸ ಮಾಡುವ ಪೊಲೀಸರ ಮೇಲೆಯು ಸಾರ್ವಜನಿಕರು, ಕೆಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಪುಡಾರಿಗಳು ವಿಶೇಷವಾಗಿ ವಾಹನ ಸವಾರರು ವಾಹನಗಳ ತಪಾಸಣೆ ವೇಳೆ ಅಥವಾ ಇನ್ನಿತರೇ ಸಂದರ್ಭಗಳಲ್ಲಿ ಪೊಲೀಸರ ಮೇಲೆ ಏಕಾಏಕಿ ಹಲ್ಲೆ ನಡೆಸಿ ಪರಾರಿ ಆಗುವುದು ನಡೆಯುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಜನಸ್ನೇಹಿ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರಿಗೆ ಬಾಡಿ ಕ್ಯಾಮರಾಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನೀಡಲಾಗಿದೆ.
ಈ ಬಾಡಿ ಕ್ಯಾಮರಾಗಳು ಪೊಲೀಸರು ಕಡ್ಡಾಯವಾಗಿ ಭುಜಕ್ಕೆ ಸರಿಯಾಗಿ ನೇತಾಕಿ ಕೊಳ್ಳಬೇಕು, ಕೆಲಸದ ಅವಧಿಯಲ್ಲಿ ಕಡ್ಡಾವಾಗಿ ಬಳಸಬೇಕು, ಪ್ರತಿ ದಿನ ಸೆರೆಯಾಗುವ ದೃಶ್ಯಗಳನ್ನು ಭದ್ರಪಡಿಸಬೇಕೆಂದು ಸೂಚಿಸಲಾಗಿದೆ.
ಪ್ರತಿ ಠಾಣೆಗೂ ಒಂದೊಂದು ಕ್ಯಾಮರಾ: ಮೊದಲ ಹಂತದಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳಿಗೂ ತಲಾ ಒಂದೊಂದು ಬಾಡಿ ಕ್ಯಾಮರಾವನ್ನು ವಿತರಿಸಲಾಗಿದೆ. ಪ್ರತಿ ದಿನ ಅದನ್ನು ಇಲಾಖೆ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡುವ ವೇಳೆ ಧರಿಸಬೇಕು, ಪ್ರತಿ ದಿನ ಆಯಾ ದಿನದಲ್ಲಿ ಕ್ಯಾಮರಾ ಮೂಲಕ ಸೆರೆಯಾದ ದೃಶ್ಯಾವಳಿಗಳಿಗಳನ್ನು ತಪ್ಪದೇ ಒಂದು ಕಡೆ ಸಂಗ್ರಹಿಸಿ ಇಡಬೇಕೆಂದು ಕಟ್ಟನಿಟ್ಟಿನ ಸೂಚನೆಗಳನ್ನು ನೀಡಿ, ಬಾಡಿ ಕ್ಯಾಮರಾ ಕಾರ್ಯ ಚಟುವಟಿಕೆಗಳ ಕುರಿತು ಪೊಲೀಸ್ ಇಲಾಖೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಆರೋಪಿಗಳ ಬಂಧನ, ವಾಹನಗಳ ತಪಾಸಣೆ ವೇಳೆ ಕಡ್ಡಾಯವಾಗಿ ಕ್ಯಾಮರಾ ಧರಿಸಬೇಕು : ಇನ್ನೂ ವಾಹನಗಳ ತಪಾಸಣೆ ವೇಳೆ ಬಾಡಿ ಕ್ಯಾಮರಾವನ್ನು ಕಡ್ಡಾಯವಾಗಿ ಧರಿಸಿಯೆ ವಾಹನಗಳ ತಪಾಸಣೆ ನಡೆಸಬೇಕೆಂದು ಇಲಾಖೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಜೊತೆಗೆ ಯಾವುದೇ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವಾಗ ಇಲಾಖೆ ನಿಯಾವಳಿಗಳಂತೆ ಹಲವು ಮಾರ್ಗಸೂಚಿಗಳನ್ನು ಪಾಲಿಸಬೇಕಿ ರುವುದರಿಂದ ಕಡ್ಡಾಯವಾಗಿ ಪೊಲೀಸರು ಆರೋಪಿಗಳನ್ನು ಬಂಧಿಸಿದಾಗ ಬಾಡಿ ಕ್ಯಾಮರಾ ಧರಿಸರಬೇಕೆಂದು ಸೂಚಿಸಲಾಗಿದೆ.
ಎಸ್‌ಪಿ ಹೇಳಿದ್ದೇನು? : ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರ ದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಡಿಜಿ ರವರು ಸುತ್ತೋಲೆಯಂತೆ ಜಿಲ್ಲೆಯ ಪ್ರತಿ ಠಾಣೆಗೂ ಒಂದೊಂದು ಬಾಡಿ ಕ್ಯಾಮರಾ ವನ್ನು ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ಯಾಮರಾಗಳನ್ನು ತರಿಸಿಕೊಂಡು ಪೂರೈಕೆ ಮಾಡಲಾಗುವುದು. ವಾಹನಗಳ ತಪಾಸಣೆ ವೇಳೆ ಹಾಗೂ ಆರೋಪಿಗಳ ಬಂಧನದ ವೇಳೆ ಬಾಡಿ ಕ್ಯಾಮರಾ ಕಡ್ಡಾಯವಾಗಿ ಹಾಕಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ಶುಕ್ರವಾರ ಉದಯವಾಣಿಗೆ ತಿಳಿಸಿದರು.
– ಕಾಗತಿ ನಾಗರಾಜಪ್ಪ