Advertisement

ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಮೀನುಗಾರರು ಸಜ್ಜು

04:06 PM Jun 21, 2020 | sudhir |

ಮಲ್ಪೆ: ಮಳೆಗಾಲದಲ್ಲಿ ಎರಡು ತಿಂಗಳು ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿರುವುದರಿಂದ ಮಂಗಳೂರು, ಉಡುಪಿ ಮತ್ತು ಉ.ಕನ್ನಡ ಜಿಲ್ಲೆಯ ಮೀನುಗಾರರು ಸಾಂಪ್ರದಾಯಿಕ ನಾಡದೋಣಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸಹಕಾರಿ ತತ್ವದಡಿ ನಡೆಯುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಮೀನುಗಾರರು ಸಜ್ಜಾಗುತ್ತಿದ್ದಾರೆ. ಯಾಂತ್ರಿಕೃತ ಮೀನುಗಾರಿಕೆ ಮುಗಿದ ಬೆನ್ನಲ್ಲೆ ಎರಡು ತಿಂಗಳ ಕಾಲ 10ಅಶ್ವಶಕ್ತಿ ಸಾಮರ್ಥ್ಯದ ಎಂಜಿನ್‌ ಬಳಸಿ ಮೀನುಗಾರಿಕೆ ನಡೆಸಲು ನಾಡದೋಣಿ ಮೀನುಗಾರರಿಗೆ ಅವಕಾಶವಿರುತ್ತದೆ.

Advertisement

ವಿವಿಧಡೆ ದಾರ ಪ್ರಕ್ರಿಯೆ:
ನಾಡದೋಣಿ ಕಡಲಿಗಿಳಿಯುವ ಮುನ್ನ ಆರಂಭಿಕವಾಗಿ ದಾರ ಪ್ರಕ್ರಿಯೆಗಳು ನಡೆಯುತ್ತಿರುವುದು ಕರಾವಳಿಯ ತೀರದ ವಿವಿಧ ಪ್ರದೇಶದಲ್ಲಿ ಕಂಡುಬರುತ್ತಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಮೀನುಗಾರಿಕೆ ಋತು ಕೊನೆಗೊಂಡ ಬಳಿಕ ಮೀನುಗಾರಿಕೆಗೆ ಬಳಸಿದ ಬಲೆಗಳನ್ನು ವಿಭಜಿಸಿ ಸಂಗ್ರಹಿಸಿಡಲಾಗುತ್ತದೆ. ಈ ಋತುವಿನಲ್ಲಿ ಮಳೆಗಾಲ ಆರಂಭಗೊಂಡ ಬಳಿಕ ಕಳೆದ ವರ್ಷ ಸಂಗ್ರಹಿಸಿಟ್ಟ ಬಲೆಗಳನ್ನು ಆಯಕಟ್ಟಿನ ಜಾಗಕ್ಕೆ ತಂದು ಸಾಮೂಹಿಕವಾಗಿ ನಿಗದಿಪಡಿಸಿದ ದಿನದಂದು ಎಲ್ಲರು ಒಟ್ಟಾಗಿ ಬಲೆಗಳನ್ನು ಪೋಣಿಸುವ ಪ್ರಕ್ರಿಯೆ ನಡೆಯುತ್ತದೆ.

ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೋಟರಿಕೃತ ಮತ್ತು ಸಾಂಪ್ರದಾಯಿಕ ದೋಣಿಗಳು 16000ಕ್ಕೂ ಅಧಿಕವಿದೆ.
ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಬೆಂಗ್ರೆವರೆಗೆ ಸುಮಾರು 32 ಮಾಟುಬಲೆ ಗುಂಪುಗಳಿವೆ. ಪ್ರತಿಯೊಂದು ಸುಮಾರು 30ರಿಂದ 40 ಮಂದಿ ಮೀನುಗಾರರು ಇರುತ್ತಾರೆ. ಸುಮಾರು 450 ಟ್ರಾಲ್‌ದೋಣಿಗಳು, ಹೊಳೆಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಬೀಸುಬಲೆ, ಕಂತುಬಲೆ, ಜೆಪ್ಪುಬಲೆ 350ಕ್ಕೂ ಅಧಿಕ ಇವೆ. 10-15 ಕೈರಂಪಣಿಗಳಿವೆ.

ಹೆಚ್ಚುವರಿ ಸೀಮೆಎಣ್ಣೆಗೆ ಆಗ್ರಹ:
ಸರಕಾರ ನಾಡದೋಣಿಗಳಿಗೆ ತಿಂಗಳವಾರು 300ಲೀಟರ್‌ನಂತೆ ಸೀಮೆಎಣ್ಣೆ ನೀಡುತ್ತಿದೆ. ಆದರೆ ಕಳೆದ 7 ವರ್ಷದಿಂದ ಹೊಸ ಎಂಜಿನ್‌ಗಳಿಗೆ ಮಾತ್ರ ಸೀಮೆಎಣ್ಣೆ ಬಿಡುಗಡೆಯಾಗುತ್ತಿಲ್ಲ. ಸುಮಾರು 3000ಕ್ಕೂ ಅಧಿಕ ಹೊಸ ಔಟ್‌ಬೋರ್ಡ್‌ ಎಂಜಿನನ್ನು ಖರೀದಿಸಿದ್ದ ಮೀನುಗಾರರಿಗೆ ಸೀಮೆಎಣ್ಣೆಯ ಕೊರತೆ ಕಾಡಿದೆ. ಸರಕಾರ ತತ್‌ಕ್ಷಣ ಹೆಚ್ಚುವರಿ ಸೀಮೆಎಣ್ಣೆಯನ್ನು ಬಿಡುಗಡೆಗೊಳಿಸುವಂತೆ ನಾಡದೋಣಿ ಮೀನುಗಾರರು ಆಗ್ರಹಿಸಿದ್ದಾರೆ. ಜತೆಗೆ ಔಟ್‌ಬೋರ್ಡ್‌ ಎಂಜಿನ್‌ಗೆ ನೀಡುತ್ತಿರುವ ಸಬ್ಸಿಡಿಯನ್ನು 2017ಹಿಂದಿನ ಮತ್ತು ಅನಂತರದ ಅವಧಿಯಲ್ಲಿನ ಒಟ್ಟು 461 ದೋಣಿಗಳಿಗೆ ಕೊಡಲು ಬಾಕಿ ಇವೆ. ಕೆಲವೊಂದು ವರ್ಗದ ನಾಡದೋಣಿಗಳು ವರ್ಷದ 12ತಿಂಗಳೂ ಮೀನುಗಾರಿಕೆಯಲ್ಲಿ ನಿರತವಾಗಿರುತ್ತದೆ. ಆದರೆ ಸರಕಾರ ನಾಡದೋಣಿಗಳಿಗೆ 9 ತಿಂಗಳ ಸೀಮೆಎಣ್ಣೆ ಮಾತ್ರ ನೀಡುತ್ತಿದೆ. ಕನಿಷ್ಠ 10ತಿಂಗಳ ಸೀಮೆಎಣ್ಣೆ ನೀಡಬೇಕೆಂಬ ಬೇಡಿಕೆಯೂ ಇದೆ.

ಹೊಸ ಔಟ್‌ಬೋರ್ಡ್‌ ಎಂಜಿನ್‌ಗಳಿಗೆ ಕಳೆದ 7ವರ್ಷದಿಂದ ಹೆಚ್ಚುವರಿ ಸೀಮೆ ಎಣ್ಣೆ ಸಿಗುತ್ತಿಲ್ಲ. ಮತ್ತು 2017 ಹಿಂದಿನ ಮತ್ತು ಆನಂತರದ ಅವಧಿಯ ದೋಣಿಗಳ ಸಬ್ಸಿಡಿಯನ್ನೂ ಸರಕಾರ ಬಾಕಿ ಇಟ್ಟಿವೆ. ಈ ಬಗ್ಗೆ ಮೀನುಗಾರಿಕೆ ಸಚಿವರ ಗಮನಕ್ಕೆ ತರಲಾಗಿದೆ. ವಿಶೇಷ ಅನುದಾನದಲ್ಲಿ ದೊರಕಿಸಿಕೊಡುವ ಭರವಸೆಯನ್ನು ನೀಡಿದ್ದಾರೆ.
– ಗೋಪಾಲ್‌ ಆರ್‌.ಕೆ., ಪ್ರ.ಕಾರ್ಯದರ್ಶಿ,
ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀ. ಪ್ರಾ. ವಿ.ಸಹಕಾರಿ ಸಂಘ,

Advertisement

ಜೂ. 22: ಸಾಮೂಹಿಕ ಪ್ರಾರ್ಥನೆ
ಜೂ. 22 ಸೋಮವಾರ ಬೆಣ್ಣೆಕುದ್ರು ಕುಲಮಹಾಸ್ತಿ ಅಮ್ಮನಿಗೆ ಗಣಹೋಮ, ವಡಭಾಂಡ ಬಲರಾಮ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಸಾದವನ್ನು ಗಂಗಾಮಾತೆಗೆ ಅರ್ಪಿಸಲಾಗುತ್ತದೆ. ನಾಡದೋಣಿ ಮೀನುಗಾರರು ಆವತ್ತಿನಿಂದ ಸಮುದ್ರದ ವಾತಾವರಣವನ್ನು ನೋಡಿಕೊಂಡು ಯಾವಾಗ ಬೇಕಾದರೂ ಕಡಲಿಗೆ ಇಳಿಯಬಹುದು.
-ಜನಾರ್ದನ ತಿಂಗಳಾಯ, ಅಧ್ಯಕ್ಷರು.
ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next